ಸೂರ್ಯನು ಧನು ರಾಶಿಯಲ್ಲಿರುವಾಗ ಯಾವನು ಪರಮಾತ್ಮನನ್ನು ಪೂಜಿಸಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ನಿವೇದಿಸುತ್ತಾನೋ; ಅವನ ಒಂದು ದಿನದ ಪೂಜೆಯಿಂದ 1000 ವರ್ಷಗಳ ಪೂಜೆಯು ಸಿದ್ಧಿಸುತ್ತದೆ.
ಲಕ್ಸ್ಮೀಪತಿಯು ಧನುರ್ಮಾಸದಲ್ಲಿ ಹುಗ್ಗಿಯ ನೈವೇದ್ಯವನ್ನು ಮಾಡಿದರೆ ಸಂತೋಷ ಪಡುವಂತೆ ಇನ್ನಾವುದರಿಂದಲೂ ಸಂತೋಷ ಪಡುವುದಿಲ್ಲ.
ವ್ರತ, ತಪಸ್ಸು, ದಾನ ಇತ್ಯಾದಿ ಯಾವುದರಿಂದಲೂ ಶ್ರೀಹರಿಗೆ ಮುದ್ಗಾನ ನಿವೇದನೆಯಿಂದ ಆಗುವಷ್ಟು ಪ್ರೀತಿಯು ಉಂಟಾಗುವುದಿಲ್ಲ.
ಸೂರ್ಯನು ದನು ರಾಶಿಯಲ್ಲಿದ್ದಾಗ ಶು೦ಠಿ ಸಹಿತವಾದ ಹುಗ್ಗಿಯನ್ನು ಶ್ರೀ ಹರಿಗೆ ಸಮರ್ಪಿಸಬೇಕು.
ಇಂಥಹಾ ಭಕ್ತನು ಶತ್ರುಗಳನ್ನು ಕ್ಷಣದಲ್ಲಿ ಜಯಿಸುತ್ತಾನೆ.
ಮೊಸರು - ಶು೦ಠಿ ಸಹಿತವಾದ ಹುಗ್ಗಿಯನ್ನು ಯಾವನು ಧನುರ್ಮಾಸದಲ್ಲಿ ಶ್ರೀ ಹರಿಗೆ ಸಮರ್ಪಿಸುತ್ತಾನೋ ಅವನು ದೀರ್ಘಾಯುಷ್ಮಂತನೋ, ಧನಾಢ್ಯನೂ, ವೇದ ಪಾರಂಗತನೂ ಆಗುತ್ತಾನೆ.
ಶು೦ಠಿ ಸಹಿತವಾದ ಹುಗ್ಗಿಯನ್ನು ಅಚ್ಯುತನಿಗೆ ಸಮರ್ಪಿಸುವವನಿಗೆ ಗಂಗಾ ಸ್ನಾನಾದಿಗಳಿಂದ, ಇತರ ಜಪಗಳಿಂದ; ಯಾಗಗಳಿಂದ ಏನೂ ಉಪಯೋಗವಿಲ್ಲ.
ಅವನಿಗೆ ಆಯುಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಬಯಸಿದ ವಸ್ತುಗಳು ಈ ಧನುರ್ಮಾಸ ಪೂಜೆಯಿಂದ ಕೂಡಲೇ ಸಿದ್ಧಿಸುತ್ತವೆ.
ಹಿಂದೆ ಶ್ರೀ ಇಂದ್ರ ಪತ್ನಿಯಾದ ಪತಿವ್ರತೆಯಾದ ಶಚಿಯು ದುಃಖವನ್ನು ಪಡೆದಳು.
ಅವಳ ಪತಿಯು ರಾಜ್ಯ ಭ್ರಂಶಾದಿಗಳನ್ನು ಹೊಂದಿದ್ದರಿಂದ ಅವಳಿಗೆ ಅತೀವ ದುಃಖ ಉಂಟಾಯಿತು.
ಆಗ ಶಚಿಯು ಧನುರ್ಮಾಸದಲ್ಲಿ ಹಿಂದೆ ಹೇಳಿದಂತೆ ಶ್ರೀ ಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ನಿತ್ಯೈಶ್ವರ್ಯವನ್ನು ಪಡೆದಳು.
ಮುಂದೆ ಹೇಳತಕ್ಕಂತಹಾ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಾವಳಿಯನ್ನು 12 ಭಾರಿ ಜಪಿಸಿ ದನುರ್ಮಾಸದಲ್ಲಿ ಬೆಲ್ಲ ಮತ್ತು ಮುದ್ಗಾನ್ನವನ್ನು ಶ್ರೀ ಲಕ್ಷ್ಮೀ ನಾರಾಯಣರಿಗೆ ಸಮರ್ಪಿಸಬೇಕು. ಶ್ರೀ ಮಹಾಲಕ್ಷ್ಮೀಯನ್ನು ಪೂಜಿಸಬೇಕು.
ಧನುರ್ಮಾಸದಲ್ಲಿ ಅರ್ಥ ಪ್ರಾಪ್ತಿಗಾಗಿ ಈ ರೀತಿಯ ಪೂಜೆ ಮಾಡಿದರೆ ಕೂಡಲೇ ಶ್ರೀ ಮಹಾಲಕ್ಷ್ಮೀಯ ಕೃಪಾ ಕಟಾಕ್ಷದಿಂದ ಅಕ್ಷಯವಾದ ಧನವನ್ನು ಪಡೆಯುತ್ತಾನೆ.
ಶ್ರೀದೇವಿ - ಅಮೃತೋದ್ಭವ - ಕಮಲಾ - ಲೋಕಸುಂದರೀ - ವಿಷ್ಣುಪತ್ನೀ - ಶ್ರೀ ವೈಷ್ಣವೀ - ವರಾರೋಹ - ಹರಿವಲ್ಲಭೆ - ಶಾಜ್ಞ್ಗಣಿ - ದೇವದೇವಿಕಾ - ಮಹಾಲಕ್ಷ್ಮೀ - ಭಾರ್ಗವೀ. ಇವೇ ಮೊದಲಾದ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಗಳು.
ಶ್ರೀ - ಪದ್ಮಾ - ಕಮಲಾ - ಮುಕುಂದ ಮಹಿಷೀ - ಲಕ್ಷ್ಮೀ - ತ್ರಿಲೋಕೇಶ್ವರೀ - ಮಾ - ಕ್ಷೀರಾಬ್ಧಿಸುತೆ - ಅರವಿಂದ ಜನನೀ - ವಿದ್ಯಾ - ಸರೋಜಾತ್ಮಿಕಾ - ಸರ್ವಾಭೀಷ್ಟ ಫಲಪ್ರದಾ ಎಂಬ ಈ ಹನ್ನೆರಡು ಶ್ರೀ ಲಕ್ಷ್ಮೀ ನಾಮಾವಳಿಯನ್ನು ಅತ್ಯಂತ ಶುದ್ಧರಾಗಿ ಯಾರು ಪಠಿಸುತ್ತಾರೋ ಅವರು ಎಲ್ಲಾ ಮಂಗಳವನ್ನು ಪಡೆಯುತ್ತಾರೆ.
ಇದು ಭದ್ರ ಲಕ್ಷ್ಮೀ ಸ್ತೋತ್ರ.
ಇದು ಯಾವಗಾಲೂ ಪುಣ್ಯಪ್ರದವಾದುದು ಮತ್ತು ಸಕಲ ಮಂಗಲಪ್ರದವಾದುದು. ತುಲಾ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿ ಅನಂತರ ಶ್ರೀ ವೃಕ್ಷ ( ಬಿಲ್ವ ) ಸನ್ನಿಧಿಯಲ್ಲಿ ಈ ಸ್ತೋತ್ರವನ್ನು ಜಪಿಸಬೇಕೆಂದು ಶ್ರೀ ನಾರದ ಮಹರ್ಷಿಗಳು ಧರ್ಮರಾಜನಿಗೆ ಹೇಳಿದ್ದಾರೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ