" ಧನುರ್ಮಾಸ - ಒಂದು ಚಿಂತನೆ "
" ದಿನಾಂಕ :17.12.2024 ಮಂಗಳವಾರ - 13.01.2025 ಸೋಮವಾರದ ವರೆಗೆ ಧನುರ್ಮಾಸ "
ಧನುರ್ಮಾಸದ ವಿಷಯದಲ್ಲಿ....
" ಆಗ್ನೇಯ ಪುರಾಣ " ದ 52ನೆಯ ಅಧ್ಯಾಯದಲ್ಲಿ ಹೀಗೆ ಹೇಳಿದೆ......
ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯನ್ನು ಅರ್ಚಿಸಿದರೆ ಅವನು ಸಂಪ್ರೀತನಾದ ಭಕ್ತರಿಗೆ ಅಕ್ಷಯವಾದ ಅಭೀಷ್ಟಗಳನ್ನು ಕೊಡುತ್ತಾನೆ ಈ ವಿಷಯವು ಸತ್ಯ.
" ಆಗ್ನೇಯ ಪುರಾಣೇ ದ್ವಿಪಂಚಾಶದಧ್ಯಾಯೇ "...
ತಥಾ ತತ್ರೈವ ಧನುರ್ಮಾಸ
ವಿಷಯೇ ದ್ವಿಪಂಚಾಶದಧ್ಯಾಯೇ..
ಧನುರ್ಮಾಸೇ ಹರಿಃ ಪ್ರೀತ
ಉಷಃ ಕಾಲಾರ್ಚನೇ ಧ್ರುವಮ್ ।
ದದಾತ್ಯಾಭೀಷ್ಟಮಕ್ಷಯಂ
ಸತ್ಯಮೇವ ಬ್ರವೀಮಿ ತೇ ।।
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು.
ಶ್ರೀ ಹರಿಯನ್ನು ಚೆನ್ನಾಗಿ ಪೂಜಿಸಬೇಕು.
ಮೊಸರು ಮತ್ತು ಹೆಸರು ಬೇಳೆಯ ಹುಗ್ಗಿಯನ್ನು ಶ್ರೀ ಜನಾರ್ದನನಿಗೆ ಸಮರ್ಪಿಸಬೇಕು.
ಉಷಃ ಕಾಲೇ ಧನುರ್ಮಾಸೇ
ಸ್ನಾತ್ವಾ ಸಮ್ಯಗ್ ಜನಾರ್ದನಮ್ ।
ಸಮಭ್ಯರ್ಚ್ಯ ಚ ಮುದ್ಗಾನ್ನಂ
ದಧ್ನಾ ಸಹ ನಿವೇದಯ ।।
ಯಥಾ ಶಕ್ತಿ ಪ್ರಾತಃ ಕಾಲದಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು.
ಇದರಿಂದ ಭಕ್ತನು ಇಹದಲ್ಲಿ ಸಕಲ ಭೋಗಗಳನ್ನು ಅನುಭವಿಸಿ ಅನಂತರ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಹೊಂದುವನು.
ಭೋಜ್ಯ ದ್ವಿಜವರ್ಯಾಂಶ್ಚ
ಪ್ರಾತಃ ಕಾಲೇ ಯಥಾ ಬಲಮ್ ।
ಭುಕ್ತ್ವೇಹ ಸಕಲಾನ್ ಭೋಗಾನ್
ಪ್ರಾಪ್ಸ್ಯೆಸೇ ವೈಷ್ಣವಂ ಪದಮ್ ।।
" ಧನುರ್ಮಾಸದ ವೈಶಿಷ್ಟ್ಯ "
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ; ಪರಮಾತ್ಮನನ್ನು ಪೂಜಿಸಿ; ಮೊಸರು - ಶು೦ಠಿ ಇವುಗಳಿಂದ ಮನೋಹರವಾದ; ತುಪ್ಪ - ಸಕ್ಕರೆ - ಯಾಲಕ್ಕಿಗಳಿಂದ ಯುಕ್ತವಾದ; ನೆಲ್ಲೀಕಾಯಿ - ಗಡ್ಡೆಗಳಿಂದ ಕೂಡಿದ ಹುಗ್ಗಿಯನ್ನು ದೇವರಿಗೆ ಸಮರ್ಪಿಸಬೇಕು.
ಜ್ಞಾನಿಯಾದವನು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು.
ಹೀಗೆ ಮಾಡಿದವನು ಯಾವ ಇಷ್ಟಾರ್ಥಗಳನ್ನು ಬಯಸುತ್ತಾನೋ ದುರ್ಲಭವಾಗಿದ್ದರೂ ಅವೆಲ್ಲವನ್ನೂ ಪಡೆಯುತ್ತಾನೆ.
ಮುಂದೆ ಅವನು ಯೋಗಿಯಾಗಿ; ಜ್ಞಾನಿಯಾಗಿ; ಐಶ್ವರ್ಯವಂತನಾಗಿ ಜನ್ಮ ಜನ್ಮಾಂತರಗಳಲ್ಲಿಯೂ ವೈಷ್ಣವನಾಗಿ ಹುಟ್ಟುತ್ತಾನೆ.
" ಆಗ್ನೇಯ ಪುರಾಣದಲ್ಲಿ ಧನುರ್ಮಾಸ ಪೂಜೆ ಮಾಡದಿದ್ದರೆ ದೋಷ " ಹೇಳಿದ್ದಾರೆ.
ಆಕರಣೇ ಪ್ರತ್ಯವಾಯ ಉಕ್ತಃ ತತ್ರೈವ -
ಉಷಃ ಪೂಜಾಂ ಧನುರ್ಮಾಸೇ
ಯೋ ನ ಕುರ್ವೀತ ವೈಷ್ಣವೀಮ್ ।
ಸಪ್ತ ಜನ್ಮ ಸು ರಿಕ್ತಃ ಸ್ಯಾತ್
ಕ್ಷಯ ರೋಗೀ ಚ ಮೂಢಧೀಃ ।।
ಯಾವನು ಧನುರ್ಮಾಸದಲ್ಲಿ ಶ್ರೀಮನ್ನಾರಾಯಣನಿಗೆ ಉಷಃ ಕಾಲದ ಪೂಜೆಯನ್ನು ಮಾಡುವುದಿಲ್ಲವೋ ಆ ಮೂರ್ಖನು ಏಳು ಜನ್ಮಗಳಲ್ಲಿ ಬಡವನಾಗುತ್ತನೆ ಮತ್ತು ಕ್ಷಯ ರೋಗಿಯಾಗಿಯೂ ಹುಟ್ಟುತ್ತಾನೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ