ಪರಮಾತ್ಮನ ಪರಮಾಪ್ತರು ಶ್ರೀಕನಕದಾಸರು

varthajala
0

 ಪರಮಾತ್ಮನ ಪರಮಾಪ್ತರು ಶ್ರೀಕನಕದಾಸರು

(ನವೆಂಬರ್ 18, ಕನಕದಾಸರ ಜಯಂತಿ ಪ್ರಯುಕ್ತ ಈ ಲೇಖನ)


#Kanakadasa jayanthi 

ಹರಿದಾಸರು ಕೇವಲ ತಮ್ಮ ಆತ್ಮೋದ್ಧಾರವನ್ನು ಮಾಡಿಕೊಳ್ಳಲಿಲ್ಲ. ಗೆಜ್ಜೆ ಕಟ್ಟಿದರು. ಲಜ್ಜೆ ಬಿಟ್ಟರು. ತಂಬೂರಿ ಮೀಟಿದರು. ಭವಾಬ್ಧಿ ದಾಟಿದರು. ಮನುಕುಲದ ಮನಸ್ಸನ್ನು ತಮ್ಮ ಕೃತಿಗಳಿಂದ ಸಂಸ್ಕರಣ ಮಾಡಿದರು. ಅಂತರಂಗದ ಕದವನ್ನು ತೆರೆದು ಭಗವಂತನ ಚಿಂತನೆ ಮಾಡುವಲ್ಲಿ ಸಿದ್ಧಮಾಡಿದರು. ಮನಸ್ಸನ್ನು ತಿದ್ದಿತೀಡಿದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುತ್ತಾ ವಿವೇಕದ ತೀರ್ಥವನ್ನು ನೀಡಿದರು. 

ದಾಸಸಾಹಿತ್ಯ ಕೇವಲ ಒಂದು ವರ್ಗದವರಿಗಾಗಿಯೇ ಅಲ್ಲ, ಕೆಲವರಿಗಾಗಿಯೇ ಅಲ್ಲ, ಇಡೀ ಸಮಾಜಕ್ಕೇ ಅದು ದಾರಿದೀಪವಾಗಿದೆ. ದಾಸರ ಹಾಡುಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಸ್ವಾಗತಾರ್ಹವೇ. ಹರಿದಾಸರು ಸಮಷ್ಟಿ ಪ್ರಜ್ಞೆಯಿಂದ ಕೆಲಸ ಮಾಡಿದವರು. ಅಂತರಂಗದ ದನಿಯಿಂದ ಬಂದ ಸಾಲುಗಳು ನೇರ ಹೃದಯಕ್ಕೆ ನಾಟುವವು. ಶುದ್ಧ ಅಂತಃಕರಣದಿಂದ ಮೂಡಿದ ಸಾಮಾಜಿಕ ಕಳಕಳಿಯ ಸಾಹಿತ್ಯ, ಅಂಧಶ್ರದ್ಧೆ ಮೂಢನಂಬಿಕೆಗಳನ್ನು, ಕಂದಾಚಾರಗಳನ್ನು ಪ್ರತಿಭಟಿಸುವ 

ಧಾರ್ಷ್ಟ್ಯ ಹಾಗೂ ವಿಶಾಲ ಮನೋಧರ್ಮದಿಂದಾಗಿ ದಾಸಸಾಹಿತ್ಯ ಸರ್ವಜನಾದರಣೀಯ ಸಾಹಿತ್ಯವಾಯಿತು. 

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರು ಕೊಟ್ಟ ದಾಸಸಾಹಿತ್ಯದ ಸ್ಥಾನ ಅತ್ಯಂತ ವಿಶಿಷ್ಟವಾದುದು.

 ಜನಮಾನಸದಲ್ಲಿ ಸಾಹಿತ್ಯಪ್ರಜ್ಞೆಯನ್ನು ಕಲಾತ್ಮಕತೆ ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿ, ಕರ್ನಾಟಕದ ಸಾಂಸ್ಕೃತಿಕ ಸಾಧನೆಗಳ ದೃಷ್ಟಿಯಿಂದ ದಾಸಸಾಹಿತ್ಯದ ಕೊಡುಗೆ ಅಪಾರವಾದುದು. ಶತ ಶತಮಾನಗಳ ಕಾಲ ಕನ್ನಡ ಜನತೆಗೆ, ಭಕ್ತಿ ಸೂತ್ರಗಳನ್ನು, ನಾದಾನುಭೂತಿಯನ್ನು ಸಾಹಿತ್ಯದ ಸಂಸ್ಕಾರವನ್ನು ಸಾಮಾಜಿಕ ಕಳಕಳಿಯನ್ನು ಧನ್ಯತೆಯನ್ನು ತಂದುಕೊಟ್ಟ ಸಾಹಿತ್ಯ ದಾಸಸಾಹಿತ್ಯ.


ಬಾಡದ ಕೇಶವನಿಂದ ಅನುಗ್ರಹಿತರು

ಬಚ್ಚಪ್ಪ ಹಾಗೂ ಬೀರಮ್ಮ ದಂಪತಿಗಳು ಪುತ್ರ ಸಂತಾನಕ್ಕಾಗಿ ಶ್ರೀನಿವಾಸನ ಸೇವೆ ಅನನ್ಯವಾಗಿ ಮಾಡಿದ್ದರ ಫಲಪ್ರಸಾದದ ರೂಪವೇ ತಿಮ್ಮಪ್ಪ ನಾಮಧೇಯದಿಂದ ಕನಕದಾಸರೆಂಬ ಕನಕಚಿಂತಾಮಣಿಯ ಜನನವಾದದ್ದು. ಹುಟ್ಟಿದ್ದು ಬಾಡ ಗ್ರಾಮ. ಬಂಕಾಪುರದ ಢಣಾಯಕರಾಗಿದ್ದವರು. ವಿಜಯನಗರದ ಅರಸರ ಕಾಲದಲ್ಲಿದ್ದವರು. ಒಮ್ಮೆ ಅಗಾಧವಾದ ಕನಕನಿಧಿ ದೊರೆತಾಗ ಕನಕನಾಯಕರಾಗಿ ಕರೆಸಿಕೊಂಡರು. ಮುಂದೆ ಆ ನಿಧಿಯ ಸಂಪತ್ತನ್ನು ಕೇಶವನ ದೇವಾಲಯ ನಿರ್ಮಾಣಕ್ಕಾಗಿ ವೆಚ್ಚ ಮಾಡಿದರು. ದಿನನಿತ್ಯ ಸ್ವಪ್ನದಲ್ಲಿ ‘ದಾಸನಾಗೋ ವಿಶೇಷನಾಗೋ’ ಎಂಬ ಧ್ವನಿಯನ್ನು ಕೇಳುತ್ತಿದ್ದವರು. ದಾಸನೇಕೆ ಆಗಬೇಕು ಎನ್ನುವ ಮನಸ್ಸೊಂದು ಕಡೆ. ಭಗವಂತನ ಮನಸ್ಸಿಗೆ ಉದ್ಧಾರ ಮಾಡಬೇಕೆಂದು ಬಂದರೆ ಮುಗಿಯಿತು. ರಣರಂಗದಲ್ಲಿ ಒಮ್ಮೆ ಶಸ್ತಾçಸ್ತçಗಳ ಪೆಟ್ಟಿನಿಂದ ನೆಲಕ್ಕೆ ಕುಸಿದು ಬಿದ್ದಾಗ, ಮತ್ತದೇ ಆಕಾಶವಾಣಿ. ಆಗ ಕನಕನಾಯಕರು ಈಗಲೋ ಇನ್ನಾವಗಲೋ ಈ ಜೀವ ಹೋಕ್ತಿದೆ ಅನ್ನುವಂತಾಗಿದೆ. ನೀನು ನನ್ನ ದಾಸನಾಗು ಎಂಬ ದೇವಧ್ವನಿ ಮತ್ತೆ ಕೇಳುತ್ತಿದೆಯಲ್ಲ ಎಂದು ಕೊಂಡಾಗ, ಕನಕನಾಯಕರು ಮೊದಲು ನನ್ನಲ್ಲಿ ಚೈತನ್ಯ ಕೊಡು ಎಂದು ಕೇಳಿದರು. ಭಗವಂತನ ಅನುಗ್ರಹ ಆಯಿತು. ನಾನೇ ಎನ್ನುವ ಭಾವ ಹೋಯಿತು. ಅವನೇ ಎಲ್ಲ ಎಂಬ ಸತ್ಯದ ಅರಿವಾಯಿತು. ಮುಂದೆ ಕಂದಕೂರು ಗ್ರಾಮದಲ್ಲಿ ಜನರ ನೀರಿನ ಬವಣೆ ನಿವಾರಣೆಗಾಗಿ ಕೆರೆ ನಿರ್ಮಾಣದ ಕಾರ್ಯ ಸಾಗುತ್ತಿತ್ತು. ಅದಕ್ಕೆ ಜನರೆಲ್ಲ ‘ವ್ಯಾಸಸಮುದ್ರ’ ಎಂದೇ ಕರೆದರು. ಆ ಕೆರೆಯ ತೂಬಿಗೆ ಅಡ್ಡಲಾದ ತೂಬು ಏನು ಪ್ರಯತ್ನ ಮಾಡಿದರೂ ಸರಿಸಲು ಆಗಿರಲಿಲ್ಲ. ಆ ಸಮಯದಲ್ಲಿ ಕರಿಗಂಬಳಿಯನ್ನು ಹೊದ್ದು ಬಂದ ಕನಕನಾಯಕರು ಬುದ್ಧಿ ಬುದ್ಧಿ ಎನ್ನುತ್ತಾ ಶ್ರೀವ್ಯಾಸರಾಯರನ್ನ ನೋಡಿ “ನನ್ನೊಡೆಯಾ ಇವತ್ತು ನಿಮ್ಮ ದರ್ಶನ ಭಾಗ್ಯ ಸಿಕ್ಕಿತು” ನಾನು ಬಾಡದಿಂದ ಬಂದಿರುವ ಕನಕ. ನಿಮ್ಮ ಅನುಗ್ರಹ ಆಗಬೇಕು ಎಂದು ಪ್ರಾರ್ಥಿಸಿದರು. ಏನು ಕನಕ ಈ ವೇಷದಲ್ಲಿ ಎಂದರು. ಆಗ ಕನಕನಾಯಕರು ‘ದಾಸನಾಗೋ ವಿಶೇಷನಾಗೋ ಎಂದು ಪದೇ ಪದೇ ಹೇಳಿದರೂ ಕಿವಿಗೊಡದ ನನ್ನನ್ನು ಕೇಶವ ಬಿಟ್ಟಾನೆಯೇ? ಶವದಂತಿದ್ದ ನನ್ನನ್ನು ಕೈಹಿಡಿದೆಬ್ಬಿಸಿ ಉದ್ಧರಿಸಿದವ ನನ್ನ ಕೇಶವ ಎಂದರು. ಇನ್ನು ನೀವು ದಾರಿ ತೋರಬೇಕು ನನ್ನೊಡೆಯಾ ಎಂದರು. ಶ್ರೀವ್ಯಾಸರಾಜರ ಅನುಗ್ರಹವೂ ದೊರೆಯಿತು. ಕೋಣನ ಮಂತ್ರವನ್ನು ಉಪದೇಶಿಸಿದರು, ಶ್ರದ್ಧೆಯಿಂದ ಆ ಮಂತ್ರವನ್ನು ಉಚ್ಚರಿಸಿದಾಗ ಧುತ್ತನೆ ಬೃಹತ್ ಗಾತ್ರದ ಕೋಣ ಒಂದು ಪ್ರತ್ಯಕ್ಷವಾಗಿ ಕೆರೆಗೆ ಅಡ್ಡಲಾಗಿದ್ದ ತೂಬನ್ನು ಕ್ಷಣ ಮಾತ್ರದಲ್ಲಿ ಸರಿಸಿ ಮಾಯವಾಯಿತು. ಅಂದಿನಿಂದ ವ್ಯಾಸಸಮುದ್ರದ ಆ ತೂಬಿಗೆ ‘ಕನಕನತೂಬು’ ಎಂದೇ ಪ್ರಸಿದ್ಧವಾಯಿತು. 

ಶ್ರೀ ವ್ಯಾಸರಾಯರ ಅನುಗ್ರಹವಾಯಿತು. ಆಗಿನಿಂದ ಕನಕನಾಯಕರು ಕನಕದಾಸರಾದರು. ಕಾಗಿನೆಲೆಯಾದಿಕೇಶವ ಎಂಬ ಅಂಕಿತವೂ ಪ್ರಾಪ್ತಿಯಾಯತು. ಆಗ ವ್ಯಾಸರಾಯರು ಕನಕದಾಸರಿಗೆ, ಇಂದು ನೀವು ಸ್ವೀಕರಿಸುವ ಹರಿದಾಸದೀಕ್ಷೆ ಬರಲಿರುವ ದಿನಗಳ ಮಂಗಳದ ಮುಂಬೆಳಗು. ಎಂದೆಂದಿಗೂ ಅಜರಾಮರವಾಗಿ ಉಳಿಯಬಲ್ಲ ಅಪೂರ್ವ ಹಾಡುಗಳನ್ನು, ದೇವರನಾಮಗಳನ್ನು ಹೇಳುತ್ತಾ ಭಕ್ತಿಯುಗದ ನವ ನಿರ್ಮಾಪಕರಾಗುವ ನೀವು ಕಲ್ಮಷ ಕಳೆಯುವಿರಿ. ಸಾತ್ವಿಕ ಸಜ್ಜನಿಕೆಯ ಬೆಳೆಯನ್ನು ಬೆಳೆಯುವಿರಿ. ಪರಮಾತ್ಮನಿಗೆ ಪ್ರಿಯರಾದ ನಿಮಗಾಗಿ ಇತಿಹಾಸ ಕಾಯುತ್ತಿತ್ತು. ಇಂದು ಆ ಶುಭದಿನ ಬಂದಿದೆ. ಮುಂದೊಂದು ದಿನ ಇತಿಹಾಸವೇ ಎದ್ದು ನಿಂತು ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡಲಿದೆ.  

ಹೋಗಿ ಬನ್ನಿ, ನಿಮಗೆ ಮಂಗಳವಾಗಲಿ, ಶುಭವಾಗಲಿ" ಎಂದು ಮನತುಂಬಿ ಗುರುಗಳಾದ ವ್ಯಾಸರಾಜರು ಕನಕದಾಸರನ್ನು ಹರಸಿದರು.

ವ್ಯಾಸಮುನಿರಾಯ ಸನ್ಯಾಸಕುಲ ರತುನ ಮನ, ದಾಸೆ ಸಲಿಸುತ ಸಲಹು ದಾಸನನು ಗುರುವೇ॥, ಹೀನಕುಲದಲಿ ಬಂದು ಜನಿಸಿದವ ನಾನಯ್ಯ, ಏನೊಂದು ಅರಿಯದಿಹ ಮೂಢಮನುಜ, ಜ್ಞಾನಿಗಳ ಸಹವಾಸ ಮೊದಲಿಲ್ಲವೆನಗಿನ್ನು , ಮೌನಿಕುಲವರ್ಯ ಮನ್ನಿಸುತೆನ್ನ ಸಲಹಯ್ಯ, ಈ ಧರೆಯೊಳೀಗ ಕುರುಬರ ಕುಲದಿ ಜನಿಸಿದೆನು, ಓದಿದವ ನಾನಲ್ಲ ಶಾಸ್ತ್ರಗಳನ್ನು, ಪಾದಕಮಲವ ನಂಬಿ ಪ್ರಾರ್ಥಿಸುವ ಬಹುಮೂಢ, ನಾದೆನ್ನ ಕೈ ಬಿಡದೆ ಸಲಹು ಸೇವಕನ ಎನ್ನುತ್ತಾರೆ.ಕನಕದಾಸರ ಮೇಲೆ ವ್ಯಾಸರಾಜರು ಎಷ್ಟು ಅಭಿಮಾನ ಮಾಡಿದ್ದರು ಎನ್ನುವುದನ್ನು ಪುರಂದರದಾಸರು ತಮ್ಮದೊಂದು ಹಾಡಿನಲ್ಲಿ ಸ್ಪಷ್ಟಪಡಿಸಿ, ಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿ ಮಠದ ಜನರೆಲ್ಲಾ ದೂರಿಕೊಂಬುವರೋ” ಎಂದು ಸಾರಿದ್ದಾರೆ. ದೈವೀ ಪ್ರಭಾವ ಬಂಕಾಪುರದ ಢಣಾಯಕರಾಗಿ ದಕ್ಷರಾಗಿದ್ದ, ಧೀಮಂತರಾಗಿದ್ದ ಕನಕನಾಯಕರು ರಾಜಕಾರಣ, ಸೈನ್ಯ, ಯುದ್ಧ, ವೀರಾವೇಶಗಳಲ್ಲಿ ಮುಳುಗಿದ್ದ ಕನಕದಾಸರು ಇತಿಹಾಸವೇ ಎದ್ದು ನಿಂತು ಸಾಷ್ಟಾಂಗ ನಮಸ್ಕಾರ ಮಾಡಿದ ಐತಿಹಾಸಿಕ ಸಾಧನೆಯ ಶ್ರೇಷ್ಠ ಹರಿದಾಸರಾಗಿ ಪರಿವರ್ತಿತರಾದರು. ಹಳ್ಳಿಹಳ್ಳಿಯ ಆ ಬಡಜನರ ಮುಗ್ಧ ಪ್ರೀತಿಯಲ್ಲಿ ಕನಕದಾಸರು ಉದ್ಧಾರದ ಮಾರ್ಗ ಕಂಡರು. ಅಲ್ಲಿ ದೈವಿಕ ಪ್ರೇಮದ ಸವಿಯನ್ನು ಕಂಡರು. ಆಡಂಬರ ಅಟ್ಟಹಾಸ, ಅಲಂಕಾರ, ಅಹಂಕಾರಗಳ ಸಂಪೂರ್ಣ ಪರಿಚಯವಿದ್ದ ಕನಕದಾಸರಿಗೆ, ಅವೆಲ್ಲವನ್ನು ಬಿಟ್ಟು ಬಂದಾಗ, ಮೆರವಣಿಗೆ ಉರವಣಿಗೆಯ ವಿಜೃಂಭಣೆಗಳನ್ನು ಬಿಟ್ಟು ಬಡಜನರ ಗುಡಿಸಿಲಿನ ಕಡೆಗೆ ನಡೆದರು. ನಾಡಿನ ಹಳ್ಳಿಯ ಒಂದೊಂದು ಗುಡಿಸಿಲಿನಲ್ಲೂ ಪ್ರೀತಿಯ ದೀಪ ಹಚ್ಚಿದರು. ಕನಕದಾಸರು ಅಗ್ನದಿವ್ಯದಂತೆ ಎದ್ದು ಬಂದವರು. ಅವರು ದೀನದಲಿತರಿಗೆ ಸ್ಪಂದಿಸಿದ, ಮಾನವೀಯತೆಗೆ ತಮ್ಮನ್ನು ಸಮರ್ಪಿಸಿಕೊಂಡು ಮನುಕುಲಕ್ಕೆ ದೈವತ್ವವನ್ನು ತೋರಿಸಿಕೊಟ್ಟ ಮಹಾ ದಾರ್ಶನಿಕರು. ಹಳ್ಳಿಹಳ್ಳಿಯಲ್ಲೂ ಜನತೆ ಪ್ರೀತಿಯಿಂದ ಕನಕದಾಸರನ್ನು, ಅವರ ಹಾಡುಗಳನ್ನು ಬರಮಾಡಿಕೊಂಡರು. ಅವರ ಸಂದೇಶವನ್ನು ಸ್ವೀಕರಿಸುತ್ತಲೇ ಅವರಲ್ಲಿ ಅಖಂಡವಾದ ಪ್ರೀತಿಯ ಧಾರೆಯ ಪ್ರವಾಹವನ್ನೇ ಜನಸಾಮಾನ್ಯರು ಹರಿಸಿದರು. ಹಾಗಾಗಿ ಕನಕದಾಸರು ಕಳೆದ ಐದು ಶತಮಾನಗಳಿಂದ ಕನ್ನಡ ಜನಸಾಮಾನ್ಯ ಸಂಸ್ಕೃತಿ, ಸಾಹಿತ್ಯ ಪರಂಪರೆಯ ಅತ್ಯಂತ ಮಹತ್ವದ ಭಾಗವಾಗಿ ಉಳಿದುಹೋದರು. ಅಷ್ಟೇ ಅಲ್ಲ, ತಮ್ಮ ಹೃದಯ ಭಾಷೆಯಿಂದ ನೀಡಿದ ಸಂದೇಶಗಳ ಮೂಲಕ ಸಾಮಾನ್ಯ ಜನರ ಆತ್ಮಶಕ್ತಿಯನ್ನು ಬೆಳೆಸುತ್ತಲೇ, ಸಾಹಿತ್ಯ ಸಂಸ್ಕೃತಿಗಳ ಹೊಸ ಸಮಾಜವೊಂದರ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದರು.

ಶ್ರೀವ್ಯಾಸರಾಜರು ಸಮಾಜಕ್ಕೆ ಕೊಟ್ಟ ಬಹು ದೊಡ್ಡ ಕೊಡುಗೆ ಶ್ರೀಕನಕದಾಸರು

ಸಹಜವಾಗಿ ಗುರುಶಿಷ್ಯವಾತ್ಸಲ್ಯವಿರುತ್ತಿದ್ದ ಕಾಲವದು. ಕನಕರಲ್ಲಿ ಅತ್ಯಂತ ಪ್ರೀತಿ ತೋರುತ್ತಿದದನ್ನು ಗಮನಿಸಿದ ಕೆಲವು ಕುಹಕಿಗಳಿಗೆ ಇದು ಜೀರ್ಣವಗುತ್ತಿರಲಿಲ್ಲ. ಶ್ರೀಮಠದಲ್ಲಿ ಕನಕದಾಸರು ಅವರ ಅತಿ ಅದರದ ಶಿಷ್ಯರಾಗಿ ಬಂದದ್ದು, ವ್ಯಾಸರಾಜರ ಪೂರ್ಣ ಪ್ರೀತಿಗೆ ಅವರು ಪಾತ್ರರಾದದ್ದು ಅಲ್ಲಿದ್ದ ಕೆಲವರಿಗೆ ಅಸೂಯೆಯನ್ನು ತಂದಿತ್ತು. ಈ ಹಿನ್ನೆಲೆಯಲ್ಲಿ ಕನಕದಾಸರ ಶಾಸ್ತ್ರಜ್ಞಾನದ ಅದ್ಭುತ ಸಾಧನೆಗಳನ್ನು ತಮ್ಮ ಉಳಿದ ಶಿಷ್ಯರಿಗೆ ಹಾಗೂ ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಸದುದ್ದೇಶದಿಂದ ವ್ಯಾಸರಾಜರು ನಡೆಸಿದ ಪರೀಕ್ಷೆಗಳನ್ನು ಕುರಿತ ಐತಿಹ್ಯಗಳು ಸ್ವಾರಸ್ಯಕರವಾಗಿವೆ. ಬಹಳಷ್ಟು ಪ್ರಸಂಗಗಳಲ್ಲಿ ಇದೂ ಒಂದಾಗಿದೆ. ಬಾಳೆಹಣ್ಣಿನ ಪ್ರಸಂಗ : ಒಮ್ಮೆ ವ್ಯಾಸರಾಜರು ಎಲ್ಲ ಶಿಷ್ಯರಿಗೂ ಬಾಳೆಹಣ್ಣು ಕೊಟ್ಟು 'ಯಾರೂ ನೋಡದ' ರಹಸ್ಯಸ್ಥಳದಲ್ಲಿ ಇದನ್ನು ತಿಂದು, ನಾಳೆ ನನಗೆ ಎಲ್ಲಿ ತಿಂದರೆಂಬ ವಿಷಯ ತಿಳಿಸಿ ಎಂದು ಆದೇಶ ನೀಡಿದರು. ಮರುದಿನ ಒಬ್ಬೊಬ್ಬ ಶಿಷ್ಯರೂ ಬಂದು, ಯಾರೂ ಇಲ್ಲದ ಆ ಸ್ಥಳದಲ್ಲಿ ತಾವು ಹಣ್ಣು ತಿಂದು ಮುಗಿಸಿದೆವೆಂದು ಹೆಮ್ಮೆಯಿಂದ ಹೇಳಿದರು. ಕನಕದಾಸರ ಸರದಿ ಬಂದಾಗ, ಸ್ವಾಮಿ ನಾನು ತಿನ್ನಲಿಲ್ಲ. 'ಗುರುಗಳ ಮಾತನ್ನು ಪಾಲಿಸಬೇಕೆಂದು ಅನಿಸಲಿಲ್ಲವೇ ಕನಕ' 'ಸ್ವಾಮಿ ತಮ್ಮ ಮಾತನ್ನು ಪರಿಪಾಲಿಸುವ ಸಲುವಾಗಿಯೇ ನಾನು ತಿನ್ನಲಿಲ್ಲ. ತಾವೇ ಹೇಳಿದ್ದಿರಿ. ಪರಮಾತ್ಮ ನೋಡದ ಸ್ಥಳವಿಲ್ಲ. ಅಣುರೇಣುತೃಣಕಾಷ್ಟ್ರಗಳಲ್ಲಿ ಅಡಗಿದ್ದು, ಎಲ್ಲರನ್ನೂ, ಎಲ್ಲವನ್ನೂ, ಯಾವಾಗಲೂ ನೋಡುತ್ತಿರುತ್ತಾನೆ. ಆಪ್ತನಾಗಿ ಗೋಚರಿಸುತ್ತಾನೆ. ಗೋಪ್ತನಾಗಿ ಒಳಗಿದ್ದಾನೆ. ನಂಬಿದವರಿಗೆ ಪ್ರಾಪ್ತನಾಗುತ್ತಾನೆ.' ಕನಕರ ಈ ಮಾತು ಶಾಸ್ತ್ರಜ್ಞಾನ ಬರೀ ಅಧ್ಯಯನಕ್ಕೆ ಮಾತ್ರ ಅಲ್ಲ, ಬದುಕಿನ ಸರ್ವಸ್ವಕ್ಕೂ ಅದು ಅನ್ವಯವಾದಾಗಲೇ ಆ ಜ್ಞಾನದ ಸಾರ್ಥಕತೆ, ಜ್ಞಾನ ಕೇವಲ ತಿಳಿದುಕೊಳ್ಳುವುದಷ್ಟಕ್ಕೇ ಅಲ್ಲ. ಅದನ್ನು ಅರಗಿಸಿಕೊಳ್ಳಬೇಕು. ಬದುಕಿನ ಪ್ರತಿಕ್ಷಣದಲ್ಲೂ ಅದನ್ನು ಅನುಷ್ಠಾನಕ್ಕೆ ತರಬೇಕು ಎಂಬ ತತ್ವವನ್ನು ಕನಕದಾಸರು ಹಾಗೂ ವ್ಯಾಸರಾಜರು ಈ ನಿದರ್ಶನದ ಮೂಲಕ ಎಲ್ಲರಿಗೂ ತೋರಿಸಿಕೊಟ್ಟರು.

ಮುಂಡಿಗೆ ಪ್ರವೀಣರು 

ಮಂಡೆಗೆ ಕೆಲಸ ನೀಡುವ, ಒಗಟಿನಂತಿರು ಕನಕದಾಸರ ಅದ್ಭುತ ರಚನೆ ಮುಂಡಿಗೆಗಳು ಬಹಳ ಪ್ರಸಿದ್ಧ. ಮುಂಡಿಗೆ ಮಂಡನ ಮಾರ್ತಾಂಡ ಕನಕದಾಸರು ಕನಕದಾಸರ ವಿಶಿಷ್ಟ ಕೊಡುಗೆ ಮುಂಡಿಗೆಗಳು ಭಾವನೆ ಹಾಗೂ ಬುದ್ಧಿಶಕ್ತಿ ಇವರೆಡೂ ಕಾಲದಿಂದಲೂ ಮನುಷ್ಯರನ್ನು ನಡೆಸಿಕೊಂಡು ಬಂದಿವೆ. ತನ್ನ ಜಾಣತನವನ್ನು ಉಳಿದವರೆದುರು ತೋರಿಸುತ್ತಲೇ ಚುರುಕಾಗಿ, ವಿದ್ವತ್ತೂರ್ಣವಾಗಿ, ಮಂಡೆಬಿಸಿ ಮಾಡುವ ಭವಗಳನ್ನು ಮುಂಡಿಗೆಯಾಗಿ, ಬೇರೆಯವರ ಬುದ್ದಿಶಕ್ತಿಗೆ ಸವಾಲೆಸೆಯುವ ಸಾಧನವಾಗಿ ಬೆಳೆದುಬಂದವು. ಕನಕದಾಸರ ಒಂದು ಮುಂಡಿಗೆ ನೋಡುವುದಾದರೆ, ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನ ಚಂದದಿ ಪಡೆದನನಂದನೆಯಳ ನಲ ವಿಂದ ಧರಿಸಿದ ಮುಕುಂದನಿಗೆ- ಅಂಧಕ – ಧೃತರಾಷ್ಟ್ರ, ಅನುಜ - ಪಾಂಡು, ಕಂದನ - ಧರ್ಮರಾಯ, ತಂದೆ -ಯಮಧರ್ಮ, ಕೊಂದನ – ಈಶ್ವರ, ಶಿರದಲಿ ನಿಂದವನ - ಚಂದ್ರನ, ಚಂದದಿಪಡೆದನ ಸಮುದ್ರ, ನಂದನೆಯ - ಲಕ್ಷ್ಮಿ ನಲವಿಂದಧರಿಸಿದ ಮುಕುಂದ – ವಿಷ್ಣು.ರಥವನಡರಿ ಸುರಪಥದಿ ತಿರುಗುವ ಸುತನಿಗೆ ಶಾಪವನಿತ್ತವನ ಖತಿಯನು ಪಡೆದನ ಸತಿಯ ಜನನಿಸುತಸತಿಯರನಾಳಿದ ಚತುರನಿಗೆ-ರಥವನಡರಿ- ಸೂರ್ಯ, ಸುತನಿಗೆ- ಕರ್ಣ, ಶಾಪವನ್ನಿತ್ತವನ - ಪರಶುರಾಮ, ಖತಿಯನು ಪಡೆದನ - ರಾಮನ, ಸತಿಯ - ಸೀತೆ, ಜನನಿ - ಭೂದೇವಿ, ಸುತ -ನರಕಾಸುರ, ಸತಿಯರನು ಗೋಪಸ್ತ್ರೀಯರು, ಚತುರ ಕೃಷ್ಣ.ಹರಿಯಮಗನ ಶಿರತರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ ಭರದಿ ಭಜಿಸಿದನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವಗೆ ಇಂತಹ ಹಲವು ತತ್ವಾರ್ಥ, ಗೂಢಾರ್ಥಗಳನ್ನೊಳಗೊಂಡ ಕನಕದಾಸರ ಮುಂಡಿಗೆಗಳೂ ಪ್ರಸಿದ್ಧವಾಗಿವೆ. ಅವುಗಳಿಂದಾಗಿಯೇ `ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ’ ಎಂಬ ಮಾತು ಚಾಲ್ತಿಗೆ ಬರುವಂತಾಗಿದೆ.

ಗ್ರಾಮೀಣಭಾಷೆಯ ಸೊಗಡು ತಮ್ಮ ಸರಳವಾದ ಸಹಜವಾದ ಹದವಾದ ಮುದನೀಡುವ ಸತ್ಯನಿಷ್ಠ ಸಾಹಿತ್ಯದ ಕನ್ನಡ ಹಾಡುಗಳ ಮೂಲಕ ಬೇರೊಂದು ಬಗೆಯ ಲೋಕವನ್ನೇ ಜನರ ಕಣ್ಮುಂದೆ ತಂದು ನಿಲ್ಲಿಸಿದರು. ಆ ಕಾಲದ ಜನರಿಗೆ ಕನಕದಾಸರು ನಡೆದಾಡುವ ದೈವವಾಗಿದ್ದರು. ಜನಮಾನಸದಲ್ಲಿ, ಅತ್ಯಂತ ನಿರಕ್ಷಕಕುಕ್ಷಿಗಳಲ್ಲಿ ಶತಶತಮಾನಗಳಾದ ಮೇಲೂ ಶಾಶ್ವತವಾಗಿ ಉಳಿಯಬಲ್ಲ ಸಾಹಿತಿಗಳು ಬಹಳ ಅಪರೂಪ. ಅಂತಹ ಅಪರೂಪದ ಸಾಧಕ ಸಾಹಿತಿಗಳಲ್ಲಿ, ಕವಿಗಳಲ್ಲಿ ಕನಕದಾಸರು ಅಗ್ರಗಣ್ಯರಾಗುತ್ತಾರೆ. ಇಂದಿಗೂ ಧಾರವಾಡ ಪ್ರಾಂತದ ಹಳ್ಳಿಹಳ್ಳಿಗಳಲ್ಲಿ, ಜೋಳದ ಹೊಲಗಳಲ್ಲಿ ಕೆಲಸ ಮಾಡುವ, ಅಕ್ಷರಜ್ಞಾನವೇ ಇಲ್ಲದ ಹುಡುಗರು, ಹೆಂಗಳೆಯರು ಹೇಳುವ ಹಾಡುಗಳೇ ಇದಕ್ಕೆ ಸಾಕ್ಷಿಯಾಗಿವೆ.``ಹರೆಯ ಹೊತ್ತಿನ ಕನಸ ಹಡೆದವ್ವ ನೀಕೇಳ, ಹೆಗಲ ಮ್ಯಾಲವನ ಗೊಂಗಾಡಿ| ಬಾಡದಸಿರಿಕನಕದಾಸ ಬಂದಿದ್ದ ಸಪನಾಗ|

ಸಾಮಾನ್ಯ ಜನರಲ್ಲಿ ಜ್ಞಾನದ ದೀಪವನ್ನು ಹಚ್ಚುವ ಅಕ್ಷರ ಸಾಧಕರಾಗಿ ಪ್ರಚಂಡ ಉತ್ಸಾಹದಿಂದ ಕನ್ನಡ ನಾಡಿನ ಎಲ್ಲೆಡೆಯೂ ಮಿಂಚಿನಂತೆ ಓಡಾಡಿದ ಕನಕದಾಸರು ಜ್ಞಾನ ಭಕ್ತಿ ವೈರಾಗ್ಯಗಳ ತ್ರಿವೇಣಿ ಸಂಗಮವಾಗಿ ಬೆಳಗಿದರು. ನಿಂದಾಸ್ತುತಿಗಳನ್ನು ತಾಳಿದರು. ಇಂದ್ರಿಯಗಳನ್ನು ಕಟ್ಟಿ ಆಳಿದರು. ಬದುಕಿದರೆ ಹೀಗೆ ಬದುಕಬೇಕು ಎನ್ನುವಂತೆ ಬಾಳಿದರು.  


ಹೀಗೆ ಭಗವಂತನ ಸಂಕಲ್ಪ ದಂತೆ ಕನಕದಾಸರು ಶ್ರೀವ್ಯಾಸರಾಯರ ಪರಮಾನುಗ್ರಹದಿಂದ ಭಕ್ತಿಸಾಹಿತ್ಯದ ಮೇರುಶಿಖರವೆನಿಸಿದವರು.


 ಕೊನೆಗಾಲದಲ್ಲಿ ಕನಕದಾಸರು ಬೇಲೂರಿಗೆ ತೆರಳಿ ವೈಕುಂಠದಾಸರ ಮನೆಯಲ್ಲಿ ಊಳಿಗ ಮಾಡುತ್ತ ಸ್ವಲ್ಪ ಕಾಲಕಳೆದರು. ವೈಕುಂಠದಾಸರಿಗೆ ಮೊದಮೊದಲು ತಮ್ಮಲ್ಲಿ ಊಳಿಗ ಮಾಡುತ್ತಿರುವುದು ಕನಕದಾಸರೇ ಎಂದು ತಿಳಿದಿರಲಿಲ್ಲ. ತಿಳಿಯುತ್ತಲೇ ಪಶ್ಚಾತ್ತಾಪಪಟ್ಟು ಕನಕದಾಸರ ಕಾಲಿಗೆ ಬಿದ್ದು ಮನ್ನಿಸಬೇಕೆಂದು ದೀನರಾಗಿ ಬೇಡಿಕೊಂಡರು. ಅನಂತರ ಅವರನ್ನು ತುಂಬ ಗೌರವದಿಂದ ನಡೆಸಿಕೊಂಡರು. ಅವರ ಮನೆಯಲ್ಲಿದ್ದ ದಿವ್ಯಪರಿಸರದ ಪ್ರಭಾವದಿಂದಾಗಿಯೋ ಏನೋ, ಅಲ್ಲಿರುವಾಗಲೇ ಕನಕದಾಸರು ನಳಚರಿತ್ರೆ ಹಾಗೂ ಹರಿಭಕ್ತಿಸಾರ ಎಂಬ ಕಾವ್ಯಗಳನ್ನು ರಚಿಸಿದರು. ರಾಮಧಾನ್ಯ ಚರಿತೆ ಮತ್ತು ಮೋಹನ ತರಂಗಿಣಿ ಎಂಬವು ಅವರು ಬರೆದ ಇನ್ನೆರಡು ಕಾವ್ಯಗಳು. ಬಾಡದಾದಿಕೇಶವ ಅಥವಾ ಕಾಗಿನೆಲೆಯಾದಿ ಕೇಶವ ಎಂಬ ಅವರ ಅಂಕಿತ ಇದೆ. ಕನಕದಾಸರು ತಮ್ಮ ಕೊನೆಗಾಲವನ್ನು ಕಾಗಿನೆಲೆಯಲ್ಲಿಯೇ ಕಳೆದು, ತೊಂಬತ್ತೆಂಟನೆಯ ವಯಸ್ಸಿನಲ್ಲಿ ಆದಿಕೇಶವನ ಅಡಿಗಳನ್ನು ಸೇರಿದರು. ಕನಕದಾಸರು ಮಹಾ ಮಾನವತಾವಾದಿಗಳು. ಜೀವಪ್ರೀತಿ ಹಾಗೂ ಜೀವನ ಪ್ರೀತಿ ಅಪಾರವಾಗಿದ್ದ ಸಾಧಕರು. ಪರಮಾತ್ಮನ ಪ್ರೇಮದ ಅನನ್ಯ ಭಕ್ತರು. ಬಡವರ ಬಂಧುವಾಗಿದ್ದ ಹರಿದಾಸರು, ಕನ್ನಡ ದಾಸಸಾಹಿತ್ಯದ ಮೇರು ಶಿಖರವಾಗಿ, ಕಂಗೊಳಿಸುತ್ತಿರುವವರು ಕಳಸವಾದವರು ಕನಕದಾಸರು.

ಲೇಖನ- ಡಾ. ವಿದ್ಯಾಶ್ರೀ ಗೋವಿಂದರಾವ್ ಕುಲಕರ್ಣಿ ಮಾನವಿ

Post a Comment

0Comments

Post a Comment (0)