ದಕ್ಷನ ಮಗಳಾದ ದಾಕ್ಷಾಯಿಣಿಯೇ ಪರಶಿವನ ಹೆಂಡತಿ. ಹೀಗಾಗಿ ಪರಮೇಶ್ವರನು ದಕ್ಷನಿಗೆ ಸಂಬಂಧದಲ್ಲಿ ಅಳಿಯನಾಗಬೇಕು. ಒಂದು ದಿನ ತ್ರಿವೇಣೀಸಂಗಮದಲ್ಲಿ ದೇವತೆಗಳು ಏರ್ಪಡಿಸಿದ್ದ ಜ್ಞಾನ ಸತ್ರವೊಂದು ನಡೆಯುತ್ತಿತ್ತು. ಪರಶಿವನೇ ಆ ಸಭೆಗೆ ಅಧ್ಯಕ್ಷನಾಗಿದ್ದ. ಆಗ ದಕ್ಷನು ಅಲ್ಲಿಗೆ ಬಂದ. ಆಗ ಇಡೀ ಸಭೆಯಲ್ಲಿ ಇದ್ದ ದೇವತೆಗಳು ಮುನಿಗಳು ಎಲ್ಲರೂ ಎದ್ದು ನಿಂತು ನಮಸ್ಕರಿಸಿ ಆತನಿಗೆ ಗೌರವ ಸಲ್ಲಿಸಿದರು. ಆದರೆ, ಅಧ್ಯಕ್ಷ ಪೀಠದಲ್ಲಿದ್ದ ಕಾರಣ ಪರಮೇಶ್ವರನು ಎದ್ದು ಗೌರವ ಸೂಚಿಸಲಿಲ್ಲ. ಇದರಿಂದಾಗಿ ದಕ್ಷ ಕುಪಿತನಾದ. ಅಳಿಯನು ತನ್ನನ್ನು ಅವಮಾನಿಸಿದ ಎಂದೇ ಆತ ತಿಳಿದ. ಹೀಗಾಗಿ ಆ ಸಭೆಯಲ್ಲಿ ಕುಳಿತುಕೊಳ್ಳದೇ ಎಲ್ಲರೆದುರು ಅಳಿಯನಾದ ಶಿವನನ್ನು ನಿಂದಿಸಿ ಸಭೆಯನ್ನು ಧಿಕ್ಕರಿಸಿ ಹೊರನಡೆದ.
ತನ್ನ ಊರಿಗೆ ಹೋದವನೇ ತಾನೂ ಕೂಡಾ ಬಹಳ ವಿಜೃಂಭಣೆಯ ಒಂದು ಯಾಗವನ್ನು ಕೈಗೊಂಡ. ಅದಕ್ಕೆ ಸ್ವತಹ ತಾನೇ ಇದು “ನಿರೀಶ್ವರ ಯಾಗ” ಎಂದು ಹೆಸರಿಸಿಕೊಂಡ. ಅದರಲ್ಲಿ ಈಶ್ವರನನ್ನು ಹೊರತುಪಡಿಸಿ ಉಳಿದ ದೇವತೆಗಳೆಲ್ಲರಿಗೂ ಹವಿಸ್ಸನ್ನು ನೀಡಲು ತೀರ್ಮಾನಿಸಿದ. ಹೀಗಾಗಿ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರಿಗೆಲ್ಲ ಆಮಂತ್ರಣ ನೀಡಿದ.
ಆದರೆ, ಆ ಯಾಗಕ್ಕೆ ಹೋಗುತ್ತಿರುವ ಬ್ರಾಹ್ಮಣರ ಮೂಲಕ ದಾಕ್ಷಾಯಿಣಿಗೆ ತನ್ನ ತಂದೆಯು ಯಾಗವೊಂದನ್ನು ಮಾಡುತ್ತಿರುವ ವಿಷಯ ತಿಳಿಯುತ್ತದೆ. ಆಕೆ ಗಂಡನಾದ ಈಶ್ವರನಲ್ಲಿ ನಾವೂ ಕೂಡಾ ಆ ಯಾಗಕ್ಕೆ ಹೋಗೋಣ ಎಂದು ವಿನಂತಿಸುತ್ತಾಳೆ. ಆಗ ಈಶ್ವರನು ಹಿಂದೆ ತ್ರಿವೇಣೀ ಸಂಗಮದಲ್ಲಿ ನಡೆದ ಸಭೆಯ ವಿಚಾರವನ್ನು ಆಕೆಗೆ ತಿಳಿಸಿ , ನಿನ್ನ ತಂದೆ ಹಗೆ ಸಾಧನೆಗಾಗಿಯೇ ಈ ರೀತಿ ಮಾಡುತ್ತಿದ್ದಾನೆ , ಆದ್ದರಿಂದ ಹೋಗುವುದು ಬೇಡ ಎನ್ನುತ್ತಾನೆ. ಆದರೆ ತವರಿನ ಮೋಹದಿಂದಾಗಿ ದಾಕ್ಷಾಯಿಣಿಯು ಗಂಡನ ಮಾತನ್ನು ತಿರಸ್ಕರಿಸಿ , ತಾನೊಬ್ಬಳೇ ತಂದೆಯ ಯಾಗಕ್ಕೆ ಹೋಗುತ್ತಾಳೆ.
ಆದರೆ, ಯಾಗಶಾಲೆಗೆ ಹೋದ ದಾಕ್ಷಾಯಿಣಿಯನ್ನು ಅಲ್ಲಿ ಯಾರೂ ಮಾತನಾಡಿಸುವುದೇ ಇಲ್ಲ. ತಾಯಿ ಅಕ್ಕ ತಂಗಿಯರೆಲ್ಲ ಮಾತನಾಡಿಸಲು ಮುಂದಾದರೂ ಕೂಡಾ ದಕ್ಷನು ಅವರನ್ನೆಲ್ಲ ಗದರಿಸಿ ಯಾರೂ ಆಕೆಯನ್ನು ಮಾತನಾಡಿಸದಂತೆ ಮಾಡುತ್ತಾನೆ. ಆಗ ದಾಕ್ಷಾಯಿಣಿಗೆ ಗಂಡನ ಮಾತನ್ನು ಮೀರಿ ಬಂದ ತನ್ನ ತಪ್ಪಿನ ಅರಿವಾಗುತ್ತದೆ. ಆದರೂ ಸಹಿಸಿಕೊಂಡು ಯಾಗದ ಸಂಭ್ರಮವನ್ನು ನೋಡುತ್ತಾ ಇರುತ್ತಾಳೆ. ಅಲ್ಲಿ ಯಾಗ ನಡೆಸುತ್ತಿರುವ ಮುನಿಗಳು ಇಂದ್ರ , ಅಗ್ನಿ , ಯಮ , ನಿಋತಿ , ವರುಣ , ವಾಯು , ಕುಬೇರ ಎಲ್ಲರಿಗೂ ಹವಿಸ್ಸನ್ನು ಅರ್ಪಿಸಿ ಕೊನೆಯಲ್ಲಿ “ಈಶಾಯ ಸ್ವಾಹಾ” ಎಂದು ಈಶನಿಗೆ ಹವಿಸ್ಸನ್ನು ಅರ್ಪಿಸಲು ತೊಡಗಿದಾಗ , ದಕ್ಷನು ಸಿಟ್ಟಿನಿಂದ ಅವರನ್ನು ತಡೆದು “ಈಶ್ವರನಿಗೆ ಹವಿಸ್ಸನ್ನು ಕೊಡಬಾರದು ಇದು ನಿರೀಶ್ವರ ಯಾಗ” ಎಂದು ಕೂಗುತ್ತಾನೆ. ಆಗ ದಾಕ್ಷಾಯಿಣಿಗೆ ಕೋಪ ಬರುತ್ತದೆ. ಆಕೆ ದಕ್ಷನನ್ನು ಜರೆಯುತ್ತಾಳೆ. ದಕ್ಷನೂ ಕೂಡಾ ಆಕೆಯನ್ನು ಮತ್ತು ಈಶ್ವರನನ್ನು ನಿಂದಿಸುತ್ತಾನೆ.
ಅವಮಾನ ತಾಳಲಾರದೇ ಹತಾಶಳಾದ ದಾಕ್ಷಾಯಿಯಿಣಿಯು , ತಾನೇ ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ತನ್ನನ್ನು ತಾನೇ ಆಹುತಿ ಕೊಟ್ಟುಕೊಳ್ಳುತ್ತಾಳೆ. ದಾಕ್ಷಾಯಿಣಿಯು ಸುಟ್ಟುಹೋದಳೆಂಬ ವಾರ್ತೆ ತಿಳಿದ ಈಶ್ವರನು ಕುಪಿತನಾಗಿ ತನ್ನ ಜಡೆಯನ್ನು ನೆಲಕ್ಕೆ ಬಡಿದು ವೀರಭದ್ರನನ್ನು ಸೃಷ್ಟಿಸಿ ಅವನಿಗೆ ದಕ್ಷನನ್ನು ಕೊಲ್ಲುವಂತೆ ಅಪ್ಪಣೆ ಕೊಡುತ್ತಾನೆ. ವೀರಭದ್ರನು ದಕ್ಷನ ಯಾಗಶಾಲೆಯನ್ನೆಲ್ಲ ಧ್ವಂಸಗೊಳಿಸುತ್ತಾನೆ. ದಕ್ಷನನ್ನೂ ಅವನೊಂದಿಗೆ ಸಹಕರಿಸಿದವರೆಲ್ಲರನ್ನೂ ಕೊಲ್ಲುತ್ತಾನೆ.
ಇತ್ತ ಹೆಂಡತಿಯನ್ನು ಕಳೆದುಕೊಂಡ ಈಶ್ವರನು ಕೈಲಾಸದಲ್ಲಿ ಒಂಟಿಯಾಗಿಯೇ ಉಳಿದು ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ನಿರತನಾಗುತ್ತಾನೆ.
ಈಶ್ವರನು ಹೆಂಡತಿಯನ್ನು ಕಳೆದುಕೊಂಡ ವಿಷಯವನ್ನು ಅರಿತುಕೊಂಡ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ , ಈಶ್ವರನಿಗೆ ಇನ್ನು ಮುಂದೆ ಜನಿಸುವ ಪುತ್ರನಿಂದಲ್ಲದೇ ಅನ್ಯರಿಂದ ತನಗೆ ಮರಣ ಇಲ್ಲದಂತಹ ವರ ಪಡೆಯುತ್ತಾನೆ. ನಂತರ ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ.
ಈಶ್ವರನಿಗೆ ಹೆಂಡತಿ ಇಲ್ಲದಿರುವುದರಿಂದ ಆತನಿಗೆ ಮಗನು ಜನಿಸುವುದು ಸಾಧ್ಯವಿಲ್ಲ , ಈಶ್ವರನಿಗೆ ಮಗನು ಜನಿಸದೇ ಹೋದರೆ ತಾರಕಾಸುರನಿಗೆ ಅಳಿವಿಲ್ಲ. ಹೀಗಾಗಿ ದೇವತೆಗಳೆಲ್ಲರೂ ಈಶ್ವರನಿಗೆ ಮರು ಮದುವೆ ಮಾಡಿಸುವ ಉಪಾಯ ಮಾಡುತ್ತಾರೆ. ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾಕ್ಷಾಯಿಣಿಯು ನಂತರ ಪರ್ವತ ರಾಜನಿಗೆ ಮಗಳಾಗಿ ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಈಶ್ವರನನ್ನೇ ಧ್ಯಾನಿಸುತ್ತಾ ಇರುತ್ತಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿಸುವುದು ಎಂದು ತೀರ್ಮಾನಿಸುತ್ತಾರೆ.
ಆದರೆ , ಅದಕ್ಕಿಂತ ಮೊದಲು ಈಶ್ವರನನ್ನು ತಪಸ್ಸಿನಿಂದ ಎಬ್ಬಿಸಬೇಕಲ್ಲ , ಅದಕ್ಕಾಗಿ ಮನ್ಮಥನ ಮೊರೆ ಹೋಗುತ್ತಾರೆ. ಮನ್ಮಥನು ಈಶ್ವರನಿಗೆ ಪಂಚ ಬಾಣಗಳನ್ನು ಬಿಟ್ಟು ಅದರಿಂದ ಆತನ ತಪಸ್ಸನ್ನು ಕೆಡಿಸುತ್ತಾನೆ. ಇದರಿಂದ ಸಿಟ್ಟಾದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುಬಿಡುತ್ತಾನೆ. ಆದರೆ, ಬಳಿಕ ದೇವತೆಗಳೆಲ್ಲರೂ ಶಿವನನ್ನು ಧ್ಯಾನಿಸಿ ಆತನನ್ನು ಪ್ರಸನ್ನಗೊಳಿಸುತ್ತಾರೆ. ನಂತರ ಶಿವ ಪಾರ್ವತಿಯರ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ.
ಮುಂದೆ ಅವರಿಬ್ಬರಿಗೆ “ಷಣ್ಮುಖ” ಎಂಬ ಮಗನು ಹುಟ್ಟುತ್ತಾನೆ. ಅವನನ್ನು ಕಾರ್ತಿಕೇಯ , ಸ್ಕಂದ , ಸುಬ್ರಹ್ಮಣ್ಯ , ಕುಮಾರಸ್ವಾಮಿ , ಮುರುಗ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ತಾರಕಾಸುರನನ್ನು ವಧಿಸಿ ಲೋಕಕಲ್ಯಾಣ ಉಂಟುಮಾಡಲೆಂದೇ ಹುಟ್ಟಿದ ಷಣ್ಮುಖನು ತಾನು ಜನಿಸಿದ ಏಳನೇ ದಿನದಲ್ಲಿಯೇ ತಾರಕಾಸುರನ ಮೇಲೆ ಯುದ್ಧಕ್ಕೆ ತೆರಳುತ್ತಾನೆ.
ದೇವತೆಗಳ ಸಮಸ್ತ ಸೇನೆಗೆ ಕುಮಾರಸ್ವಾಮಿಯೇ ಸೇನಾನಾಯಕನಾಗುತ್ತಾನೆ. ಆತನು ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠೀ ತಿಥಿಯಂದು ತಾರಕಾಸುರನನ್ನು ಕೊಲ್ಲುತ್ತಾನೆ. ಕುಮಾರಸ್ವಾಮಿಯು ತಾರಕಾಸುರನನ್ನು ಕೊಂದ ಬೆಟ್ಟದ ಸ್ಠಳಕ್ಕೆ “ಕುಮಾರಪರ್ವತ” ಎಂದು ಹೆಸರಾಗುತ್ತದೆ. ಅಲ್ಲದೇ ತಾರಕಾಸುರನನ್ನು ಕೊಂದ ನಂತರ ತನ್ನ ಆಯುಧಗಳಿಗೆ ಅಂಟಿದ ರಕ್ತವನ್ನು ಪಕ್ಕದ “ಧಾರಾ” ನದಿಯಲ್ಲಿ ಸುಬ್ರಹ್ಮಣ್ಯನು ತೊಳೆಯುತ್ತಾನೆ. ಹೀಗಾಗಿ ಧಾರಾ ನದಿಗೆ “ಕುಮಾರಧಾರಾ” ನದಿ ಎಂದು ಹೆಸರು ಬರುತ್ತದೆ.
ತಾರಕಾಸುರನ ವಧೆಯಾದ ನಂತರ ದೇವೇಂದ್ರನು ತನ್ನ ಮಗಳಾದ ದೇವಸೇನೆ ಎಂಬವಳನ್ನು ಸುಬ್ರಹ್ಮಣ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಆ ನಂತರ ಸುಬ್ರಹ್ಮಣ್ಯನು ಪತ್ನಿಯೊಂದಿಗೆ ಕುಮಾರಧಾರಾ ನದಿಯ ಪಕ್ಕದಲ್ಲಿಯೇ ನೆಲೆ ನಿಲ್ಲುತ್ತಾನೆ. ಆ ಸ್ಥಳವೇ “ಸುಬ್ರಹ್ಮಣ್ಯಕ್ಷೇತ್ರ” ಎಂದು ಪ್ರಸಿದ್ಧವಾಗುತ್ತದೆ.
ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠೀ ತಿಥಿಯಂದು “ಚಂಪಾ” ಎಂಬ ಒಂದು ವಿಶೇಷ ಯೋಗ ಇದ್ದಿತ್ತು. ಹೀಗಾಗಿ ಅದನ್ನು “ಚಂಪಾಷಷ್ಠೀ” ಎಂಬುದಾಗಿ ಕರೆಯುತ್ತಾರೆ. ಜನರು ಇದನ್ನೇ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠೀ” ಅಥವಾ “ಕುಕ್ಕೆ ಷಷ್ಠೀ” ಅಥವಾ “ಸುಬ್ರಹ್ಮಣ್ಯ ಷಷ್ಠೀ” ಅಥವಾ “ಸುಬ್ರಾಯನ ಷಷ್ಠಿ” ಎಂದು ಕರೆಯುತ್ತಾರೆ.
ಹಿಂದೂಗಳ ತಿಥಿ ನಿರ್ಣಯ ಗ್ರಂಥಗಳಲ್ಲಿ “ಚಂಪಾ” ಎಂಬ ವಿಶೇಷ ಯೋಗದ ಕುರಿತು ಹೀಗೆ ಬರೆಯಲಾಗಿದೆ – “ಮಾರ್ಗಶಿರ ಅಥವಾ ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ವೈಧೃತಿ ಯೋಗ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ” ಅಥವಾ “ಮಂಗಳವಾರವಾಗಿದ್ದು ವಿಶಾಖಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ” ಅಥವಾ “ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ಶತಭಿಷಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠೀ ಎನ್ನುತ್ತಾರೆ.”
ಹೀಗೆ “ಚಂಪಾ” ಎಂಬುದು “ಷಷ್ಠೀ” ತಿಥಿಯ ಒಂದು “ಯೋಗವಿಶೇಷ”ಕ್ಕೆ ಇಟ್ಟ ಹೆಸರಾಗಿದೆ ಮತ್ತು “ಚಂಪಾ ಷಷ್ಠೀ” ಎಂಬುದು ಷಣ್ಮುಖ ಅಂದರೆ ಸುಬ್ರಹ್ಮಣ್ಯನ ಹಬ್ಬವಾಗಿದೆ. ಈ ವರ್ಷ 07-12-2024 ರಂದು ಚಂಪಾ ಷಷ್ಠೀ ಹಬ್ಬ ಇದೆ. ಎಲ್ಲರಿಗೂ ಚಂಪಾ ಷಷ್ಠೀ ಹಬ್ಬದ ಶುಭಾಶಯಗಳು.