" ದಿನಾಂಕ : 23.11.2024 ಶನಿವಾರ - ಕಾರ್ತೀಕ ಬಹುಳ ಅಷ್ಟಮೀ – ಶ್ರೀ ಸುಜನೇಂದ್ರ ತೀರ್ಥರ ಆರಾಧನಾ ಮಹೋತ್ಸವ., ನಂಜನಗೂಡು .
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆತಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿ- ಗಳವರ ಪರಮ ಪವಿತ್ರ ಪೀಠದಲ್ಲಿ ವಿರಾಜಿಸಿ; ತಮ್ಮ ಜ್ಞಾನ - ಭಕ್ತಿ - ವೈರಾಗ್ಯ - ಪಾಠ ಪ್ರವಚನ - ಪರವಾದಿ ದಿಗ್ವಿಜಯ - ಸಿದ್ಧಾಂತ ಸ್ಥಾಪನೆ; ಗ್ರಂಥ ರಚಾನಾದಿಗಳಿಂದ ಪಂಡಿತರೂ; ರಾಜರುಗಳಿಂದ ಮಾನಿತರಾಗಿ ಸೇವಿತರಾದವರು ಶ್ರೀ ಸುಜನೇಂದ್ರತೀರ್ಥರು.
" ಶ್ರೀ ಸುಜನೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು :
ವಿದ್ವಾನ್ ಶ್ರೀ ಜಯರಾಮಾಚಾರ್ಯರು
ವಿದ್ಯಾ ಗುರುಗಳು :
ಶ್ರೀ ಸುಬೋಧೇಂದ್ರತೀರ್ಥರು,
ಶ್ರೀ ವಿಠಲೋಪಾಧ್ಯಾಯರು
ಆಶ್ರಮ ಗುರುಗಳು :
ಶ್ರೀ ಸುಬೋಧೇಂದ್ರತೀರ್ಥರು
ಆಶ್ರಮ ನಾಮ :
ಶ್ರೀ ಸುಜನೇಂದ್ರತೀರ್ಥರು
ಕಾಲ :
ಕ್ರಿ. ಶ. 1807 - 1836
ಆಶ್ರಮ ಶಿಷ್ಯರು :
ಶ್ರೀ ಸುಜ್ಞಾನೇಂದ್ರತೀರ್ಥರು
ಆರಾಧನಾ ದಿನ :
ಕಾರ್ತೀಕ ಬಹುಳ ಅಷ್ಟಮೀ
ಬೃಂದಾವನ ಸ್ಥಳ :
ನಂಜನಗೂಡು
" ವಿದ್ಯಾಭ್ಯಾಸ "
ಶ್ರೀ ಸುಬೋಧೇಂದ್ರತೀರ್ಥರಲ್ಲಿ ವೇದ - ವೇದಾಂತ - ಪುರಾಣ - ಇತಿಹಾಸ - ಸಾಹಿತ್ಯ - ಅಲಂಕಾರ - ವ್ಯಾಕರಣ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು.
ಶ್ರೀ ವ್ಯಾಸತತ್ತ್ವಜ್ಞತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ಸುಬೋಧೇಂದ್ರತೀರ್ಥರ ಅಜ್ಞಾನುಸಾರ " ನ್ಯಾಯ ಶಾಸ್ತ್ರ " ಅಧ್ಯಯನಕ್ಕಾಗಿ ಪುನಾ ನಗರದ " ನವೀನ ನ್ಯಾಯ " ದಲ್ಲಿ ಆಚಾರ್ಯ ಪುರುಷನೆನಿಸಿದ " ನವ ದ್ವೀಪದ ನೈಯಾಯಿಕ ಗದಾಧರ ಭಟ್ಟಾಚಾರ್ಯರ ಮುಖ್ಯ ಶಿಷ್ಯರಾದ ವಿಠಲೋಪಾಧ್ಯಾಯರು " ಪುಣೆಯಲ್ಲಿ ಚತುಃ ಶಾಸ್ತ್ರ ಪ್ರವಚನಕಾರರಾಗಿದ್ದರು. ಅವರು ಭಗವತ್ಸಂಪ್ರದಾಯಕ್ಕೆ ಸೇರಿದವರು.
ಅವರ ಬಳಿ ಅನೇಕರು ಅಭ್ಯಾಸ ಮಾಡುತ್ತಿದ್ದರು.
ಸತಾರಿ ರಾಮಾಚಾರ್ಯರು; ಹುಲಗಿ ಆಚಾರ್ಯರು ಮತ್ತು ಶ್ರೀ ಜಯರಾಮಾಚಾರ್ಯರು ( ಶ್ರೀ ಸುಜನೇಂದ್ರರು ) ಅವರಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾಧ್ವರ ಪೈಕಿ ಪ್ರಸಿದ್ಧರು.
ಅಲ್ಲಿ ಸ್ವಲ್ಪದಿನ ನ್ಯಾಯ ಶಾಸ್ತ್ರ ಅಧ್ಯಯನ ಮಾಡಿ; ಶ್ರೀ ಆಚಾರ್ಯರು ಮತ್ತೆ ಅಮ್ಮ ಗುರುಗಳ ಬಳಿಗೆ ಬಂದು ಅವರಲ್ಲೇ ನ್ಯಾಯ ಶಾಸ್ತ್ರವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿದರು.
ಶ್ರೀ ಸುಬೋಧೇಂದ್ರತೀರ್ಥರು ಶ್ರೀ ಅಗ್ನಿದೇವರ ಅವತಾರರಾದ ವ್ಯಾಸತತ್ತ್ವಜ್ಞತೀರ್ಥರು.
ಶ್ರೀ ಸುಬೋಧೇಂದ್ರತೀರ್ಥರು, ಶ್ರೀ ಮಾದನೂರು ವಿಷ್ಣುತೀರ್ಥರು ಮತ್ತು ಉತ್ತರಾದಿ ಮಠದ ಶ್ರೀ ಸತ್ಯಪ್ರಿಯತೀರ್ಥರ ಪೂರ್ವಾಶ್ರಮ ಪುತ್ರರಾದ ಮಹಾಭಾಷ್ಯಂ ಶ್ರೀನಿವಾಸಾಚಾರ್ಯರು ಸಹಾಧ್ಯಾಯಿಗಳೂ ಮತ್ತು ಸಹಪಾಠಿಗಳು.
" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆತಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಪ್ರಾತಃ ಸ್ಮರಣೀಯ ಶ್ರೀ ಭುವನೇಂದ್ರತೀರ್ಥರ ಕರಕಮಲ ಸಂಜಾತರಾದ ಪ್ರಾತಃ ಸ್ಮರಣೀಯ ಶ್ರೀ ಸುಬೋಧೇಂದ್ರತೀರ್ಥರು ತಮ್ಮ ಉತ್ತರಾಧಿಕಾರಿಯನ್ನಾಗಿ ಷಾಷ್ಟೀಕ ವಂಶ ಸಂಜಾತರೂ; ಶ್ರೀ ಧೀರೇಂದ್ರತೀರ್ಥರ ಪೂರ್ವಾಶ್ರಮದ ದೌಹಿತ್ರ ವಿದ್ವಾನ್ ಶ್ರೀ ಜಯರಾಮಾಚಾರ್ಯರಿಗೆ ತುರ್ಯಾಶ್ರಮವನ್ನು ನೀಡಿ " ಶ್ರೀ ಸುಜನೇಂದ್ರತೀರ್ಥ " ರೆಂಬ ಅಭಿದಾನದೊಂದಿಗೆ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ತಮ್ಮ ಅಮೃತ ಹಸ್ತಗಳಿಂದ ಪಟ್ಟಾಭಿಷೇಕವನ್ನು ಮಾಡಿದರು.
" ದಿಗ್ವಿಜಯ "
ಶ್ರೀ ಸುಜನೇಂದ್ರತೀರ್ಥರು ಸಂಚಾರ ಕ್ರಮದಲ್ಲಿ ಮೈಸೂರು ದೇಶಕ್ಕೆ ಬಂದರು.
ರಾಮನಾಥಪುರ, ತಿರುಮಕೂಡಲು, ಶ್ರೀ ರಂಗ ಪಟ್ಟಣ, ನರಸೀಪುರ ಮೊದಲಾದ ಕ್ಷೇತ್ರಗಳಲ್ಲಿ ಸಂಚರಿಸಿ ನಂಜನಗೂಡಿಗೆ ಬಂದರು.
" ರುದ್ರ - ಚಮಕ " ಕ್ಕೆ " ನಾರಾಯಣ ಪರವಾಗಿ ಅರ್ಥ "
ಕೆಲ ಅಜ್ಞಾನಿಗಳು ಮತದ ಆಗ್ರಹವನ್ನಿಟ್ಟುಕೊಂಡು ಶ್ರೀ ಸುಜನೇಂದ್ರತೀರ್ಥರು ಶೈವ ಕ್ಷೇತ್ರದಲ್ಲಿ ವಾಸ ಮಾಡುತ್ತಿರುವುದನ್ನೂ; ಶೈವಾಗಮದಿಂದ ಪೂಜೆ ನಡೆಯುವ ಶ್ರೀ ರುದ್ರದೇವರ ದರ್ಶನ ಮಾಡುವುದನ್ನು ಆಕ್ಷೇಪಿಸಿದ್ದರು.
ಈ ವಿಷಯ ಶ್ರೀಗಳಿಗೂ ತಿಳಿದು ಅವರ ಅಜ್ಞಾನಕ್ಕೆ ನಸುನಕ್ಕು; ಮರುದಿನ ಶ್ರೀ ರುದ್ರದೇವರ ದರ್ಶನಕ್ಕೆ ಹೋಗುವ ಮುನ್ನ ತಮ್ಮನ್ನು ಆಕ್ಷೇಪಿಸಿದ ಜನರೊಂದಿಗೆ ಮಾತನಾಡುತ್ತಾ...
ಶ್ರೀ ರುದ್ರದೇವರ ಪರವಾದ " ರುದ್ರ - ಚಮಕ " ಗಳೆಂಬ ಶ್ರುತಿ ವಾಕ್ಯಗಳನ್ನೆಲ್ಲ ಯುಕ್ತಿಯುಕ್ತವಾಗಿ ಶ್ರೀಮನ್ನಾರಾಯಣನ ಪರವಾಗಿ ಅರ್ಥ ಮಾಡಿ ಹೇಳಿದರು.
ಶ್ರೀಗಳವರ ಅದ್ಭುತ ಪಾಂಡಿತ್ಯವನ್ನೂ; ಅನುಸಂಧಾನವನ್ನೂ ನೋಡಿ ಆ ಅಜ್ಞರು ನಾಚಿ ಶ್ರೀಗಳವರ ಪಾದಕ್ಕೆರಗಿ ಕ್ಷಮೆ ಬೇಡಿದರು.
" ಪರವಾದಿ ದಿಗ್ವಿಜಯ "
ಪುಣೆಯ ಶ್ರೀಮಂತರ ಆಶ್ರಯದಲ್ಲಿದ್ದ ಅತಿ ಪ್ರಸಿದ್ಧರಾದ " ತ್ರ್ಯಂಬಕಶಾಸ್ತ್ರಿ " ಗಳೆಂಬ ಮಹಾ ಪಂಡಿತರು ಅಲ್ಲಿ ಆಶ್ರಯ ತಪ್ಪಿದ ಮೇಲೆ ಮೈಸೂರಿನ ಮುಮ್ಮಡಿ ಕೃಷ್ಣರಾಜ ಭೂಪರ ಆಸ್ಥಾನಕ್ಕೆ ಬಂದರು.
ಅಲ್ಲಿಯ ಪಂಡಿತರುಗಳೊಂದಿಗೆ ತಾವು ವಾಕ್ಯಾರ್ಥ ಮಾಡುತ್ತೇವೆಂದರು.
ಅವರ ವಾಕ್ಪ್ರವಾಹದ ಮುಂದೆ ಯಾರೂ ನಿಲ್ಲಲಿಲ್ಲ.
ಇದು ಮೈಸೂರು ಆಸ್ಥಾನದ ಗೌರವ ಎಂದು ಭಾವಿಸಿ ಶಾಸ್ತ್ರಿಗಳೊಂದಿಗೆ ಮೈಸೂರು ಮಹಾರಾಜರು ಶ್ರೀ ಸುಜನೇಂದ್ರತೀರ್ಥರಿದ್ದ ನಂಜನಗೂಡಿಗೆ ಬಂದರು.
ಶ್ರೀಗಳವರಿಗೆ ಮೈಸೂರು ಮಹಾರಾಜರು ಬಂದ ಸುದ್ಧಿ ತಿಳಿದು ರಾಜರನ್ನು ಕರೆಯಿಸಿ ಗೌರವದಿಂದ ಕೂಡಿಸಿ ಕೊಂಡರು. ಕುಶಲ ಪ್ರಶ್ನೆಯಾದ ಮೇಲೆ ಮಹಾರಾಜರು ಶಾಸ್ತ್ರಿಗಳನ್ನು ಪರಿಚಯಿಸಿದರು.
ಶ್ರೀಗಳವರ ಪಾಂಡಿತ್ಯ ಎಷ್ಟು ದೊಡ್ಡದೋ, ಅವರ ಆಕಾರ ಅಷ್ಟೇ ಚಿಕ್ಕದು.
ಶಾಸ್ತ್ರಿಗಳು ಶ್ರೀಗಳವರನ್ನು " ಆಕಾರೋಹ್ರಸ್ಯ " ಎಂದರು.
ತಮ್ಮ ಆಕಾರವನ್ನು ನೋಡಿ ಶಾಸ್ತ್ರಿಗಳು ಆಡಿದ ಮಾತೇ ಶ್ರೀಗಳವರಿಗೆ ವಾದ ವಿಷಯವಾಯಿತು.
" ಆಕಾರ ಹೇಗೆ ಹ್ರಸ್ವ " ವಾದಿತೆಂದು ಶ್ರೀಗಳವರು ಪ್ರಶ್ನೆ ಮಾಡಿದರು.
ಆ ವಿಷಯದ ಮೇಲೆ ವಿಫುಲ ಚರ್ಚೆ ನಡೆಯಿತು.
ವಾಕ್ಯಾರ್ಥ ವ್ಯಾಕರಣ ಶಾಸ್ತ್ರವನ್ನೂ ಮೀರಿ ನ್ಯಾಯ - ಮೀಮಾಂಸ - ವೇದಾಂತಗಳಲ್ಲಿ ಆರಂಭವಾಯಿತು.
ಬರುಬರುತ್ತಾ ಶಾಸ್ತ್ರಿಗಳ ಕೈ ಮೇಲಾಯಿತು.
ಶ್ರೀಗಳವರು ಅದಕ್ಕೆ ಆಶ್ಚರ್ಯ ಪಟ್ಟು ತುಸು ಆಲೋಚಿಸಿದರು.
ಅವರಿಗೆ ಏನೋ ಹೊಳೆಯಿತು.
ಅಷ್ಟು ಹೊತ್ತಿಗೆ ಮಧ್ಯಾಹ್ನದ ಸಮಯ.
ಶ್ರೀಗಳವರು " ಶಾಸ್ತ್ರಿಗಳೇ ಭೋಜನವಾದ ಮೇಲೆ ವಾಕ್ಯಾರ್ಥ ಮುಂದುವರೆಯಲೆಂದರು " . ಭೋಜನಾನಂತರ ಮಧ್ಯಾಹ್ನ ಚರ್ಚೆ ಮತ್ತೆ ಪ್ರಾರಂಭವಾಯಿತು.
ಮಧ್ಯಾಹ್ನದ ಚರ್ಚೆಯಲ್ಲಿ ಶಾಸ್ತ್ರಿಗಳ ಬಾಯಿ ಕಟ್ಟಿತು.
ಶ್ರೀಗಳವರ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಕಾರಣ ಶಾಸ್ತ್ರಿಗಳು ಸೂರ್ಯೊಪಾಸಕರು.
ಸೂರ್ಯನ ಗತಿ ಆರೋಹಣ ಕ್ರಮದಲ್ಲಿದ್ದಂತೆ ಶಾಸ್ತ್ರಿಗಳ ವಾದ ಪ್ರಚಂಡವಾಗಿರುತ್ತಿತ್ತು.
ಇದನ್ನರಿಯದ ಪಂಡಿತರೆಲ್ಲರೋ ಶಾಸ್ತ್ರಿಗಳಿಂದ ಪರಾಜಿತರಾಗುತ್ತಿದ್ದರು.
ಆದರೆ, ಜ್ಞಾನಿಗಳಾದ ಶ್ರೀಗಳವರಿಗೆ ಇದರ ಮರ್ಮ ಅರ್ಥವಾಗಿ ಮಧ್ಯಾಹ್ನ ಅವರು ವಾಕ್ಯಾರ್ಥ ಆರಂಭ ಮಾಡಿದರು.
ಆಗ ಶಾಸ್ತ್ರಿಗಳ ನಿಜವಾದ ಬಣ್ಣ ಹೊರಬಿದ್ದಿತು.
ಶಾಸ್ತ್ರಿಗಳು ನಿರುತ್ತರರಾದುದನ್ನು ಕಂಡು ಮೈಸೂರು ಮಹಾರಾಜರಿಗೆ ಅತೀವ ಆನಂದವಾಯಿತು.
ತಕ್ಷಣವೇ ಮಹಾರಾಜರು ತಾವು ಧರಿಸಿದ್ದ ಮುತ್ತಿನ ಕಂಠಿಯನ್ನು ಶ್ರೀಗಳವರ ಪಾದಗಳಿಗರ್ಪಿಸಿದರು.
ಶ್ರೀಗಳವರು ಅದನ್ನು ಶಾಸ್ತ್ರಿಗಳಿಗೆ ಅನುಗ್ರಹಿಸಿ ಕೊಟ್ಟು -
" ರಾಜರೇ, ಶಾಸ್ತ್ರಿಗಳು ದೊಡ್ಡ ಪಂಡಿತರು. ಇಂಥವರು ನಿಮ್ಮ ಆಸ್ಥಾನಕ್ಕೆ ಭೂಷಣಪ್ರಾಯರಾಗಿದ್ದಾರೆ. ಇವರನ್ನು ನಿಮ್ಮ ಆಸ್ಥಾನ " ದಲ್ಲೇ ಇಟ್ಟುಕೊಳ್ಳಿ ಎಂದರು.
ಶಾಸ್ತ್ರಿಗಳು ಎದ್ದು ಶ್ರೀಗಳವರ ಪಾದಗಳಿಗೆರಗಿ ಶ್ರೀಗಳವರ ಪಾಂಡಿತ್ಯ ಅಗಾಧವಾದುದು.
ಅಲ್ಲದೇ ಸನ್ನಿಧಾನದ ಯೋಗಸಿದ್ಧಿಯು ಅಸದೃಶವಾದುದು.
ಇಂಥಹಾ ಜ್ಞಾನಿ ಶ್ರೇಷ್ಠರ ದರ್ಶನವಾದದ್ದು ನನ್ನ ಭಾಗ್ಯ ಎಂದರು.
ಶ್ರೀಗಳವರು ಅವರನ್ನು ಯೋಗ್ಯ ರೀತಿಯಲ್ಲಿ ಮರ್ಯಾದೆ ಮಾಡಿದರು.
" ಮೈಸೂರು ಸಂಸ್ಥಾನದಿಂದ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನಕೆ ರಾಜ ಮರ್ಯಾದೆ "
ಮಹಾರಾಜರು ಸಕಲ ವೈಭವಗಳೊಡನೆ ಯತಿದ್ವಯರನ್ನೂ ಅರಮನೆಗೆ ಕರೆದೊಯ್ದು ಸತ್ಕರಿಸಿದರು.
ಆನೆ, ಅಂಬಾರಿ, ಚಾಮರ, ಹಗಲು ದೀವಟಿಗೆ ಮೊದಲಾದ ವಿಶೇಷ ಗೌರವವನ್ನು ಮಾಡಿ ಶ್ರೀ ಸುಜನೇಂದ್ರತೀರ್ಥರು ನಂಜನಗೂಡಿನಲ್ಲಿ ತಮ್ಮ ಗುರುಗಳೊಂದಿಗೆ ವಾಸ ಮಾಡುತ್ತಿದ್ದ ಛತ್ರವನ್ನೇ ಶ್ರೀ ಸುಬೋಧೇಂದ್ರತೀರ್ಥರಿಗೆ ದಾನವಾಗಿ ಕೊಟ್ಟರು ಮತ್ತು ಪ್ರತಿ ತಿಂಗಳೂ ಶ್ರೀ ಮಠಕ್ಕೆ ತಗಲುವ ಖರ್ಚಿಗಾಗಿ ತಮ್ಮ ರಾಜ್ಯ ಭಂಡಾರದಿಂದ 360 ಕಂಠೀ ವರಹಗಳನ್ನು ಕೊಡುವಂತೆ ವ್ಯವಸ್ಥೆ ಮಾಡಿದರು.
ವಾರ್ಷಿಕ ಆದಾಯಕ್ಕಾಗಿ ಅಂಬಳೆ, ಕಗ್ಗಲೂರು, ಕೊಂಗಳ್ಳಿ ಗ್ರಾಮಗಳನ್ನೂ ದಾನವಾಗಿ ಕೊಟ್ಟರು.
" ಶಿಷ್ಯ ಸ್ವೀಕಾರ "
ಶ್ರೀ ಧೀರೇಂದ್ರತೀರ್ಥರ ಪ್ರಪೌತ್ರರೂ, ಶ್ರೀ ಸುಜನೇಂದ್ರತೀರ್ಥರ ಪೂರ್ವಾಶ್ರಮ ಭಾವಮೈದುನರಾದ ಶ್ರೀ ರಾಘವೇಂದ್ರಾಚಾರ್ಯರಿಗೆ ಆಶ್ರಮ ನೀಡಿ " ಸುಜ್ಞಾನೇಂದ್ರತೀರ್ಥ " ಎಂದು ನಾಮಕರಣ ಮಾಡಿ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿ ಮಹಾ ಸಂಸ್ಥಾನವನ್ನು ವಹಿಸಿಕೊಟ್ಟು ಅನುಗ್ರಹಿಸಿದರು.
" ನಿರ್ಯಾಣ "
ಶ್ರೀ ಸುಜನೇಂದ್ರತೀರ್ಥರ ಹೆಸರು ಸಂಸ್ಥಾನದ ಇತಿಹಾಸದಲ್ಲಿ ಆಚಂದ್ರಾರ್ಕವಾದುದು.
ವಾದಿ ದಿಗ್ವಿಜಯ, ರಾಜ ಗೌರವ ಇವರ ಜೀವನದಲ್ಲಿ ಅದ್ಭುತ ವಿಜಯವೆನ್ನಬಹುದು.
ಇವರು ಸುಪ್ರಸಿದ್ಧ ನೈಯಾಯಿಕರು.
ಇವರಿಂದ ರಚಿತವಾದ " ಸೌಜನೇಂದ್ರಿಯ ಪಕ್ಷತಾವಚ್ಛೇದಕ ವಿಚಾರ " ವೆಂಬ ಗ್ರಂಥ ಶ್ರೀ ಶ್ರೀಗಳವರ ವಿದ್ವತ್ಪ್ರೌಢಿಮೆಯನ್ನು ತೋರಿಸಲು ಸಾಕಷ್ಟು ಪ್ರಮಾಣವಾಗಿದೆ.
ಶ್ರೀ ಸುಜನೇಂದ್ರತೀರ್ಥರು ವಿಭೂತಿ ಪುರುಷರು. ದುರ್ಮುಖಿ ನಾಮ ಸಂವತ್ಸರದ ಕಾರ್ತೀಕ ಬಹುಳ ಅಷ್ಟಮೀ ದಿನ ಹರಿ ಪಾದಾರವಿಂದವನ್ನು ಸೇರಿದರು.
" ಉಪ ಸಂಹಾರ "
ಶ್ರೀ ಇಂದ್ರದೇವರಿಗಿರುವ ವೈಭವಾದಿಗಳೂ, ಧರ್ಮಗಳೂ ಶ್ರೀ ಸುಜನೇಂದ್ರತೀರ್ಥರಲ್ಲೂ ಕಂಗೊಳಿಸುತ್ತಿವೆ.
ಶ್ರೀ ಇಂದ್ರದೇವರು ಪರಮ ಸಂಪದ್ಯುಕ್ತರಾಗಿ ಅಸಾಧಾರಣ ಗುಣ ಮಂಡಿತರಾಗಿ ವೈಭವದಿಂದ ಮೆರೆಯುತ್ತಿದ್ದಾರೆ.
ಶ್ರೀ ಇನ್ದ್ರದೇವರು ಪರ್ವತಗಳನ್ನು ತಮ್ಮ ವಜ್ರಾಯುಧದಿಂದ ಭೇದಿಸುವ ಶಕ್ತಿ ಸಂಪನ್ನರು.
ಅವರು ಬೇಡಿದ ಅಭೀಷ್ಟಗಳನ್ನು ನೀಡುವುದರಲ್ಲಿ ತ್ರಿಲೋಕ ಪ್ರಸಿದ್ಧರಾದ ಕಲ್ಪವೃಕ್ಷ - ಕಾಮಧೇನು - ಚಿಂತಾಮಣಿಗಳಿಂದ ಶೋಭಿಸುತ್ತಿದ್ದಾರೆ ಮತ್ತು ಅವರು ಸರ್ವದಾ ಶ್ರೇಷ್ಠವಾದ ಐರಾವತವನ್ನು ಏರಿ ಮರೆಯುತ್ತಾ ದೇವತೆಗಳಿಗೆ ನಾಯಕರಾಗಿ ವಿರಾಜಿಸುತ್ತಿದ್ದಾರೆ.
ಶ್ರೀ ಸುಜನೇಂದ್ರತೀರ್ಥರೇ! ನೀವೂ ಸಹ ಶ್ರೀ ಇಂದ್ರದೇವರಂತೆ ಸಂಪತ್ತು ವೈಭವಗಳಿಂದ ಮರೆದಿದ್ದೀರಿ.
ನೀವಿ ತ್ರ್ಯಂಬಕ ಶಾಸ್ತ್ರಿಗಳೇ ಮೊದಲಾದ ಪಂಡಿತರ ಅದ್ವೈತವಾದವೆಂಬ ಪರ್ವತಗಳನ್ನು ನಿಮ್ಮ " ವಾಕ್ " ಎಂಬ ವಜ್ರಾಯುಧದಿಂದ ಭೇದಿಸಿದ್ದೀರಿ.
ನಿಮ್ಮಲ್ಲಿ ಬೇಡಿದ ಇಷ್ಟಾರ್ಥಗಳನ್ನು ಕೊಡುವ ನಿಮ್ಮ ಉಪಾಸ್ಯಮೂರ್ತಿ ಶ್ರೀ ಮೂಲರಾಮೋಭಿನ್ನ ಶ್ರೀ ಕೃಷ್ಣದೇವರೆಂಬ ಅಥವಾ ನಿಮ್ಮ ಶಿಷ್ಯನಾದ ಮುಮ್ಮಿಡಿ ಕೃಷ್ಣರಾಜನೆಂಬ ಕಲ್ಪವೃಕ್ಷ - ಕಾಮಧೇನು - ಚಿಂತಾಮಣಿಗಳಿಂದ ಕಂಗೊಳಿಸಿದ್ದೀರಿ.
ನೀವು ಸರ್ವದಾ ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನವೆಂಬ ಐರಾವತದ ಮೇಲೆ ಮಂಡಿಸಿ ಮಾನ್ಯರಾಗಿ ಕಂಗೊಳಿಸಿದ್ದೀರಿ.
ನೀವು ಭೂಸುರರಿಗೆ ನಾಯಕರಾಗಿ ದ್ವೈತ ಸಾಮ್ರಾಜ್ಯವನ್ನಾಳಿ ಕಂಗೊಳಿಸಿದ್ದೀರಿ.
ಇಂತೂ ಶ್ರೀ ಇಂದ್ರದೇವರಂತೆ ಮಹಾ ವೈಭವೋಪೇತರಾದ ಮಹಾ ಮಹಿಮರು ಶ್ರೀ ಸುಜನೇಂದ್ರತೀರ್ಥರು!!!
ಸುಯುಕ್ತಿ ಜಾಲ ಸಹಿತಂ
ಸುಜನಾಮೋದ ಕಾರಿಣಮ್ ।
ಸುರೋತ್ತಮ ಗುರುಪ್ರಖ್ಯಂ
ಸುಜನೇಂದ್ರ ಗುರುಂಭಜೇ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ