ಬೆಂಗಳೂರಿನ ಪಿಟೀಲು ವಾದಕ ಶ್ರೀ ಎಸ್. ಶಶಿಧರ್ ಅವರಿಗೆ "ಸಂಗೀತ ಭಾರ್ಗವ" ಪ್ರಶಸ್ತಿ ಪ್ರದಾನ
ಹೊಸಪೇಟೆ : ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯು 1992ರಲ್ಲಿ ಸ್ಥಾಪನೆಯಾಗಿ ಸತತವಾಗಿ ತಿಂಗಳ ಕೊನೆಯ ಭಾನುವಾರ
' ಶಂಕರ ತತ್ವ ' ಎಂಬ ಶೀರ್ಷಿಕೆಯಲ್ಲಿ ಮಾಸಿಕ ಚಿಂತನಾ ಸಭೆಯನ್ನು ನಡೆಸುತ್ತಿದೆ.
ವೃತ್ತಿಯಲ್ಲಿ ವಕೀಲರು, ನೋಟರಿಗಳೂ ಆಗಿರುವ ಶ್ರೀ ಕಲ್ಲoಭಟ್ಟರು ಏಕಾಂಗಿಯಾಗಿ ಇದರ ಜವಾಬ್ದಾರಿಯನ್ನು ಹೊತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಪ್ರತಿ ತಿಂಗಳು ಎಲೆ ಮರೆಯ ಕಾಯಿಯಂತೆ ಇರುವ ಎಲ್ಲಾ ಕಲಾ ಪ್ರಕಾರಗಳ ಅಂದರೆ, ಕಲೆ, ಸಾಹಿತ್ಯ , ಸಂಗೀತ, ನಾಟಕ, ವಿಜ್ಞಾನ, ಗಮಕ ಹೀಗೆ ಹಲವಾರು ಕ್ಷೇತ್ರದ ಸಾಧಕರನ್ನು ಗುರುತಿಸಿ, ಗೌರವ ಸನ್ಮಾನ ಮಾಡಿ, ಸೂಕ್ತವಾದ ಬಿರುದುಗಳನ್ನು ಕೊಟ್ಟು ಗೌರವ ಸನ್ಮಾನ ಮಾಡುತ್ತಿದ್ದಾರೆ.
ಈವರೆಗೆ 394 ಕಾರ್ಯಕ್ರಮಗಳು ನಡೆದಿದ್ದು, ಸುಮಾರು ಸಾವಿರಾರು ಕಲಾವಿದರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕದಾದ್ಯಂತ ಕಲಾವಿದರನ್ನು ಆಹ್ವಾನಿಸಿ ಗೌರವಿಸುವ ಉದಾರ ಮನೋಭಾವ ಶ್ರೀ ಭಟ್ಟರದು.
ಬೆಂಗಳೂರಿನ ಬಳ್ಳಾರಿ ಕೆ ಸುರೇಶ್ (ವಯಲಿನ್), ಜಿ. ಎಲ್. ರಮೇಶ್ ಮತ್ತು ಹೆಚ್. ಎಲ್. ಗೋಪಾಲಕೃಷ್ಣ (ಮೃದಂಗ), ಚಿಂತಲಪಲ್ಲಿ ಸೋಮಶೇಖರ್ (ಗಾಯನ) ಹೀಗೆ ಅನೇಕ ಕಲಾವಿದರು ಈ ಗೌರವವನ್ನು ಸ್ವೀಕರಿಸಿದ್ದಾರೆ.
ಅಕ್ಟೋಬರ್ 27ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪಿಟೀಲು ವಾದಕ ಶ್ರೀ ಎಸ್. ಶಶಿಧರ ಅವರಿಗೆ 'ಸಂಗೀತ ಭಾರ್ಗವ' ಎಂಬ ಬಿರುದನ್ನು ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ವಿಜಯನಗರ ಸಾಮ್ರಾಜ್ಯ ಸಂಗೀತ, ಸಾಹಿತ್ಯ, ಕಲೆಗಳಿಗೆ ಬಹಳ ಪ್ರೋತ್ಸಾಹ ಕೊಡುತ್ತಿದ್ದ ಕಾಲವಿತ್ತು. ರಾಜಾಶ್ರಯದಿಂದ ಪ್ರಜಾಶ್ರಯದತ್ತ ವಾಲಿದ ಮೇಲೆ ಸಂಗೀತ ಭಾರತಿ ಅಂತಹ ಸಂಸ್ಥೆಗಳ ಅಗತ್ಯತೆ ಎದ್ದು ಕಾಣುತ್ತದೆ.
ಈ ಸಂಸ್ಥೆಗೆ ಶ್ರೀ ಶೃಂಗೇರಿ ಶಾರದಾ ಪೀಠದ ಉಭಯ ಜಗದ್ಗುರುಗಳು, ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಅನೇಕ ಘನವ್ಯಕ್ತಿಗಳ ಆಶೀರ್ವಾದ ಇದೆ. ಸಂಗೀತ ಭಾರತಿ ಅಂತಹ ಸಂಸ್ಥೆಗಳ ಸಂತತಿ ಸಾವಿರವಾಗಲಿ. ಅವರ ಕಾರ್ಯಚಟುವಟಿಕೆಗಳು ನಿರಂತರವಾಗಿ, ನಿರಾತಂಕವಾಗಿ ಬಹಳ ಕಾಲ ನಡೆಯಲಿ ಎಂದು ಪ್ರಾರ್ಥಿಸೋಣ.🙏🙏