ಬೆಂಗಳೂರು:ನಗರದ ಯಶವಂತಪುರ ತ್ರಿವೇಣಿ ರಸ್ತೆಯಲ್ಲಿರುವ ಬಾಪು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ವತಿಯಿಂದ ವಿಶ್ವವಿಖ್ಯಾತ ಇಂಡೋ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ರರವರ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶಾಲಾ ಮಕ್ಕಳಲ್ಲಿ ವಿಜ್ಞಾನ ಹಾಗೂ ಸಾಹಸಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗುರುವಾರ ಬೆಳಿಗ್ಗೆ ಶಾಲೆಯ ಆವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪ್ರಸಿದ್ದ ವಿಜ್ಞಾನಿ ಡಾ. ಎ. ಎಸ್. ಕಿರಣ್ ಕುಮಾರ್ ರವರು ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸುನೀತಾ ವಿಲಿಯಂಸ್ ರವರ ಅದ್ಭುತ ಸಾಧನೆ ಹಾಗೂ ಅವರ ಪರಿಶ್ರಮವು ಮನುಕುಲಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ವೈಜ್ಞಾನಿಕ ಮಾಹಿತಿಗಳನ್ನೊಳಗೊಂಡ ವಿಚಾರ ಗಳನ್ನು ಮಂಡಿಸಿದ ಅವರು, ಅವುಗಳ ಮಹತ್ವ ಹಾಗೂ ಉಪಯುಕ್ತತೆಯ ಬಗ್ಗೆ ವಿವರಿಸಿದರು. ಶಾಲಾ ಮಕ್ಕಳಲ್ಲಿ, ಅವರಲ್ಲಿರಬಹುದಾದ ವೈಜ್ಞಾನಿಕ ಅರಿವನ್ನು ಜಾಗೃತಿಗೊಳಿಸುವ ಮಾತುಗಳು ಸಭೆಯಲ್ಲಿ ಉಪಸ್ಥಿತರಿದ್ದವರಲ್ಲಿ ವಿಜ್ಞಾನ ರಂಗದಲ್ಲಿ ಆಸಕ್ತಿ ಮೂಡಿಸುವಲ್ಲಿ ಪ್ರೇರಕವಾಗಿತ್ತು ಹಾಗೂ ಮಕ್ಕಳಲ್ಲಿ ವಿಜ್ಞಾನದ ವಿಷಯದಲ್ಲಿ ಉತ್ಸಾಹವನ್ನು ಹೆಚ್ಚಿಸಿತು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಐ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್. ಕಮಲಮ್ಮನವರು ವಹಿಸಿದ್ದರು.
ಕಾರ್ಯದರ್ಶಿ ಶ್ರೀಮತಿ ರೇಖಾ ಎಸ್., ನಿರ್ದೇಶಕ ಸುಭಾಷ್ ಎಸ್. ಹಾಗೂ ಇತರೆ ಪ್ರಮುಖರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.