ಶ್ರೀಸ್ವರ್ಣಗೌರಿ ವ್ರತ.

varthajala
0

06-09-2024 -  ಶ್ರೀಸ್ವರ್ಣಗೌರಿ ವ್ರತ.

 ಸರ್ವರಿಗೂ ಹಬ್ಬದ ಶುಭಾಶಯಗಳು.

ಸುಖ ದಾಂಪತ್ಯವನ್ನು ಕರುಣಿಸುವ, ಶ್ರೀಗೌರಿದೇವಿ ಎಲ್ಲರನ್ನೂ ಅನುಗ್ರಹಿಸಲೆಂದು ಬೇಡೋಣ.

ಸ್ವರ್ಣಗೌರಿ ವ್ರತ.


 ಇದು ಮನೋನಿಯಾಮಕ ಶ್ರೀರುದ್ರದೇವರ ಮನೋವಲ್ಲಭೆಯಾದ, ವಧುಗಳೆಲ್ಲರೂ ಮದುವೆಯಂದು ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳುವ ಮೊದಲು ದೀರ್ಘ ಸೌಮಂಗಲ್ಯ ಭಾಗ್ಯಕ್ಕಾಗಿ ಪೂಜಿಸಿ ಪ್ರಾರ್ಥಿಸುವ ಗೌರಿ ಸ್ವರೂಪದ ಶ್ರೀಪಾರ್ವತಿ ದೇವಿಯನ್ನು ಪೂಜಿಸುವ ದಿನ. 

  ಗೌರಿ ಎಂದರೆ ತಿಳಿಯಾದ ಬಿಳಿ ಬಣ್ಣ ಮಿಶ್ರಿತ ಸುವರ್ಣ (ಬಂಗಾರ) ವರ್ಣ ಎಂದರ್ಥ.*

 ಇಂತಹ ಪಾರ್ವತಿ ದೇವಿ ಶಿವ ನನ್ನು ವರಿಸಲೆಂದು ಸ್ವತಃ ತಾನೇ ಮಾಡಿದ ವ್ರತವಿದು. ಹಾಗಾಗಿ ಇದು ಅತ್ಯಂತ ಫಲಪ್ರದ ವಾದ ವ್ರತವಾಗಿದೆ. ಈ ವ್ರತವನ್ನು ಕೇವಲ ಮಹಿಳೆಯರು ಮಾತ್ರ ಆಚರಿಸದೆ, ದಂಪತಿ ಒಟ್ಟಿಗೆ ಆಚರಣೆ ಮಾಡಿದರೆ ಫಲ ಹೆಚ್ಚು.

  ಹಿಂದೆ ಪರ್ವತರಾಜನು ತನ್ನ ಮಗಳಾದ ಪಾರ್ವತಿಯನ್ನು ನಾರಾಯಣ ನಿಗೆ ಕೊಟ್ಟು ಮದುವೆ ಮಾಡಲು ಯೋಚಿಸಿದ.‌ ಆದರೆ ಪಾರ್ವತಿ, ರುದ್ರದೇವರನ್ನು ಮದುವೆಯಾಗಬೇಕೆಂದು ಇಚ್ಚೆಪಟ್ಟಿದ್ದಳು. ತಂದೆಯ ಮನದ ಇಂಗಿತ ಅರಿತು, ಮನನೊಂದ ಪಾರ್ವತಿ ಖಿನ್ನಳಾಗಿ ಮನೆ ಬಿಟ್ಟು ಕಾಡು ಸೇರಿದಳು. ಶಿವನನ್ನೇ ಪತಿಯನ್ನಾಗಿ ಪಡೆಯಬೇಕೆಂದು ಉದ್ದೇಶಿಸಿ ಮರಳಿನಿಂದ ಲಿಂಗ ವನ್ನು ತಯಾರಿಸಿ ಭಕ್ತಿಯಿಂದ ಪೂಜಿಸಿದಳು. ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಶಿವನನ್ನು ಮೆಚ್ಚಿಸಿದಳು. ಆ ದಿನವೇ ಭಾದ್ರಪದ ಶುಕ್ಲ ತೃತೀಯಾ ತಿಥಿ.

 ಈ ವ್ರತವನ್ನು ಮಾಡಿದ್ದರಿಂದ ಪಾರ್ವತಿ ದೇವಿ ಶಿವನನ್ನು ವರಿಸಿ ಅಖಂಡ ಸೌಭಾಗ್ಯ ವನ್ನು ಪಡೆದಳು. ಅಂದಿನಿಂದ ಸೌಭಾಗ್ಯಕ್ಕಾಗಿ ಈ ವ್ರತದ ಮೂಲಕ ಶ್ರೀಉಮಾ ಮಹೇಶ್ವರ ರನ್ನು ಪೂಜಿಸುವುದು ರೂಢಿಯಾಗಿದೆ.

ಗೌರಿ

 ಪರ್ವತ ರಾಜನ ಮಗಳಾದ ಪಾರ್ವತಿ ದೇವಿಯು ಸಹಜವಾಗಿ ಶ್ಯಾಮಲ(ಸ್ವಲ್ಪ ಕಪ್ಪು) ವರ್ಣದವಳು. ಈಕೆ ಶ್ರೀರುದ್ರದೇವರನ್ನು ಮದುವೆಯಾಗಬೇಕೆಂಬ ಬಯಕೆ ಹೊಂದಿರುತ್ತಾಳೆ. ಆದರೆ ಶಂಖ (ತಿಳಿ ಬಿಳಿ) ವರ್ಣದ ರುದ್ರದೇವರು ಕಪ್ಪು ವರ್ಣದ ಪಾರ್ವತಿಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಆಗ ದೇವಿಯು ಬ್ರಹ್ಮನ ಕುರಿತು ತಪಸ್ಸು ಆಚರಿಸುತ್ತಾಳೆ. ಈಕೆಯ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವರು ಪ್ರತ್ಯಕ್ಷನಾಗಿ ಪಾರ್ವತಿಯ ಬಳಿ ಬೇಡಿಕೆ ಏನೆಂದು ಕೇಳಿದ. ಆಗ ಪಾರ್ವತಿದೇವಿಯು ತನ್ನ ದೇಹದಲ್ಲಿನ ಕಪ್ಪು ಬಣ್ಣದಿಂದ ಶಿವ ನನ್ನನ್ನು ವರಿಸಲು ಇಚ್ಛಿಸುತ್ತಿಲ್ಲ. ಆದರೆ ನಾನು ರುದ್ರದೇವರನ್ನೇ ಮದುವೆಯಾಗಬೇಕೆ ಎಂದಳು. ನಸುನಕ್ಕ ಬ್ರಹ್ಮದೇವರು, ಆಕೆಯನ್ನು ಅನುಗ್ರಹಿಸುತ್ತಾರೆ. ಆಗ ಆಕೆಯ ದೇಹದಲ್ಲಿದ್ದ ಕಪ್ಪುವರ್ಣ ಹೊರಬಂದು ಕಾಳಿ(ಕಪ್ಪು)ರೂಪವಾಗುತ್ತದೆ. ಇತ್ತ ದೇವಿ ತಿಳಿ ಬಂಗಾರದ ಬಣ್ಣ ಪಡೆದು ಸಂಭ್ರಮಿಸಿದಳು. ಹಾಗಾಗಿ ಶ್ರೀ ಪಾರ್ವತಿ ದೇವಿಯನ್ನು ಸ್ವರ್ಣಗೌರಿ ಎನ್ನಲಾಗುತ್ತದೆ.

  ದೇವಿಯನ್ನು ಭಾದ್ರಪದ ಮಾಸ ತೃತೀಯ(ತದಿಗೆ)ದಂದು ಶ್ರದ್ಧಾ, ಭಕ್ತಿಯಿಂದ ವಿಶೇಷವಾಗಿ ಪೂಜಿಸಬೇಕು.

 ಈ ದಿನ ಮುಂಜಾನೆ ಎದ್ದು ಶುಚಿರ್ಭೂತರಾಗಿ ಮನೆಯ ಮುಂಬಾಗಿಲು ಹಾಗೂ ದೇವರ ಮನೆಯ ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. 

ದೇವರ ಮನೆಯಲ್ಲಾಗಲಿ, ಅಂಗಳದಲ್ಲಾಗಲಿ ಗೋಮಯ, ಗೋಮೂತ್ರದಿಂದ ಶುದ್ಧೀಕರಿಸಬೇಕು. ಆ ಜಾಗದಲ್ಲಿ ಮಂಟಪ ನಿರ್ಮಾಣ ಮಾಡಿ, ಅದರ ಮಧ್ಯೆ ಬಾಳೆ ಎಲೆ ಹರಡಿ  ಅದರ ಮೇಲೆ ಅಕ್ಕಿ ರಾಶಿ ಹಾಕಬೇಕು. ಎಂಟು ದಳದ ಪದ್ಮ ಬರೆದು ಮಧ್ಯದಲ್ಲಿ ಉಳ್ಳವರು ಬೆಳ್ಳಿ ಅಥವಾ ತಾಮ್ರ, ಹಿತ್ತಾಳೆ ತಂಬಿಗೆಯನ್ನು ಇಡಬೇಕು. ಮಂಗಳದ್ರವ್ಯದಿಂದ ಕೂಡಿದ ನೀರನ್ನು ತುಂಬಿ, ಮೇಲೆ ಮಾವಿನ ಎಲೆಗಳ ಗೊಂಚಲು ಹಾಗೂ ತೆಂಗಿನಕಾಯಿ ಇಡಬೇಕು. ತೆಂಗಿನಕಾಯಿಗೆ ಅರಿಸಿನ ಹಚ್ಚಿ ಅದರ ಮೇಲೆ ದೇವಿಯ ಮೊಗವನ್ನು  ಕುಂಕುಮದಿಂದ ಬರೆಯಬೇಕು.

 ಇದು ಸಾಧ್ಯವಾಗದಿದ್ದರೆ ಶುದ್ಧ ಮಣ್ಣು ಅಥವಾ ಅರಿಸಿನದಿಂದ ಮಾಡಿದ ಗೌರಿದೇವಿಯ ಮೂರ್ತಿಯನ್ನು ಇಟ್ಟು ಪೂಜಿಸಬಹುದು. 

  ದೇವಿಯನ್ನು ಷೋಡಶೋಪಚಾರದಿಂದ ಪೂಜಿಸಬೇಕು. ಮೊದಲಿಗೆ, 

ಅಕ್ಷಮಾಲಾಭಯಾಬ್ಜಾನಿ ಕರೈಃ ಶೂಲಂ ಚ ಬಿಭ್ರತೀಮ್| ಸ್ವರ್ಣರತ್ನಧರಾಂ ದೇವೀಂ ದಿವ್ಯಮೌಕ್ತಿಕಧಾರಿಣೀಮ್||

ಪೂರ್ಣೇಂದುವದನಾಂ ದೇವೀಂ ಕೋಟಿಸೂರ್ಯಸಮಪ್ರಭಾಮ್| ರತ್ನಸಂಯುಕ್ತಹಾರಾಂ ಚ ಬ್ರಹ್ಮಸೂತ್ರೇಣ ಶೋಭಿತಾಮ್||

ರುದ್ರಾಣೀಂ ರುದ್ರವಾಮಾಂಗೀಂ ಶಂಕರೀಂ ಲೋಕಶಂಕರೀಮ್| ಸಮಸ್ತಲೋಕಜನನೀಂ ಸ್ವರ್ಣಗೌರೀಂ ನಮಾಮ್ಯಹಮ್|| 

ಎಂದು ಧ್ಯಾನ ಮಾಡಬೇಕು.

 ಸಾಧ್ಯವಾಗದವರು 

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|

ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ|| ಎಂಬ ಮಂತ್ರದಿಂದ ದೇವಿಯನ್ನು ಭಕ್ತಿಯಿಂದ ಧ್ಯಾನಿಸಬೇಕು.

  ಧ್ಯಾನ, ಆವಾಹನ, ಆಸನ, ಅರ್ಘ್ಯ, ಪಾದ್ಯ, ಆಚಮನ,ಸ್ನಾನ, ಪಂಚಾಮೃತಾಭಿಷೇಕ ನಡೆಸಿ, ವಸ್ತ್ರ ಹಾಗೂ ಉಪವೀತ ಸಮರ್ಪಿಸಬೇಕು. ಗಂಧ, ಅರಿಶಿನ, ಕುಂಕುಮ ಅರ್ಪಿಸಿ, ಕಾಡಿಗೆ, ಕನ್ನಡಿ ಮತ್ತಿತರ ಅಲಂಕಾರಿಕ ಸಾಮಗ್ರಿಗಳು ಮತ್ತು ಮಂಗಳದ್ರವ್ಯಗಳನ್ನು ಇಟ್ಟು ಅರ್ಚಿಸಬೇಕು. ಹದಿನಾರು ಎಳೆಯ ದಾರ ಗಳನ್ನು ತೆಗೆದುಕೊಂಡು

ಹರಿನಾರು ಗ್ರಂಥಿ(ಗಂಟು) ಹಾಕಬೇಕು. ಈ ದಾರಗಳನ್ನು ದೇವಿಯ ಮುಂದಿಟ್ಟು ಪೂಜಿಸಬೇಕು.

 ನಾನಾ ವಿಧವಾದ ಭಕ್ಷ್ಯಗಳನ್ನು ದೇವಿಗೆ

ನೈವೇದ್ಯವಾಗಿ ಸಮರ್ಪಣೆ ಮಾಡಬೇಕು. ಚೆನ್ನಾಗಿ ಪಕ್ವವಾದ ಹಣ್ಣುಗಳನ್ನು ತಾಯಿಗೆ ಅರ್ಪಿಸಬೇಕು. ಮಹಾ ಮಂಗಳಾರತಿ ಮಾಡಿ ನಾನಾ ವಿಧವಾದ ಪತ್ರೆ, ಪುಷ್ಪಗಳನ್ನು ಸಮರ್ಪಿಸಿ, ನಮಿಸಿ ತಾಯಿಯನ್ನು ಬೇಡಬೇಕು. 

 ನಂತರ ದೇವದೇವ ಸಮಾಗಚ್ಛ ಪ್ರಾರ್ಥಯೇಅಹಂ ಜಗತ್ಪತೇ|

*ಇಮಾಂ ಮಯಾ ಕೃತಾಂ ಪೂಜಾಂ ಗೃಹಾಣ ಸುರಸತ್ತಮ||*ಎಂದು ಪ್ರಾರ್ಥಿಸಬೇಕು.

 ಇದಾದ ಮೇಲೆ ದಾರವನ್ನು ತೆಗೆದುಕೊಂಡು ಪಾರ್ವತೀಶಂಕರೌ ಪೂಜ್ಯೌ ಭಕ್ತ್ಯಾ ಪರಮಯಾ ಮುದಾ|

ದೋರಕಂ ಷೋಡಶಗುಣಂ ಬಧ್ನೀಯಾದ್ ದಕ್ಷಿಣ ಕರೇ||

ಎಂದು ದಾರವನ್ನು ಕಟ್ಟಿಕೊಳ್ಳಬೇಕು.

 ನಂತರ ವಿಪ್ರರಿಗೆ ವಾಯನದಾನ ಹಾಗೂ ಸುಮಂಗಲಿಯರಿಗೆ ಬಾಗಿನ ನೀಡಿ, ಅವರ ಆಶೀರ್ವಾದ ಬೇಡಿ ಪಡೆಯಬೇಕು. 

 ಶ್ರೀರುದ್ರದೇವರು ಮನೋ ನಿಯಾಮಕರಾದರೇ, ಶ್ರೀಪಾರ್ವತಿ ದೇವಿ ಮತಿ(ಜ್ಞಾನ) ಪ್ರೇರಕಳು. ಅಂತಹ ತಾಯಿಯನ್ನು 

  ಶ್ರೀಹರಿಯ ನುತಿಸುವುದಕೆ ಮತಿ ನೀಡು,  ಮತಿ ಪ್ರೇರಕಳಾದ ಕರುಣಾಮಯಿ ಮಹಾತಾಯಿ ಎಂದು ಬೇಡೋಣ.

ಜಯ ದೇವೀ ನಮಸ್ತುಭ್ಯಂ ಜಯ ಭಕ್ತವರಪ್ರದೇ|

ಜಯ ಶಂಕರವಾಮಾಂಗೇ ಜಯ ಮಂಗಲಮಂಗಲೇ||

 ಸರ್ವರಿಗೂ ದೇವಿಯ ಅನುಗ್ರಹ ದೊರೆಯಲೆಂದು ಈ ಮೂಲಕ ಪ್ರಾರ್ಥಿಸುತ್ತೇನೆ.

ಶ್ರೀಶ ಚರಣಾರಾಧಕ:

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,

ಆನೇಕಲ್.



Post a Comment

0Comments

Post a Comment (0)