" ಶ್ರೀ ಜಗನ್ನಾಥದಾಸರ ಆರಾಧನಾ ಮಹೋತ್ಸವ ವಿಶೇಷ "

varthajala
0

" ಶ್ರೀ ಕೃಷ್ಣ ಪರಮಾತ್ಮನಿಗೆ ಭಕ್ತ ಜನರ ವಿಷಯದಲ್ಲಿ ಇರುವ ಅತಿಶಯವಾದ ಮಾತೃ ವಾತ್ಸಲ್ಯವನ್ನು ತೋರಿಸುತ್ತಾನೆ "


ತನಯನಂ = ಮಗನನ್ನು 

ಬಿಗಿದಪ್ಪಿ = ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು 

ರಂಬಿಸಿ = ಪ್ರೇಮದಿಂದ ಸಮಾಧಾನ ಪಡಿಸಿ 

ಕನಲಿಕೆಯ = ಕೂಸಿಗಿರುವ ತನ್ನ ಮೇಲಿನ ಕಳವಳವನ್ನು 

ಕಳೆವಂತೆ = ಪರಿಹಾರ ಮಾಡುವ ಹಾಗೆ 

ಮಧುಸೂದನನು = ಸಜ್ಜೀವರನ್ನು ಸುಖದೆಡೆಗೆ ಒಯ್ಯುವ 

ತನ್ನವರು = ತನ್ನ ನಿಜವಾದ ಭಕ್ತರು 

ಇದ್ದೆಡೆಗೆ = ಇರುತಕ್ಕಂತಹ ಸ್ಥಳಕ್ಕೆ 

ಬಂದು = ಆಗಮಿಸಿ 

ಒದಗಿ = ಒಳ್ಳೆಯ ಸಮಯಕ್ಕೆ ಒದಗುವನಾಗಿ 

ಸಲಹುವನು = ಸಂರಕ್ಷಿಸುತ್ತಾನೆ!

ಜನನಿಯನು ಕಾಣದಿಹ ಬಾಲಕ ।

ನೆನೆನೆನೆದು ಹಲಬುತಿರೆ ಕತ್ತಲೆ ।

ಮನೆಯೊಳಡಗಿದ್ದ ನೋಡುತ -

ನಗುತ ಹರುಷದಲಿ ।।

ತನಯನಂ ಬಿಗಿದಪ್ಪಿ ರಂಬಿಸಿ ।

ಕನಲಿಕೆಯ ಕಳೆವಂತೆ । ಮಧುಸೂ ।

ದನನು ತನ್ನವರಿದ್ದೆಡೆಗೆ -

ಬಂದೊದಗಿ ಸಲಹುವನು ।। 2/11 ।।

" ಉಪಾಧಿಖಂಡನ " ದಲ್ಲಿ -

ಅಜ್ನತಾಖಿಲಸಂವೇತ್ತು-

ರ್ಘಟತೇ  ನ ಕುತಶ್ಚನ ।।

1. ತಾಯಿಯನ್ನು ಕಾಣದಿಹ ಶಿಶುವು ಅವಳನ್ನು ನೆನೆನೆನೆದು ಹಲಬವಾಗ ಕತ್ತಲೆ ಮನೆಯಲ್ಲಿ ಬಚ್ಚಿಟ್ಟುಕೊಂಡು ಅವನನ್ನು ನೋಡುತ್ತಾ -  ನಗುತ್ತಾ - ಹರುಷದಿಂದ ಅವನ ಬಳಿಗೆ ಧಾವಿಸಿ - ಬಿಗಿಯಾಗಿ ಅಪ್ಪಿಕೊಂಡು ಸಮಾಧಾನ ಪಡಿಸಿ ನೋವನ್ನು ಪರಿಹರಿಸುವಂತೆ - ಶ್ರೀ ಮಧುಸೂದನನಾದ ಶ್ರೀ ಕೃಷ್ಣ ಪರಮಾತ್ಮನು ತನ್ನ ಭಕ್ತರಿದ್ದಲ್ಲಿಗೆ ಬಂದೊದಗಿ ಸಲಹುವನು!

2. ಶ್ರೀ ಕೃಷ್ಣ ಪರಮಾತ್ಮಾನುಸಂದಾ ನೋಡುತ್ತಿರುವನೆಂದೂ - ತನಗಾಗಿ ವಿಶೇಷ ರೀತಿಯಲ್ಲಿ ಹಂಬಲಿಸುವ ಭಕ್ತರನ್ನು ತುಂಬಾ ಪ್ರೀತಿಯಿಂದ ಪಾಲಿಸುವನೆಂದೂ ಇಲ್ಲಿ ಅತ್ಯಂತ ಮನೋಜ್ಞವಾಗಿ ನಿರೂಪಿಸಿದ್ದಾರೆ. 

3. ತಾಯಿ ಮಗುವಿಗೆ ಕಾಣದಂತಿದ್ದರೂ ತಾನು ಮಾತ್ರ ಅವನನ್ನು ಸದಾ ಗಮನಿಸುತ್ತಲೇ ಇರುವಂತೆ - ಶ್ರೀ ಕೃಷ್ಣ ಪರಮಾತ್ಮನು ನಮಗೆ ಕಾಣದಂತಿದ್ದರೂ ನಮ್ಮನ್ನು ತಪ್ಪದೆ ಪಾಲಿಸುತ್ತಾ ಇರುವನು. 

4. ತಾಯಿಯು ಕತ್ತಲೆಯ ಕೋಣೆಯಲ್ಲಿರುವುದರಿಂದ ಮಗುವಿಗೆ ತಾಯಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ - ಅದರಂತೆ ಶ್ರೀ ಕೃಷ್ಣ ಪರಮಾತ್ಮನು ತನ್ನ " ಮಾಯೆ " ಯೆಂಬ " ಕತ್ತಲೆ " ಯಲ್ಲಿ ಅಡಗಿರುವುದರಿಂದ " ಜೀವ " ನಿಗೆ ಶ್ರೀ ಕೃಷ್ಣ ಪರಮಾತ್ಮನು ಕಾಣುತ್ತಿಲ್ಲ!

5. ತಾಯಿಯು ಕತ್ತಲಲ್ಲಿ ಇದ್ದರೂ ಅವಳಿಗೆ ಆ ಕತ್ತಲೆಯ ಭಯವಿಲ್ಲ - ಅದರಂತೆ ಶ್ರೀ ಕೃಷ್ಣ ಪರಮಾತ್ಮನು ಜೀವನನ್ನು ಕತ್ತಲೆಯಲ್ಲಿರಿಸಿದ್ದರೂ ಶ್ರೀ ಕೃಷ್ಣ ಪರಮಾತ್ಮನಿಗೆ ಮಾತ್ರ ಅಜ್ಞಾನಾದಿ ದೋಷಗಳಿಲ್ಲ!

6. ತಾಯಿ ಬೇರೆಲ್ಲವನ್ನೂ ತೊರೆದು ತನಗಾಗಿ ಹಂಬಲಿಸ ತೊಡಗಿದಾಗ ಮಗುವಿನ ಬಳಿಗೆ ತಾಯಿಯು ಧಾವಿಸುವಂತೆ - ಶ್ರೀ ಕೃಷ್ಣ ಪರಮಾತ್ಮನು ಸಕಲ ವಿಷಯಗಳ ಮೇಲಿನ ಆಸೆಯನ್ನು ತೊರೆದು ಪರಮ ವೈರಾಗ್ಯದಿಂದ ತನ್ನನ್ನೇ ಆರಾಧಿಸುವವರಿಗೆ ದರ್ಶನ ನೀಡಿ ಉದ್ಧರಿಸುವನು. 

ಜನನಿಯನು = ತನ್ನ ತಾಯಿಯನ್ನು 

ಕಾಣದಿಹ ಬಾಲಕ = ಕಾಣದೇ ಇರುವ ಬಾಲಕ 

ನೆನೆನೆನೆದು = ತಾಯಿಯನ್ನು ಸ್ಮರಿಸಿಕೊಂಡು 

ಹಲಬುತಿರೆ = ಹಂಬಲಿಸುತ್ತಿರಲಾಗಿ 

ಕತ್ತಲೆ ಮನೆಯೊಳಗೇ = ಅಂಧಃಕಾರ ಪೂರ್ಣವಾದ ಮನೆಯಲ್ಲಿ 

ಅಡಗಿದ್ದವನ = ಅಡಗಿಕೊಂಡಿರುವ ಮಗುವನ್ನು 

ಕತ್ತಲೆ ಮನೆಯೊಳಗೆ =  ಅಂಧಃಕಾರ ಪೂರ್ಣವಾದ ಮನೆಯೊಳಗೆ 

ಅಡಗಿದ್ದು = ತಾಯಿಯು ಅಡಗಿಕೊಂಡಿದ್ದು 

ಅವನ = ಮಗನ 

ನೋಡುತ = ಮಗನ ಹಂಬಲವನ್ನು ನೋಡುತ 

ನಗುತ = ಮಂದಹಾಸ ಬೀರುತ್ತಾ 

ಹರುಷದಲಿ = ಸಂತೋಷದಿಂದ 


ಜನನಿ [ ತಾಯಿ ] = ಶ್ರೀ ಕೃಷ್ಣ ಪರಮಾತ್ಮ - ಶ್ರೀ ಹರಿ 

ಬಾಲಕ = ಜೀವಾತ್ಮ 

ಜೀವನಿಗೆ ಅಹಂಕಾರ - ಮಮಕಾರಗಳಿಂದ ಶ್ರೀಮನ್ನಾರಾಯಣನ ಸ್ಪಷ್ಟವಾದ ಜ್ಞಾನವಿರುವದಿಲ್ಲ- ವಾದ್ದರಿಂದ ಅವನು ಆಜ್ಞಾನಾಂಧ ಕತ್ತಲಲ್ಲಿಯೇ ಇರುತ್ತಾನೆ. 

ಆ ಜೀವನು ಸಾತ್ವಿಕನಾಗಿದ್ದರೆ ಸಜ್ಜನ ಸಹವಾಸದಿಂದ ಭಕ್ತನಾಗಿ ಶ್ರೀ ಕೃಷ್ಣ ಪರಮಾತ್ಮನ್ನು ನೆನೆನೆನೆದು ದೇವರನ್ನು ಕಂಡು -

" ಎಂದು ಕಾಂಬೆನೊ "

ಎಂದು ಆರ್ತ ಭಕ್ತಿಯಿಂದ ಹಲಬುತ್ತಿರುವಾಗ ಶ್ರೀ ಕೃಷ್ಣನು ಅವನ ಮನಃಸ್ಥಿತಿಯನ್ನು ಕಂಡು ಅವನಿದ್ದಲ್ಲಿಯೇ ಬಂದು ತನ್ನ ಮಗನಾದ ಭಕ್ತನಿಗೆ ದರ್ಶನ ಭಾಗ್ಯ ಕೊಟ್ಟು ಸಂತೋಷದಿಂದವನನ್ನು ರಮಿಸಿ ಅವನ ಮನದ ಕನಲಿಕೆಯನ್ನು ಕಳೆದು ಸಮೀಚೀನವಾದ ಜ್ಞಾನವನ್ನು ಸಜ್ಜೀವರಿಗೆ ಒದಗಿಸಿ ಅವರನ್ನು ಸಖದೆಡೆಗೆ ಒಯ್ಯುವನು.   

ಇದು ಶ್ರೀ ಕೃಷ್ಣ ಪರಮಾತ್ಮನ ಕರುಣೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವುದು.

ಇದಕ್ಕೆ ಸಂಬಂಧಪಟ್ಟಂತೆ ಒಂದು ಪ್ರಸಂಗ ನೋಡೋಣ -

ಯಮುನಾ ತೀರ. 

ಸಾಯಂಕಾಲದಲ್ಲಿಯ ಬೆಳದಿಂಗಳು. 

ಒಂದು ಬಂಡೆಗಲ್ಲಿನ ಮೇಲೆ ವೇಣು ಮಾಧವನೂ - ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮನು ಕುಳಿತು ಮಧುರವಾಗಿ ವೇಣುನಾದ ಮಾಡುತ್ತಲಿದ್ದ. 

ತರಂಗ ತರಂಗವಾಗಿ ಹೊರ ಬರುತ್ತಿರುವ ಆ ಸುಮಧುರವಾದ ವೇಣುನಾದ ಗೋಪಿಯರ ಮನ ಮನೆಗಳಲ್ಲಿ ರಿಂಗಣವಾಗಹತ್ತಿದವು. 

ಆ ನಾದಕ್ಕೆ ಮರುಳಾಗಿ ಗೋಪಿಕಾ ಸ್ತ್ರೀಯರು ತಮ್ಮ ತಮ್ಮ ಮನೆಗಳನ್ನು ತೊರೆದು ಯಮುನಾತೀರಕ್ಕೆ ಬಂದು ಶ್ರೀ ಕೃಷ್ಣ ಪರಮಾತ್ಮನಿದ್ದಲ್ಲಿಗೆ ಒಬ್ಬೊಬ್ಬರಾಗಿ ಬಂದು ಸೇರಿದರು. 

ವೇಣು ನಾದದ ತಾಳ - ಲಯ ಬದ್ಧಗಳಿಗೆ ಅನುಗುಣವಾಗಿ ಗೋಪಿಯರು ತನ್ಮಯರಾಗಿ ನರ್ತಿಸ ತೊಡಗಿದರು. 

ಶ್ರೀ ಹರಿಯು ಅಷ್ಟೂ ರೂಪಗಳನ್ನು ಧಾರಣೆ ಮಾಡಿ ಪ್ರತಿಯೊಬ್ಬ ಗೋಪಿಕಾ ಸ್ತ್ರೀಯರ ಮುಂಗೈಯನ್ನು ತನ್ನ ಕರ ಕಮಲದಿಂದ ಹಿಡಿದು ಅವರ ಜೊತೆಗೆ ನರ್ತಿಸ ತೊಡಗಿದನು. 

ಆ ರಾಸ ಕ್ರೀಡೆ ದೇವಾ ದೇವಾಂಗನೆಯರಿಗೆ ಸಹ ದಿಗ್ಭ್ರಮೆ ಉಂಟು ಮಾಡುವಷ್ಟು ನಯನ ಮನೋಹರವಾಗಿತ್ತು. 

ಈ ಮಧುರಾನಂದದ ಪಾರವಶ್ಯತೆಯಲ್ಲಿ ಗೋಪಿಕಾ ಸ್ತ್ರೀಯರ ಮನ ಮಂದಿರದಲ್ಲಿ ಈ ಮುರಲೀಧರ ಶ್ರೀ ಕೃಷ್ಣ ನಮ್ಮ ರೂಪ ರಾಶಿಗೆ ಮರುಳಾಗಿ ನಮ್ಮೊಂದಿಗೆ ನರ್ತನ ಮಾಡುತ್ತಿರುವ ಎಂಬ ಅಹಂಕಾರ ಮೂಡಿ ಬಂದಿತು. 

ಇಷ್ಟೇ ಅಲ್ಲದೇ -

ನಾವೆಲ್ಲರೂ ನಮ್ಮ ರೂಪ ಲಾವಣ್ಯದಿಂದ ಶ್ರೀ ಮುಕುಂದನ ಮನಸ್ಸನ್ನು ಹರಣ ಮಾಡಿದ್ದೇವೆ. 

ಶ್ರೀ ಕೃಷ್ಣನನ್ನು ನಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದೇವೆ ಎಂಬ ಅಹಂಕಾರ - ಮಮಕಾರ ಪ್ರತಿಯೊಬ್ಬ ಗೋಪಿಕೆಯರಲ್ಲಿಯೂ ಬಂದಿತು. 

ಅಹಂಕಾರ - ಮಮಕಾರ ಬಂದ ತಕ್ಷಣ ಶ್ರೀ ಕೃಷ್ಣ ಪರಮಾತ್ಮನು ಅದೃಶ್ಯನಾದ. 

ಆಗ ಗಾಬರಿಯಾಗಿ ಕಂಡಕಂಡಲ್ಲಿ ಶ್ರೀ ಕೃಷ್ಣ ಪರಮಾತ್ಮನನ್ನು ಅರಸಿದರೂ ಎಲ್ಲಿಯೂ ಕಾಣಲಿಲ್ಲ. 

ಆರ್ತರಾಗಿ ಗಿಡ - ಹೂವು - ಬಳ್ಳಿ - ಪಕ್ಷಿ - ಮೃಗ ಇತ್ಯಾದಿಗಳಲ್ಲಿ ಶ್ರೀ ಕೃಷ್ಣ ಪರಮಾತ್ಮನ ಇರುವನ್ನು ಕೇಳಿ ಕೇಳಿ ಹತಾಶರಾಗಿ ಗೋಪಿಕಾ ಸ್ತ್ರೀಯರು " ಗೋಪೀಗೀತೆ " ಯನ್ನು ಭಾವಪರವಶರಾಗಿ - ಮೈಮರೆದು ಅತ್ಯುದ್ರೇಕದಿಂದ ಹಾಡ ತೊಡಗಿದರು. 

ಬೇರೆ ದಾರಿ ಕಾಣದೆ ಅವರು ಸುಸ್ವರವಾಗಿ ಅಳಲು ಪ್ರಾರಂಭಿಸಿದರು. 

ಈ ವಿಷಯವನ್ನು ಶ್ರೀ ಶುಕಾಚಾರ್ಯರು -

" ರುರುದುಃ ಸ್ವಸ್ವರನ್ ರಾಜನ್ 

ಕೃಷ್ಣ ದರ್ಶನ ಲಾಲಸಾ: । "

ಎಂದಿದ್ದಾರೆ. 

ಸಾಮಾನ್ಯವಾಗಿ ರೋದನವು ಅಪಸ್ವರವೂ ಹಾಗೂ ಅಸಹ್ಯವಾಗಿರುತ್ತದೆ. 

ಈ ಆರ್ತ ಭಕ್ತರಿಂದ ಬರುವ ರೋದನ ಸುಸ್ವರವೆಂದು ಶ್ರೀ ಶುಕಾಚಾರ್ಯರ ಹಾರ್ದ!

ಗೋಪಿಕಾ ಸ್ತ್ರೀಯರ ಭಕ್ತಿಯ ಪರಾಕಾಷ್ಠತೆಯನ್ನು ಕಂಡು ನಕ್ಕು ಶ್ರೀ ಕೃಷ್ಣ ಪರಮಾತ್ಮನು ಪ್ರೀತನಾದ!

ಶ್ರೀ ಶುಕಾಚಾರ್ಯರು ಅತ್ಯಂತ ಮನೋಹರವಾಗಿ ಈ  ಸನ್ನಿವೇಶವನ್ನು ಚಿತ್ರಿಸಿದ್ದಾರೆ. 

" ತಾಸಾಂ ಆವಿರ್ಭೂತ್ ಶೌರಿ:

ಸ್ವಯಮಾನ ಮುಖಾಂಬುಜಃ ।

ಪೀತಾಂಬರ ಧರಃ ಸ್ರಗ್ವೀ 

ಸಾಕ್ಷಾತ್ ಮನ್ಮಥ ಮನ್ಮಥ: ।।

ಗೋಪಿಕಾ ಸ್ತ್ರೀಯರು ಹಲಬುತ್ತಿರುವಾಗ ಅಹಂಕಾರ - ಅಜ್ಞಾನದ ಕತ್ತಲೆಯಲ್ಲಿ  ಮುಳುಗಿದಾಗ ಶ್ರೀ ಕೃಷ್ಣ ಪರಮಾತ್ಮ ಅದೃಶ್ಯನಾದ. 

ಗೋಪಿಕಾ ಸ್ತ್ರೀಯರು ಸಾತ್ವಿಕ ಜೀವರಾದ್ದರಿಂದ ತಮ್ಮ ಹಂಕಾರಕ್ಕೆ ತಾವು ಪಶ್ಚತ್ತಾಪ ಪಟ್ಟು ಶ್ರೀ ಕೃಷ್ಣ ಪರಮಾತ್ಮನನ್ನು ನೆನೆದು ಹಲಬುತ್ತಿರುವಾಗ ಶ್ರೀ ಕೃಷ್ಣನು ಅದನ್ನು ನೋಡಿ ಅವರನ್ನು ಬಿಗಿದಪ್ಪಿ - ರಂಬಿಸಿ ಕನಲಿಕೆಯನ್ನು ಕಳೆದನು. 

ಇದು ಶ್ರೀ ಮಧುಸೂದನನ ಸ್ವಭಾವ. 

ಆ ಶ್ರೀ ಮಧುಸೂದನ ತನ್ನವರಾದ ಗೋಪಿಕಾ ಸ್ತ್ರೀಯರಿದ್ದಲ್ಲಿಗೆ ಬಂದು ಅಜ್ಞಾನ ಕಳೆದು ಆನಂದ ಕೊಟ್ಟು ಅವರನ್ನು ಸಲಹಿದನು. 

ಇದು ಶ್ರೀ ಜಗನ್ನಾಥ ದಾಸಾರ್ಯರು ಪ್ರಯೋಗಿಸಿದ " ಮಧುಸೂದನ " ಶಬ್ದದ ಸಾರ್ಥಕ್ಯವಾಗಿರುವದು. 

" ಶೋಭನಾಶ್ಚ ತಾ ಉದಾಶ್ಚ -

ಸೂದಾ: ಸಜ್ಜೀವಾ : ।।

ಮಧ್ವಿತ್ಯಾನಂದ ಉದಿಷ್ಟ -

ಇತ್ಯುಕ್ತೇರ್ಮಧು -

ಸುಖಂ ಸೂದಾನ್ನಯತೀತಿ -

ಮಧುಸೂದನಃ ।।

ಸಮೀಚೀನವಾದ ಜ್ಞಾನವುಳ್ಳ ಸಜ್ಜೆವರನ್ನು ಸುಖದೆಡೆಗೆ ಒಯ್ಯುವವನು ಶ್ರೀ ಮಧುಸೂದನ!

1. ಶ್ರೀ ಸಂಕರ್ಷಣ ಒಡೆಯರ ವ್ಯಾಖ್ಯಾನ -

ತಾಯಿ ಸದೃಶ ಶ್ರೀ ಕೃಷ್ಣ ಪರಮಾತ್ಮನು. 

ಕತ್ತಲೆಮನೆ - ಲಿಂಗದೇಹ 

" ತಾಯ ಕಾಣದೆ ಹಂಬಲಿಸೋಣ "

ವೇದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಶ್ರೀ ಕೃಷ್ಣ ಪರಮಾತ್ಮನ ನಾಮ ರೂಪಗಳನ್ನು ಹುಡುಕಿ ಧ್ಯಾನ ಮಾಡೋಣವೇ!

ಹಂಬಲಿಕೆಯನ್ನ ಪರಿಹಾರ ಮಾಡೋಣವೆಂದರೆ -

ಶ್ರೀ ಕೃಷ್ಣ ಪರಮಾತ್ಮ ಪ್ರತ್ಯಕ್ಷವಾಗಿ ಮೋಕ್ಷ ಕೊಡೋಣವೇ!

ಚರಾಚರಾತ್ಮಕವಾದ ಜಗತ್ತನ್ನು ತನ್ನ ಉದರದಲ್ಲಿ ಧರಿಸಿ - ಪ್ರಳಯಾನಂತರ ಸೃಷ್ಟಿ ಕಾಲದಲ್ಲಿ ಯಾವತ್ತೂ ಜೀವರ ಉದರದಿಂದ ಹೊರಗೆ ಸೃಷ್ಟಿ ಮಾಡುವನಾದ್ದರಿಂದ  - ಜಗತ್ತಿಗೆ ತಾಯಿಯಾದ ಶ್ರೀ ಕೃಷ್ಣ ಪರಮಾತ್ಮನ ಪ್ರಾಣಿಗಳಾದ ಮಕ್ಕಳು ಲಿಂಗದೇಹಾಖ್ಯ ಅಂಧಕಾರದ ಮನೆಯಲ್ಲಿ ಅಡಗಿದ್ದಾರೆ. 

ಈ ಜೀವರು ತಾಯಿಯ ಸದೃಶ  ಶ್ರೀ ಕೃಷ್ಣನನ್ನು ಕಾಣದೆ - ವೇದ ಶಾಸ್ತ್ರೋಕ್ತಾನುಸಾರ ಮಾಡುವ ಪ್ರಾರ್ಥನಾ ರೂಪವಾದ ಹಂಬಲ ಯುಕ್ತರಾದ ಪುತ್ರನನ್ನು ನೋಡಿ - ನಕ್ಕವನಾಗಿ ಅಂತಃಕರಣದಿಂದ ತಾಯಿಯೋಪಾದಿಯಲ್ಲಿ ಪ್ರತ್ಯಕ್ಷನಾಗಿ ಕತ್ತಲೆಮನೆ ಎಂಬ ಅಂಧಕಾರ ಸಹಿತವಾದ ಲಿಂಗದೇಹಾಖ್ಯ ಮನೆಯಲ್ಲಿ ಬಿಡಿಸಿ - ಆಲಿಂಗನಾದಿಗಳಿಂದ ಸಮಾಧಾನ ಮಾಡಿ - ಮೋಕ್ಷವನ್ನು ಕೊಡುತ್ತಾನೆ ಶ್ರೀ ಕೃಷ್ಣ ಪರಮಾತ್ಮನು  ಈ ಪ್ರಕಾರ ಯಾರನ್ನ ಸಂರಕ್ಷಣೆ ಮಾಡುತ್ತಾನೆ ಎಂದರೆ -

ತನ್ನ ಹಂಬಲಿಸತಕ್ಕವರು ಯಾರೋ ಅಂಥವರನ್ನು ಎಂದು ತಾತ್ಪರ್ಯ!

2. ಶ್ರೀ ಭಾವ ಪ್ರಕಾಶಿಕಾ " ದಲ್ಲಿ -

ತಾಯಿಯು - ಮಗುವು ತನ್ನನ್ನು ಕಾಣದಿದ್ದಾಗ - ಏನು ಮಾಡುವುದೆಂಬುದನ್ನು ನೋಡುವುದಕ್ಕಾಗಿ ಶಿಶುವನ್ನು ಪಡಸಾಲೆಯಲ್ಲಿ ಬಿಟ್ಟು ತಾನು ಕತ್ತಲೆಯ ಕೋಣೆಯಲ್ಲಿ ಮರೆಯಾಗಿ - ನಿಂತು ನೋಡುತ್ತಿರುವಾಗ ಆ ಮಗುವು ತಾಯಿಯ ಕಾಣದೆ ಆಕೆಯನ್ನು ನೆನೆಸಿಕೊಂಡು ಹಂಬಲಿಸುವುದನ್ನು ನೋಡಿ ಸಂತೋಷದಿಂದ ಓಡಿ ಬಂದು ಆ ಮಗುವನ್ನೆತ್ತಿ ಬಿಗಿದಪ್ಪಿ ಸಂತೈಸಿ - ತನ್ನನ್ನು ಕಾಣದಿರುವಾಗ ಹಂಬಲಿಸುತ್ತಿದ್ದ ಕಳವಳವನ್ನು ಪರಿಹರಿಸಿದಂತೆ 

ಶ್ರೀ ಕೃಷ್ಣ ಪರಮಾತ್ಮನು ತನ್ನ ಭಕ್ತರು ತನ್ನನ್ನು ಕಾಣದೇ ಹಂಬಲಿಸುವುದನ್ನು ಅಂದರೆ -

ಭಜಿಸುವುದನ್ನು ನೋಡಿ ಸಂತೋಷದಿಂದ ಅವರ ಸಮೀಪಕ್ಕೆ ಬಂದು ಅವರನ್ನುದ್ಧರಿಸುವನು!!

3. " ಭಾವ  ದರ್ಪಣ ವ್ಯಾಖ್ಯಾನ " ದಂತೆ -

ಭಕ್ತಿ ರಸದಿಂದ ಸ್ತೋತ್ರ ಮಾಡಲು ಬರುತ್ತಾನೆಂದು ರಹಸ್ಯಾರ್ಥವಾಗಿ ಪುನಃ ಹೇಳುತ್ತಾರೆ " ಜನನಿಯನು " ಎಂಬ ಪದ್ಯದಿಂದ -

ಕಾಣದಿಹ - ನೋಡದಿರುವ 

ಹಲಬುತಿರೆ - ಅಳುತ್ತಿರಲು 

ರಂಬಿಸಿ - ವಿಶ್ವಾಸ ಹುಟ್ಟಿಸಿ 

ಬಳಿಗೆ - ಸಮೀಪ 

ಕನಳಿಕೆ - ಕಳವಳಿಸೋಣ [ ದುಃಖ ಎಂದರ್ಥ ]

4. ಶ್ರೀ ತಾಮ್ರಪರ್ಣೀಯ - ಸಂಸ್ಕೃತ ವ್ಯಾಖ್ಯಾನ " ದಂತೆ -

ಜನನೀತಿ ಯಥಾ ಲೋಕೇ ಸ್ವಮಾತರಂ ಪಶ್ಯನ್ ಸನ್ ಸ್ವಮಾತರಮೇವ ನಾಮ್ನಾಯ ಆಹ್ವಯನ್ - ವಾಚಾ ಉಚ್ಚಾರಯನ್ - ಭವನಾಂತರೇ ಸ್ವಾತ್ಮಾನಂ ಮೃಗಯತಿತಂ ಸ್ವಬಾಲಂ ಸ್ವಯಮಂಧಕಾರ ಗೃಹೇ ಅಚ್ಚನ್ನಾಸತಿ - ತಂ ದೃಷ್ಟ್ವಾ ಮಂದಸ್ಮಿತಾ ಸತೀ - ಹರ್ಷೇಣ ಪುತ್ರಮಾಲಿಂಗ್ಯ - ಸಮಾಧಾನಂ ಕೃತ್ವಾ - ಅಪಸ್ಮಾರಂ ಪರಿಹರಿತಿ ತಥಾ ಮದುಸೂದನಃ - ಭಕ್ತ ಜನ ಹೃದಯ ಮಂದಿರೇ ಲೀನೋ ಭೂತ್ವಾ ರಾಮಕೃಷ್ಣಾದಿ ನಾಮ್ನಾಹ್ವಯಂ ತಂ ಸ್ವಭಕ್ತಂ ವೀಕ್ಷ್ಯ - ಹರ್ಷಾತಿಶಯಯುತಃ ಸನ್ ತತ್ಸಮೀಪಮಾಗತ್ಯ ತಂ ರಕ್ಷತೀತ್ಯೇಕಾನ್ವಯಃ ।।

5. " ಶ್ರೀ ಜಂಬುಖಂಡಿ ವಾದಿರಾಜರ ವ್ಯಾಖ್ಯಾನ " ದಂತೆ -

" ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು " ಶ್ರೀಮದ್ ಹರಿಕಥಾಮೃತ ಸಾರಕ್ಕೆ ಬರೆದ  ವ್ಯಾಖ್ಯಾನಗಳು "

1.  ಶ್ರೀ ವ್ಯಾಸ - ದಾಸ ಸಾಹಿತ್ಯ ಸಿದ್ಧಾಂತ ಕೌಮುದೀ 

2. ಭಾವಸೂಚನೆ  

3. ಶ್ರೀ ಹರಿಕಥಾಮೃತಸಾರ ಪಂಚಿಕಾ 

ನನ್ವೇಮ ಕೃಪಾವನಧಿ: ವಾರಿಜಾಕ್ಷ: ಕಿಂತ್ ದೈವಕಂ ವರಂ ನ ತಾರಯಾಮಾಸ ದುರ್ವಾರ್ಧೇ । ಸಮಾ: ಸಹಸ್ರಮಿತಿ ವ್ಯವಹಿತೇ: ಇತಿ ಚೇತ್ರಬ್ರೂಮಃ । ಚಿರು ಅನುಭಾವ್ಯಾರಬ್ಧಂ ಅಲ್ಪೇನ ಉಪಮೃದ್ಯ ಆಶು ಆಯಾತಿ ಇತಿ ವಕ್ತುಂ ಏಕಾರ್ಭಕಂ ಲಾಲಯಂತೀ ಮನೋರಮ ರಾಮಾ ಪರೀಕ್ಷತೇ ಸುತಂ ಯಥಾ ಇತ್ಯಾಹ ಜನನೀತಿ । 

ಹಲುಬುತಿರೆ = ಬಳಲುತಿರೆ

[ ತಂ ಸುತಂ ।                

ಕನಲಿಕೆ - ಪ್ರಲಾಪೋಕ್ತಿ: । 

ರಂಭಿಸಿ - ಮೃಷೋಕ್ತ್ಯಾ ಸಮಾಧಾಯ ।

ಎಡೆಗೆ = ಪ್ರದೇಶಕ್ಕೆ ।

ಸಲಹುವ = ರಕ್ಷಿಸುವ ।।

ಹಾಗಾದರೆ ಕರುಣಾ ಸಮುದ್ರನಾದ ಶ್ರೀ ಕೃಷ್ಣ ಪರಮಾತ್ಮನು [ ಸರಸಿಜಾಕ್ಷನು ] ಆ ಗಜೇಂದ್ರನನ್ನು ಕೂಡಲೇ ಏಕೆ ಪಾರು ಮಾಡಲಿಲ್ಲ?

ಆ ಕೆಟ್ಟ ಕೊಳದಲ್ಲಿ ಸಾವಿರಾರು ವರ್ಷಗಳ ವರೆಗೆ ಇರಿಸಿ - ಯಾಕೆ ತಡ ಮಾಡಿದೆ?

ಎಂಬೀ ಸಂಶಯವೂ ಬರುವುದು. 

ಇದಕ್ಕೆ ಸಮಾಧಾನ -

ಶ್ರೀ ಕೃಷ್ಣ ಪರಮಾತ್ಮನು ಅನಾದಿ ಕಾಲದ ಆ [ ಪ್ರಾ ] ರಬ್ಧ ಕರ್ಮಗಳನ್ನು ಸ್ವಲ್ಪ ಮಟ್ಟಿಗೆ ಉಣ್ಣಿಸಿ - ಬಹು ಭಾಗಗಳನ್ನು ಕಳೆದು - ಆನಂತರ ತಡ ಮಾಡದೆ ಭಕ್ತರ ಸಮೀಪವನ್ನು ಸಾರುತ್ತಾನೆ!

ಇದನ್ನು ತಿಳಿಸಲು -

ಬಾಲಕನೊಬ್ಬನನ್ನು ಲಾಲಿಸುವ ಪ್ರೀತಿಯ ಮಾತೆಯು ಮಗುವನ್ನು ಹೇಗೆ ಪರೀಕ್ಷಿಸುವಳೋ - ಅಂತೆಯೇ ಶ್ರೀ ಕೃಷ್ಣ ಪರಮಾತ್ಮನು ಭಕ್ತರನ್ನು ಪರೀಕ್ಷಿಸುವನು ಎಂಬ ತಾತ್ಪರ್ಯವನ್ನು ಶ್ರೀ ಆಚಾರ್ಯರು ಹೇಳೆತ್ತಾರೆ. 

" ಜನನಿ " ಯು ಎಂಬ ಪದ್ಯದಿಂದ -

ಹಲಬುತಿರೆ = ಬಳಲುತ್ತಿರಲು 

ತನಯನು = ಮಗನನ್ನು 

ಕನಲಿಕೆ = ಪ್ರಲಾಪಗಳು 

ರಂಬಿಸಿ = ಏನಾದರೂ ನೆಪ [ ಸುಳ್ಳು ] ಹೇಳಿ, ಸಮಾಧಾನ ಪಡಿಸಿ 

ಎಡೆಗೆ = ಪ್ರದೇಶಕ್ಕೆ 

ಸಲಹುವ = ಸುರಕ್ಷಿಸುವ

6. " ಗುರು ಹೃದಯ ಪ್ರಕಾಶಿಕೆ ವ್ಯಾಖ್ಯಾನ " ದಂತೆ -

ಮರೆಯಲ್ಲಿರುವ ತಾಯಿಯನ್ನು ಕಾಣದೇ - ಸ್ಮರಿಸಿ ಸ್ಮರಿಸಿ - ಮಾತನಾಡಿಕೊಳ್ಳುತ್ತಾ , ಅಳುತ್ತಿರುವ ಶಿಶುವನ್ನು ನೋಡಿ, ನಗುತ ಹರುಷದಲಿ -

ಎಂದರೆ -

ಮನಸ್ಸಂತೋಷದಿಂದ ದೃಢಾಲಿಂಗನ ಕೊಟ್ಟು ಸಂತಸವಿತ್ತು ಕೋಪವನ್ನು ಬಿಡಿಸುವಂತೆ - ಮಧು ವೈರಿಯಾದ ಶ್ರೀ ಕೃಷ್ಣ ಪರಮಾತ್ಮನು ಭಕ್ತರಿದ್ದಲ್ಲಿಗೇ ಬಂದು ಕಷ್ಟ ಬಿಡಿಸುವನು. 

ಇದರಿಂದ ಶ್ರೀ ಕೃಷ್ಣಪರಮಾತ್ಮನನ್ನು ನಾವು ಕಾಣದಿದ್ದರೂ - ಅವನೇ ನಮ್ಮಲ್ಲಿ ಭಕ್ತಿ ಪಕ್ವವಾದದ್ದನ್ನು ನೋಡಿ  - ರಕ್ಷಿಸುವನೆಂಬಲ್ಲಿ ದೃಷ್ಟಾಂತ ನಿರೂಪಿಸಿತು. 

ತ್ರೈವರ್ಗಿಕಾಯಸ ವಿಘಾತಮ-

ಸ್ಮತ್ಪತಿರ್ವಿಧತ್ತೇ ಪುರುಷಸ್ಯಶಕ್ರ ।             

ತೇನಾನುಮೇಯೋ ಭಗವತ್ಪ್ರಸಾದೋ -

ಯೇ ದುರ್ಲಭೋsಕಿಂಚನ-

ಗೋಚರೋsನ್ಯೈ: ।।


ಎಂಬ ವಾಕ್ಯದ ಅರ್ಥ ನಿರೂಪಿಸುತ್ತಾರೆ. 

ಆಚಾರ್ಯ  ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)