ರಂಗನೊಲಿದ ರಂಗೋಲಿಪ್ರಿಯರು "ಶ್ರೀ ಜಗನ್ನಾಥದಾಸರು"

varthajala
0

 ರಂಗನೊಲಿದ ರಂಗೋಲಿಪ್ರಿಯರು

 "ಶ್ರೀ ಜಗನ್ನಾಥದಾಸರು"

(ಸೆಪ್ಟೆಂಬರ್ 11 ರಿಂದ 13 ಗುರುಗಳ ಆರಾಧನೆ ಪ್ರಯುಕ್ತ ಈ ಲೇಖನ)

ಭಕ್ತಿ ಮಾರ್ಗಕ್ಕೆ ಸುಲಭದ ದಾರಿದೀಪವಾದದ್ದೇ ಹರಿದಾಸರ ಸಾಹಿತ್ಯ. ದಾಸತ್ವ ಸಾರುವ ದಾಸಸಿದ್ಧಾಂತ ಆತ್ಮೋದ್ಧಾರದ ದಾರಿಯಾಯಿತು. ಹರಿದಾಸ ಸಾಹಿತ್ಯವು ಆಚಾರ್ಯ ಮಧ್ವರಿಂದ ಪ್ರೇರಣೆಗೊಂಡಿತು. ಶ್ರೀನರಹರಿತೀರ್ಥರು, ಶ್ರೀ ಶ್ರೀಪಾದರಾಜರಿಂದ ಶ್ರೀಕಾರ ಹಾಕಿಸಿಕೊಂಡು ಸರಳ, ಸುಲಭ ಕನ್ನಡದಲ್ಲಿ ಹರಿದುಬಂದು ಗುರುವ್ಯಾಸರಿಂದ ಅನುಗ್ರಹಗೊಂಡು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಾದಿಯಾಗಿ ಮುಂತಾದ ಅಪರೋಕ್ಷ ಹರಿದಾಸರುಗಳಿಂದ  ಭೋರ್ಗರೆವ ಜಲಪಾತದಂತೆ, ಧುಮ್ಮಿಕ್ಕಿ ಜನಮನವಷ್ಟೇ ಅಲ್ಲ ಇಡೀ ಮನುಕುಲವೇ ಮಿಂದು ಪವಿತ್ರವಾಗುವ ಪಾವನಗಂಗೆಯಾಗಿ ದಾಸಸಾಹಿತ್ಯವು ಹರಿದು ಬಂತು.

ಪಂಡಿತರ ಸೊತ್ತಾಗಿದ್ದ ಸಂಸ್ಕೃತವನ್ನು ಸರಳ ಕನ್ನಡಕ್ಕಿಳಿಸಿ ನಮ್ಮಂತಹ ಜನಸಾಮಾನ್ಯರಿಗೆ ಭಕ್ತಿಸಾಹಿತ್ಯವನ್ನು ತಲುಪಿಸಿದವರು ಹರಿದಾಸರು. ಭಾಗವತ ಧರ್ಮಕ್ಕೆ ನವಚೈತನ್ಯ ಕೊಟ್ಟ ಶ್ರೀಜಗನ್ನಾಥದಾಸರು ಶ್ರೀನಿವಾಸನ ಪರಮಾನುಗ್ರಹದಿಂದ ಬೆಟ್ಟದೊಡೆಯನ ಪರಮ ಭಕ್ತರಾದ ನರಸಿಂಹದಾಸರು ಹಾಗೂ ಲಕ್ಷ್ಮಮ್ಮ ಎಂಬ ಸಾತ್ವಿಕ ದಂಪತಿಗಳಿಗೆ ಜನಿಸಿದರು. (ಇವರ ಕಾಲ 1727 ರಿಂದ 1809).

 ಮಾನವಿಯಿಂದ ಸುಮಾರು ಹದಿನಾಲ್ಕು ಕಿ.ಮಿ.ದೂರವಿರುವ ಬ್ಯಾಗವಾಟ ಗ್ರಾಮ ಶ್ರೀಜಗನ್ನಾಥದಾಸರು ಜನಿಸಿದ ಭವ್ಯಸ್ಥಳ.

ಶ್ರೀಜಗನ್ನಾಥದಾಸರು ಒದ್ದೆ ಮಡಿಯ ಮೇಲೆ ಕುಳಿತು ಹರಿಕಥಾಮೃತಸಾರ ರಚಿಸುತ್ತಿರಬೇಕಾದರೆ ಎಲ್ಲ ಅಕ್ಷರಾಭಿಮಾನಿ ದೇವತೆಗಳು ನಾ ಮುಂದು ತಾ ಮುಂದು ಎಂದು ಕಾಯುತ್ತಿದ್ದರಂತೆ. ಸಾಕ್ಷಾತ್  ದೇವತೆಗಳು ನಿಂತ ಜಾಗ  ಸ್ಥಂಭ ಮಂದಿರ ವಾಸಿ ಶ್ರೀಜಗನ್ನಾಥದಾಸರು ಇರುವ ಸ್ಥಳ. ಮಾನವಿ ಕ್ಷೇತ್ರ ಸಾಮಾನ್ಯವಾದುದಲ್ಲ.

 ಶ್ರೀಜಗನ್ನಾಥದಾಸರು ಅಲ್ಲಿ ನೆಲೆನಿಂತು ನಮ್ಮನ್ನು  ಅನುಗ್ರಹಿಸುತ್ತಾ ಮಾನವಿಗೆ ಕಾಶಿ ಕ್ಷೇತ್ರದ ಮನ್ನಣೆ ತಂದುಕೊಟ್ಟವರು.

ಶ್ರೀ ಸುಮತೀಂದ್ರತೀರ್ಥರು, ಶ್ರೀ ಜಗನ್ನಾಥದಾಸರ ತಂದೆಯವರಾದ ಶ್ರೀನರಸಿಂಹದಾಸರ ಪಾಂಡಿತ್ಯ, ಭಕ್ತಿಗೆ ಮೆಚ್ಚಿ ಅತ್ಯಂತ ಸಂತೋಷಭರಿತರಾಗಿ ತಮ್ಮ ಬಳಿಯಿದ್ದ ಶ್ರೀನೃಸಿಂಹದೇವರ ವಿಗ್ರಹವನ್ನೂ, ಸಾಲಿಗ್ರಾಮವನ್ನೂ ಕೊಟ್ಟಿದ್ದಾರೆ. ಇಂದಿಗೂ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ನಾವು ಕಾಣಬಹುದು. ಶ್ರೀ ಲಕ್ಷ್ಮೀನರಸಿಂಹದೇವರ ವಿಶೇಷವಾದ ಸನ್ನಿಧಾನವಿಲ್ಲಿದೆ.

ಮಾನವಿ ಕ್ಷೇತ್ರದ ಸುತ್ತಮುತ್ತ ಚೀಕಲಪರ್ವಿಯಲ್ಲಿ ಶ್ರೀ ಶ್ರೀಪಾದರಾಜರಿಂದ ಪ್ರತಿಷ್ಠಾಪಿತವಾದ ಶ್ರೀ ಅಶ್ವತ್ಥ ಲಕ್ಷ್ಮೀರಸಿಂಹದೇವರ ಸನ್ನಿಧಾನದಲ್ಲಿ ಶ್ರೀ ವಿಜಯದಾಸರು, ಮೊಸರುಕಲ್ಲು ಗ್ರಾಮದಲ್ಲಿ ಶ್ರೀ ಗೋಪಾಲದಾಸರು, ಚೀಕಲಪರ್ವಿಗೆ ಹತ್ತಿರವೆನಿಸುವ ಜಾಗೀರ ಪನ್ನೂರಿನ ಒಂದು ಹೊಲದಲ್ಲಿ ಬಂಡೆಗೆ ಒಡಮೂಡಿದ  ಶ್ರೀ ಪುರಂದರದಾಸರು, ಮಾನವಿಯ ಶ್ರೀ ಶಾಮಸುಂದರದಾಸರು, ಅಸ್ಕಿಹಾಳದ ಶ್ರೀ ಗೋವಿಂದದಾಸರು, ಕೋಸಗಿ ಮುತ್ಯ ಎನಿಸಿರುವ ಶ್ರೇಷ್ಠರಾದ ಶ್ರೀ ಗುರುಜಗನ್ನಾಥದಾಸರು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು, ಮಂತ್ರಾಲಯದಿಂದ ಹತ್ತು ಕಿ.ಮಿ ದೂರದಲ್ಲಿರುವ ಇಭರಾಮಪುರದ ಶ್ರೀ ಅಪ್ಪಾವರು, ಕಲ್ಲೂರಿನಲ್ಲಿ ಸಾಣೇಕಲ್ಲಿನಲ್ಲಿ ಮೂಡಿದ ಶ್ರೀಲಕ್ಷ್ಮಿ ವೆಂಕಟರಮಣನ ಸನ್ನಿಧಾನ, ಕಸಬಾ ಲಿಂಗಸುಗೂರಿನ ಶ್ರೀ ಪ್ರಾಣೇಶದಾಸರು, ಮೊದಲುಕಲ್ಲಿನ ಶ್ರೀ ಶೇಷದಾಸರು, ಒಬ್ಬರಾ ಇಬ್ಬರಾ? ಹರಿದಾಸರು, ಅಪರೋಕ್ಷಜ್ಷಾನಿಗಳು, ಯತಿಗಳ ತಂಡೋಪತಂಡವೇ ನೆಲೆಸಿದ, ಬದುಕಿ ಬಾಳಿದ, ನಡೆದಾಡಿದ ಸ್ಥಳಗಳು ಮಾನವಿಯ ಹತ್ತಿರದಲ್ಲೇ ಸಿಗುತ್ತವೆ. ಎರಡು ಮೂರು ದಿನಗಳಲ್ಲಿ ಇನ್ನೂ ಬಹಳ‌ ಕ್ಷೇತ್ರದ ಜೊತೆಗೆ ಈ ಎಲ್ಲ ಕ್ಷೇತ್ರಗಳನ್ನೂ ಸಂದರ್ಶಿಸಬಹುದು.

 ಭಗವಂತನ ಮಹಿಮೆಗಳನ್ನು ತಮ್ಮ ಕೃತಿಗಳ ಮೂಲಕ, ಸಾರಿದ ಬಹು ಪುಣ್ಯವಾದ ತಪೋಭೂಮಿ ಈ ಮಾನವಿ. ಹಾಗಾಗಿಯೇ ರಾಯಚೂರಿನ ಭಾಗ ಎಲ್ಲ ಹರಿದಾಸರು ನಲಿದಾಡುವ ಹರಿದಾಸರ ತೊಟ್ಟಿಲು, ಹರಿದಾಸರ ತವರೂರು, ಹರಿದಾಸರ ನೆಲೆಬೀಡು ಎಂದೇ ಸುಪ್ರಸಿದ್ಧ.

ಮಹಾನ್ ಪಂಡಿತರು ಶ್ರೀ ಶ್ರೀನಿವಾಸಾಚಾರ್ಯರು

ಶ್ರೀನಿವಾಸ ನಾಮಾಂಕಿತರಾದ ಇವರು ಸುಮಾರು ಎಂಟನೇ ವಯಸ್ಸಿನಲ್ಲಿಯೇ `ವರದೇಂದ್ರ ಪಂಚರತ್ನ' ಎಂಬ ಐದು ಶ್ಲೋಕ ರಚಿಸಿ ಗುರುಗಳ ಮೆಚ್ಚಿನ ಶಿಷ್ಯರಾಗಿದ್ದರು. ಪುಣೆಯಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಪ್ರತಿವಾದಿಗಳನ್ನು ಜಯಿಸಿ ಆಚಾರ್ಯ ಎಂಬ ಬಿರುದು ಪಡೆದು ಅಂದಿನಿಂದ ಶ್ರೀನಿವಾಸಾಚಾರ್ಯರಾದರು.

ಕೃತಯುಗದಲ್ಲಿ ಪ್ರಹ್ಲಾದರಾಜರ ಸಹೋದರ ಸಲ್ಹಾದರಾಗಿದ್ದರು, ದ್ವಾಪರದಲ್ಲಿ ಮದ್ರದೇಶದ ರಾಜನಾದ ಶಲ್ಯರಾಜರಾಗಿದ್ದವರು.  `ದುಷ್ಟನನ್ನವ ತಿಂದ ತಪ್ಪಿಗಾಗಿಯೇ ಸೃಷ್ಟಿಗಿಳಿದರು ಶ್ರೇಷ್ಠಭಾವರು’ ಎಂಬ ಸಾಲಿನ ಉಲ್ಲೇಖದಂತೆ ಶಲ್ಯರಾಜರಾಗಿದ್ದಾಗ ದುರ್ಯೋಧನನ ಅನ್ನ ತಿಂದ ಪ್ರಭಾವದಿಂದ, ಈ ಜನುಮದಲ್ಲಿ  ಶ್ರೀನಿವಾಸಾಚಾರ್ಯರಿಗೆ ಕೆಲಸಮಯ ಮಾನವ ಸಹಜವಾದ ಗರ್ವ ಅವರಲ್ಲಿ ಮನೆ ಮಾಡಿತ್ತು. ಎಲ್ಲವೂ ಹರಿಚಿತ್ತ. ಸಂಸ್ಕೃತ ಪಂಡಿತರಾಗಿದ್ದ ಇವರಿಗೆ ಕನ್ನಡ ಪದಪದ್ಯಗಳು ಸರಿಕಾಣುತ್ತಿರಲಿಲ್ಲ. ದಾಸರು ತಾಳತಂಬೂರಿಯೊಂದಿಗೆ ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿ, ದೇವರನಾಮಗಳನ್ನು  ಭಕ್ತಿಭಾವಪರವಶರಾಗಿ ಕುಣಿಯುತ್ತಾ ಕೇರಿಯೊಳಗೆ ಬರುವವರನ್ನು ಕಂಡರೆ ತಾತ್ಸಾರ ಮಾಡುತ್ತಿದ್ದರು. ಹೀಗಿರುವಾಗ ಒಂದುದಿನ ಶ್ರೀ ವಿಜಯದಾಸರು, ಶ್ರೀನಿವಾಸಾಚಾರ್ಯರಿಗೆ ಗೌರವಪೂರ್ವಕವಾಗಿ ಭೋಜನಕ್ಕೆ ಆಮಂತ್ರಣವಿತ್ತಿದ್ದರು. ಶ್ರೀವಿಜಯದಾಸರ ಪರಮ ಶಿಷ್ಯರಾಗಿದ್ದ 'ಭಕ್ತಿಯಲಿ ಭಾಗಣ್ಣ'ರೆಂದೇ ಸಿದ್ಧಪ್ರಸಿದ್ಧರಾದ ಶ್ರೀ ಗೊಪಾಲದಾಸರು ಕರೆಯಲು ಬಂದಿದ್ದರು. ಆಗ ಶ್ರೀನಿವಾಸಾಚಾರ್ಯರು "ಕೂಸೀಮಗದಾಸನೋ, ಅವನ ಕೀರ್ತನೆಯೋ, ಎಂದು ಅವಹೇಳನ ಮಾಡಿದ್ದಲ್ಲದೇ ನನಗೆ ಸಮಯಕ್ಕೆ ಸರಿಯಾಗಿ ಭೋಜನ ಮಾಡದಿದ್ದರೆ ಉದರಶೂಲೆ ಬರುತ್ತದೆ, ಬರಲಾಗದು ಎಂದು ಇವರಿಗೆ ಹೇಳಿದಾಗ, ಶ್ರೀ ಗೋಪಾಲದಾಸರು ಸರಿ ಹಾಗೆಯೇ ಆಗಲಿ ಎಂದಿದ್ದರು.

ಶ್ರೀನಿವಾಸಾಚಾರ್ಯರ ಈ ನಡುವಳಿಕೆಯಿಂದ ಶ್ರೀ ವಿಜಯದಾಸರು ಕಿಂಚಿತ್ತೂ ಬೇಸರ ಮಾಡಿಕೊಂಡಿರಲಿಲ್ಲ. ಆದರೆ ಗುರುಗಳ ಬಗ್ಗೆ ತಾತ್ಸಾರದಿಂದ ಆಡಿದ ಮಾತಿಗೆ ನೊಂದ ಶ್ರೀ ಗೋಪಾಲಾದಾಸರು ಉಪವಾಸಗೈದಿದ್ದರು.

ಶ್ರೀ ಗೋಪಾಲದಾಸರಿಂದ 40 ವರುಷ ಆಯುರ್ದಾನ

ವಿಜಯದಾಸರನ್ನು ನಿಂದಿಸಿದ ಫಲವೋ, ಹರಿಭಕುತರನ್ನು ಅವಮಾನಿಸಿದ ಫಲವೋ ಎಂಬಂತೆ ನಿಜವಾಗಿಯೂ ಪ್ರಾಣಹಿಂಡುವಂತಹ ಉದರಶೂಲೆ ಶ್ರೀನಿವಾಸಾಚಾರ್ಯರಿಗೆ ಬಂದೇ ಬಿಟ್ಟಿತು. ದಿನದಿಂದ ದಿನಕ್ಕೆ ಉದರಶೂಲೆ ಉಲ್ಬಣಿಸತೊಡಗಿ ಶ್ರೀನಿವಾಸಾರ್ಯರು ತುತ್ತು ಅನ್ನ ಸೇರದೇ ಕೃಶವಾಗತೊಡಗಿದರು. ಏನು ಮಾಡಿದರೂ ಕಡಿಮೆಯಾಗಲಿಲ್ಲ. ಯಾವ ಪ್ರಾರ್ಥನೆಯೂ ಫಲಿಸಲಿಲ್ಲ. ಅದಕ್ಕೇ ಹೇಳುವುದು ಒಳ್ಳೆಯ ಬ್ರಾಹ್ಮಣರನ್ನು, ಸಜ್ಜನರನ್ನು ನಿಂದಿಸಬಾರದು. ಅಹಂಕಾರ ಮಾಡಬಾರದು ಎಂದು.

ನೋವಿನಿಂದ ಬಳಲುತ್ತ ಕಂಗಾಲಾಗಿದ್ದ ಶ್ರೀನಿವಾಸಾಚಾರ್ಯರು, ರಾಯರಲ್ಲಿ ಪ್ರಾರ್ಥಿಸಿದಾಗ, ಮೊದಲೇ ಕರುಣಾಳುಗಳಾದ ರಾಯರು ಸ್ವಪ್ನದಲ್ಲಿ ಕಾಣಿಸಿಕೊಂಡು, ಶ್ರೀ ವಿಜಯದಾಸರ ಬಳಿ ಕ್ಷಮೆ ಕೇಳದ ಹೊರತು ವ್ಯಾಧಿ ವಾಸಿಯಾಗಲು ಸಾಧ್ಯವಿಲ್ಲ ಎಂಬಂತೆ ಸೂಚಿಸಿ ಅನುಗ್ರಹ ಮಾಡಿದರು. "ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ"  ಎನ್ನುವ ಭಾವದಲ್ಲಿ ಶ್ರೀನಿವಾಸಾಚಾರ್ಯರು ಚೀಕಲಪರ್ವಿಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ಉದರಶೂಲೆಯ ನೋವಿನಿಂದ ಇವರ ಮನಸ್ಸಿನಲ್ಲಿರುವ ಅಹಂಕಾರವೆಲ್ಲವೂ ಕರಗಿತ್ತು.

ವಿಜಯದಾಸರನ್ನು ಕಂಡೊಡನೆಯೇ ಭಕ್ತಿಯಿಂದ ನಮಸ್ಕರಿಸಿದರು. ಸದಾ ಸಮಾಧಾನಚಿತ್ತರಾಗಿರುತ್ತಿದ್ದ ಶ್ರೀ ವಿಜಯದಾಸರು ಅತ್ಯಂತ ಅಂತಃಕರಣದಿಂದ ಶ್ರೀನಿವಾಸಾಚಾರ್ಯರ ಮೈದಡವಿ ಸಮಾಧಾನ ಮಾಡಿದರು. ಇದು ನನ್ನಿಂದಲೂ ಆಗದ ಕೆಲಸ, ನೀನು ಕೂಡಲೇ ಭಾಗಣ್ಣನಿರುವ ಉತ್ತನೂರಿಗೆ ಹೋಗು, ಅಲ್ಲಿ ತಮ್ಮ ಶಿಷ್ಯ ಗೋಪಾಲದಾಸರನ್ನು ಕಾಣುವಂತೆ ಹೇಳಿಕಳಿಸಿದರು. ಅದೇ ಹೊತ್ತಿನಲ್ಲಿ ತಮ್ಮ ಪ್ರೀತಿಯಶಿಷ್ಯ ಶ್ರೀ ಗೋಪಾಲದಾಸರಿಗೆ, ಈ ಶ್ರೀನಿವಾಸನಿಗೆ ಅಪಮೃತ್ಯು ಕಾದಿದೆ. ನಿನ್ನ ಆಯಸ್ಸಿನಲ್ಲಿ ನಲವತ್ತು

ವರುಷ ಆಯುರ್ದಾನ ಮಾಡಿ, ಉಲ್ಬಣಿಸಿರುವ ಉದರ ರೋಗಪರಿಹಾರ ಮಾಡಬೇಕೆನ್ನುವ ಗುರುಗಳ ಸೂಚನೆ ಗೋಪಾಲದಾಸರಿಗಾಗಲೇ ತಿಳಿದಿತ್ತು.

ತ್ರಿಕಾಲ ಜ್ಞಾನಿಗಳಾದ, ಗಣೇಶಾಂಶ ಸಂಭೂತರಾದ ಶ್ರೀ ಗೋಪಾಲದಾಸರು, ಶ್ರೀನಿವಾಸಾಚಾರ್ಯರ ಉದರಶೂಲೆ ಪರಿಹಾರವಾಗಲು  ಧನ್ವಂತರಿಯಲ್ಲಿ ಪ್ರಾರ್ಥಿಸುತ್ತಾರೆ. `ಎನ್ನ ಬಿನ್ನಪ ಕೇಳೋ ಧನ್ವಂತರಿ ದಯಮಾಡೋ ಸಣ್ಣವನು ಇವ ಕೇವಲ ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು’ ಎಂದು ಗೋಪಾಲದಾಸರು ಶ್ರೀನಿವಾಸಾಚಾರ್ಯರ ಮೇಲೆ ಅದೆಷ್ಟು ಅಂತಃಕರಣದಿಂದ "ಸಣ್ಣವನು" ಅನ್ನುವ ಶಬ್ದ ಬಳಸಿದ್ದಾರೆ. ಇದು ಅವರಿಗಿಂತ ಚಿಕ್ಕವನು ಎಂದು ತೋರುವುದರ ಜೊತೆಗೆ ಪುಟ್ಟ ಸಹೋದರನ ಮೇಲಿರುವಂತಹ, ಅಂತಃಕರಣ,  ಮಮತೆಯನ್ನೂ ತೋರಿಸುತ್ತದೆ.

ಗುರುಶಿಷ್ಯರ ಸಂಬಂಧ ಎಂತಹದ್ದು? ಗುರುಗಳು ತಮ್ಮ ಶಿಷ್ಯನಿಗೆ ನಿನ್ನ ಆಯಸ್ಸಿನಲ್ಲಿ ನಲವತ್ತು ವರುಷ ದಾನ ಮಾಡು ಎಂದು ಹೇಳುವುದು ಅಂದರೇನು? ಇವರು ಸಾಕ್ಷಾತ್ ಧನ್ವಂತರಿ ದೇವರನ್ನು ಪ್ರಾರ್ಥಿಸಿ ರೋಗ ಪರಿಹಾರ ಮಾಡುವುದೆಂದರೇನು? ಜೋಳದ ರೊಟ್ಟಿಯಲ್ಲಿ ನಲವತ್ತು ವರುಷ ಆಯಸ್ಸು ಹಾಕಿಕೊಡುವುದೆಂದರೇನು?  ಇವರೆಲ್ಲ ನಮ್ಮಂತಹ ಪಾಮರರನ್ನು ಉದ್ಧರಿಸಲು, ಭಕ್ತರನ್ನು ರಕ್ಷಿಸಲು, ಭಗವತ್ಸಂಕಲ್ಪದಂತೆ ಭೂಮಿಗೆ ಬಂದ ದೇವತೆಗಳಲ್ಲದೇ ಮತ್ತೇನು?

ಶ್ರೀನಿವಾಸಾಚಾರ್ಯರು 

ಶ್ರೀ ಜಗನ್ನಾಥದಾಸರಾದದ್ದು

ಮುಂದೆ ಶ್ರೀನಿವಾಸಾಚಾರ್ಯರು ಗೋಪಾಲದಾಸರ ಪರಮಾಪ್ತರಾದರು, ದಾಸತ್ವ ಮೈತುಂಬಿತು. ಭಗವಂತನ ಕರುಣೆ, ಸ್ಮರಣೆ ಉಸಿರಾಯಿತು. ಶ್ರೀಗೋಪಾಲದಾಸರ ಸೂಚನೆಯಂತೆ ಫಂಢರಾಪುರದ  ಪಾಂಡುರಂಗನನ್ನು ಕಾಣುವ ತವಕದಿಂದ ಭಾವಪರವಶರಾಗಿ ಚಂದ್ರಭಾಗಾ ನದಿಯಲ್ಲಿ ಮಿಂದೇಳುವಾಗ, 'ಶ್ರೀಜಗನ್ನಾಥವಿಠಲ' ಎಂಬ ಅಂಕಿತವಿರುವ ಶಿಲಾಫಲಕ ದೊರೆಯಿತು. ಆ ಶಿಲಾಫಲಕವನ್ನು ತಲೆಯ ಮೇಲೆ ಹೊತ್ತು, ಆನಂದಭಾಷ್ಪ ಸುರಿಸುತ್ತಾ, "ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ", "ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ", ಸಂಗಸುಖಕ್ಕಾಗಿ ನಡೆಯುವುದೇ ಹರಿಯಾತ್ರೆ, ನುಡಿವುದೇ ನೈವೇದ್ಯ ಎಂದು ಹರಿಯ ಸಾನ್ನಿಧ್ಯವನ್ನು, ಭಗವಂತನೊಲುಮೆಯನ್ನು ಕೊಂಡಾಡುತ್ತಾರೆ.

ಸಾಕ್ಷಾತ್ ಪಾಂಡುರಂಗ ರುಕ್ಮಿಣಿಯಿಂದ ಭೋಜನ ಸ್ವೀಕರಿಸಿದವರು. ಶ್ರೀನಿವಾಸನಿಂದ ಎರಡು ಬಾರಿ ಪ್ರಸಾದದ ಅಮೃತ ಸವಿದವರು. ಮುಂದೆ ಅನೇಕ ಸುಳಾದಿಗಳು, ಪದಪದ್ಯಗಳು, ಕೀರ್ತನೆಗಳು, ಉಗಾಭೋಗಗಳು, ದಶಾವತಾರಸ್ತೋತ್ರ, ರುಕ್ಮಿಣೀವಿಲಾಸ, ಶ್ರೀನಿವಾಸ ಸ್ತೋತ್ರ, ಮುಂತಾದ ಖಂಡಕಾವ್ಯಗಳು, ತತ್ವಸುವ್ವಾಲಿಗಳನ್ನು ರಚಿಸಿದರು.

ಶ್ರೀಮದ್ ಹರಿಕಥಾಮೃತಸಾರ

ಅಂದು ದೇವದಾನವರ ಸಮುದ್ರಮಥನದಿಂದ ಅಮೃತ ದೊರೆಯಿತು. ಭಗವತ್ಸಂಕಲ್ಪದಿಂದ ಶ್ರೀವಿಜಯದಾಸರ, ಶ್ರೀ ಗೋಪಾಲದಾಸರಾಯರ ಅಂತಃಕರಣ…



Post a Comment

0Comments

Post a Comment (0)