ಬೆಂಗಳೂರು; ಪ್ರಕೃತಿಗೆ ತೀವ್ರ ಹಾನಿಯುಂಟು ಮಾಡುತ್ತಿರುವ ತ್ಯಾಜ್ಯವನ್ನು ಮರು ಸಂಸ್ಕರಣೆ, ಪುನರ್ ಬಳಕೆ, ಪುನರ್ ನಿರ್ಮಾಣ ಮಾಡುವ ಮತ್ತು ಜಾಗತಿಕ ಹವಾಮಾನ ಬದಲಾವಣೆ ತಡೆಗಟ್ಟುವ ಹಿನ್ನೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಜಗತ್ತಿನಲ್ಲಿ ಹವಾಮಾನ ಬದಲಾವಣೆ ಅತಿ ದೊಡ್ಡ ಸವಾಲಾಗಿದ್ದು, ಉತ್ತರ ಕನ್ನಡದ ಶಿರೂರು, ಕೇರಳದ ವೈಯನಾಡು ಭಾಗದಲ್ಲಿ ಸಂಭವಿಸಿದ ಭೂ ಕುಸಿತ ನಮಗೆಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಎಲ್ಲರೂ ಜಾಗೃತರಾಗಲು ಇದು ಸಕಾಲ. ಗಾಳಿ, ನೀರಿನಲ್ಲಿ ಮಾಲೀನ್ಯ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್, ಬ್ಯಾಟರಿ, ನಿರ್ಮಾಣ, ಕೈಗಾರಿಕಾ ಮಾಲೀನ್ಯ ಸಹ ತೀವ್ರಗೊಳ್ಳುತ್ತಿದೆ. ಜಗತ್ತಿಗೆ ಮಾರಕವಾಗಿರುವ ಈ ಮಾಲೀನ್ಯದ ವಿರುದ್ಧ ಇಡೀ ಮನುಕುಲ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಕೃತಿ, ಪರಿಸರ ಉಳಿದರೆ ಮಾತ್ರ ಜೀವನ, ಜೀವನೋಪಾಯ ಎರಡೂ ರಕ್ಷಿಸಲು ಸಾಧ್ಯ, ಅಭಿವೃದ್ಧಿಗೆ ತೊಡಕಾಗದಂತೆ, ಉತ್ಪಾದನೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಸಂಸ್ಕರಣಾ ವಲಯದಲ್ಲಿ ಯುವ ಸಮೂಹಕ್ಕೆ ಉದ್ಯೋಗ ಸೃಜನೆ ಮಾಡಲು ಈ ವಲಯದಲ್ಲಿ ವಿಪುಲ ಅವಕಾಶವಿದೆ ಎಂದು ಹೇಳಿದರು.
ರೀ ಎಕ್ಸ್ ಪೋ ಆಯೋಜಕರು ಮತ್ತು ಉರ್ಧ್ಯ ಮ್ಯಾನೇಜ್ ಮೆಂಟ್ ಪ್ರವೈಟ್ ಲಿಮಿಟೆಡ್ ನ ಸಿಇಒ ವೆಂಕಟರೆಡ್ಡಿ ಡಿ ಪಾಟೀಲ್ ಮಾತನಾಡಿ, ಸಂಸ್ಕರಣೆಯನ್ನು ಬಲಪಡಿಸುವುದು ನಮ್ಮ ಮೂಲ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಪಾಲುದಾರರ ಸಂಖ್ಯೆ ಹೆಚ್ಚಾಗಬೇಕು. ಮೊಬೈಲ್, ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ಮರು ಸಂಸ್ಕರಣೆ ಮಾಡಿ ಮರು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಜ್ಜುಗೊಳಿಸಬೇಕಾಗಿದೆ. ಲ್ಯಾಪ್ ಟಾಪ್ ಗಳು ಶಿಕ್ಷಣ, ಉದ್ಯೋಗ ಸೃಜನೆಗೆ ಅತ್ಯಂತ ಅಗತ್ಯವಾಗಿರುವ ಸಾಧನಗಳಾಗಿವೆ ಎಂದರು.