ಬೆಂಗಳೂರು, (ಕರ್ನಾಟಕ ವಾರ್ತೆ): ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಮತ್ತು ಆದಾಯ ವರ್ಧನೆಗೆ ಕ್ರಮಗಳನ್ನು ಕೈಗೊಂಡಿರುವುದರ ಜೊತೆಗೆ ವಿಪತ್ತು ನಿರ್ವಹಣ ಕಾಯ್ದೆ ಅಡಿಯಲ್ಲಿ ಸಹ ಹಣ ಬಿಡುಗಡೆ ಮಾಡುತ್ತದೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಅರವಿಂದ ಪನಗಾರಿಯಾ ತಿಳಿಸಿದರು
16ನೇ ಹಣಕಾಸು ಆಯೋಗವು ಆಗಸ್ಟ್ 29 ಮತ್ತು 30ರಂದು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.16ನೇ ಹಣಕಾಸು ಆಯೋಗವು ಈಗಾಗಲೇ ಹಿಮಾಚಲ ಪ್ರದೇಶ, ಚತ್ತೀಸ್‍ಗಡ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಿಗೆ ಭೇಟಿ ನೀಡಿದ್ದು, ಕರ್ನಾಟಕ 5ನೇ ರಾಜ್ಯವಾಗಿದೆ. ಅಲ್ಲದೆ ರಾಜ್ಯದ ಹಣಕಾಸು ಆಯೋಗ ಮಾಡುವ ಶಿಫಾರಸ್ಸುಗಳ ಆಧಾರದ ಮೇಲೆ ರಾಜ್ಯದ ಪಂಚಾಯತ್ ಮತ್ತು ಪುರಸಭೆಗಳ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ ಕ್ರೋಢೀಕೃತ ಅನುದಾನವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಇದಕ್ಕೂ ಮೊದಲು 16ನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಕರ್ನಾಟಕದ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 5ರಷ್ಟಿದ್ದರು, ರಾಷ್ಟ್ರೀಯ ಜಿ.ಡಿ.ಪಿ ರಾಜ್ಯಕ್ಕೆ ಶೇಕಡ 8.4ರಷ್ಟು ಮಾತ್ರ ಪಾಲು ನೀಡುತ್ತಿದೆ. ಇಡೀ ದೇಶದಲ್ಲಿ ಜಿ.ಡಿ.ಪಿ. ದೇಣಿಗೆಯಲ್ಲಿ ಕರ್ನಾಟಕ ರಾಜ್ಯವು ಎರಡನೇ ಸ್ಥಾನದಲ್ಲಿದೆ. ದೇಶದ ಒಟ್ಟು ತೆರಿಗೆ ಆದಾಯದಲ್ಲಿ ಕರ್ನಾಟಕ ಸುಮಾರು 4 ಲಕ್ಷ ಕೋಟಿ ರೂ ಪಾಲು ನೀಡುತ್ತಿದ್ದರು ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ 45 ಸಾವಿರ ಕೋಟಿ ರೂ ಹಾಗೂ ಅನುದಾನದ ರೂಪದಲ್ಲಿ ರೂ 15 ಸಾವಿರ ಕೋಟಿ ದೊರಕುತ್ತಿದೆ. ಆದರೆ ಕರ್ನಾಟಕ ನೀಡುವ ಪ್ರತಿ ಒಂದು ರೂಪಯಿಗೆ ರಾಜ್ಯ ಕೇವಲ 15 ಪೈಸೆ ಮಾತ್ರ ಹಿಂಪಡೆಯುತ್ತಿದೆ. ಸೆಸ್ ಮತ್ತು ಸರ್‍ಚಾರ್ಜ್ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಾಬ್ತಿನಲ್ಲಿ ಬರುವುದಿಲ್ಲ. ಇದರಿಂದ ರಾಜ್ಯ ನಷ್ಟ ಅನುಭವಿಸುತ್ತಿದೆ. ಬಂಡವಾಳ ವೆಚ್ಚದ ಮೊತ್ತವನ್ನು ರಾಜ್ಯ ತನ್ನ ಜಿ.ಎಸ್.ಡಿ.ಪಿಯ ಶೇಕಡ 2ರ ಮಿತಿಯಲ್ಲಿಯೇ ನಿರ್ವಹಿಸುತ್ತಿದ್ದು, ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಮುಂದಿನ 5 ವರ್ಷಗಳ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ 55,586 ಕೋಟಿ ರೂಗಳ ಬಂಡವಾಳದ ಅಗತ್ಯವಿದ್ದು, ಕೇಂದ್ರದಿಂದ 27,793 ಕೋಟಿ ರೂ ಅನುದಾನವನ್ನು ರಾಜ್ಯ ಮನವಿ ಮಾಡಿದೆ. ಪಶ್ಚಿಮಘಟ್ಟ ವಲಯಗಳ ವಿಪತ್ತು ನಿರ್ವಹಣೆಗೆ ಪರಿಹಾರ ಮತ್ತು ಪುನರ್‍ವಸತಿಗೆ 10 ಸಾವಿರ ಕೋಟಿ ರೂ ಅನುದಾನ ಒದಗಿಲು ಮನವಿ ಮಾಡಿದೆ. ಸಾಲಿನ ಹಂಚಿಕೆ ಸಂದರ್ಭದಲ್ಲಿ ಹಂಚಿಕೊಳ್ಳುವ ಬಾಬ್ತಿನಲ್ಲಿ ರಾಜ್ಯಗಳಿಗೆ ತಮ್ಮ ದೇಣಿಗೆಯ ಶೇಕಡ 60 ರಷ್ಟನ್ನು ನೀಡಬೇಕೆಂದು ರಾಜ್ಯವು ಶಿಫಾರಸ್ಸು ಮಾಡಿದೆ.
ಈ ನಿಟ್ಟಿನಲ್ಲಿ 16ನೇ ಹಣಕಾಸು ಆಯೋಗ ಮಾಡುವ ಶಿಫಾರಸ್ಸುಗಳು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಲ್ಯಾಣ ಕರ್ನಾಟಕ ಅಸಮತೋಲನ ನಿವಾರಣೆಗೆ ರಾಜ್ಯವು ರೂ 25 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ಮುಂದಿನ 5 ವರ್ಷಗಳ ಅವಧಿಗೆ 16ನೇ ಹಣಕಾಸು ಆಯೋಗ ರೂ 25 ಸಾವಿರ ಕೋಟಿ ಹೊಂದಾಣಿಕೆ ಅನುದಾನ ಒದಗಿಸಲು ಮನವಿ ಮಾಡಿದೆ. ಒಟ್ಟಿನಲ್ಲಿ ರಾಜ್ಯಕ್ಕೆ ಆಶಾದಾಯಕ ನ್ಯಾಯ ಸಮ್ಮತ ನಿರ್ಣಯಗಳನ್ನು ಹಣಕಾಸು ಆಯೋಗವು ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ 16ನೇ ಹಣಕಾಸು ಆಯೋಗದ ಸದಸ್ಯರಾದ ಅಜಯ್ ನಾರಾಯಣ ಝಾ, ಶ್ರೀಮತಿ ಅನ್ನಿ ಜಾರ್ಜ್ ಮ್ಯಾಥ್ಯೂ, ಡಾ. ಮನೋಜ್ ಪಾಂಡಾ ಮತ್ತು ಡಾ. ಸೌಮ್ಯ ಕಾಂತಿ ಘೋಷ್ ಕಾರ್ಯದರ್ಶಿಗಳಾದ ರಿತ್ವಿಕ್ ಪಾಂಡೆ ಉಪಸ್ಥಿತರಿದ್ದರು.