ಬೆಂಗಳೂರು (ಕರ್ನಾಟಕ ವಾರ್ತೆ): ವಿಕಲಚೇತನ ಮಕ್ಕಳು ಎದುರಿಸುತ್ತಿರುವ ಸಾಮಾಜಿಕ, ದೈಹಿಕ ಸವಾಲುಗಳಿಗೆ ಸ್ಪಂದಿಸಿ ಅವರಿಗೆ ಉತ್ತಮ ಭವಿಷ್ಯ ನೀಡುವಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಹಕರಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ ಅವರು ತಿಳಿಸಿದರು.
ಇಂದು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಬಾಲ ನ್ಯಾಯ ಸಮಿತಿ, ಪೋಕ್ಸೋ ಸಮಿತಿ ಕರ್ನಾಟಕ ಉಚ್ಚ ನ್ಯಾಯಲಯ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಗೃಹ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಹಕ್ಕುಗಳ ಆಯುಕ್ತಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಾಣಾ ಅಯೋಗ, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ರಕ್ಷಣೆ ಆಯುಕ್ತಾಲಯ. ನಿಮಾನ್ಸ್, ಯುನೆಸೆಫ್ ಮತ್ತು ಇತರೆ ಸ್ವಯಂ ಸೇವೆ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಕಲಚೇತನ ಮಕ್ಕಳ ಹಕ್ಕುಗಳು, ಸವಾಲುಗಳು, ಅವಕಾಶಗಳು ಕುರಿತ ರಾಜ್ಯಮಟ್ಟದ ವಾರ್ಷಿಕ ಪಾಲುದಾರರ ಸಮಾಲೋಚನಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ಭಾರತ ಸಂವಿಧಾನದ 14ನೇ ವಿಧಿ ಎಲ್ಲಾ ಪ್ರಜೆಗಳಿಗೆ ಕಾನೂನಿನ ಮುಂದೆ ಸಮಾನತೆ ಹಕ್ಕು ನೀಡುತ್ತದೆ. ಮಕ್ಕಳು ಅದರಲ್ಲೂ ವಿಕಲಚೇತನ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಬಹು ಮುಖ್ಯ. ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು - ಬಾಲಾಪರಾಧ, ಲೈಂಗಿಕ ಶೋಷಣೆ, ಹಿಂಸೆಯಿಂದ ನಲುಗಿದ ಮಕ್ಕಳಿಗೆ ಕಾನೂನಿನ ಪರಿಮಿತಿಯಲ್ಲಿ ರಕ್ಷಣೆ, ನ್ಯಾಯ ನೀಡುವಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಶ್ರಮಿಸಬೇಕು ಎಂದರು.
ವಿಕಲಚೇತನ ಮಕ್ಕಳಿಗೆ ಆಡಳಿತಶಾಯಿ ವ್ಯವಸ್ಥೆಯ ತೊಡಕುಗಳನ್ನು ಪರಿಹರಿಸಿ, ಇವರಿಗೆ ಸಲ್ಲುವ ಯೋಜನೆಗಳು, ತರಬೇತಿಗಳ ಸಂಪೂರ್ಣ ಸಹಾಯಹಸ್ತ ನೀಡಬೇಕು ಹಾಗೆ ಇವುಗಳನ್ನು ಅವರಿಗೆ ತಲುಪಿಸುವ ಹಾಗೆ ನೋಡಿಕೊಳ್ಳುಬೇಕು. ವಿಕಲಚೇತನ ಮಕ್ಕಳಿಗೆ ನೀಡುವ ಟಾಸ್ಕ್‍ಗಳಿಗೆ ತಂತ್ರಜ್ಞಾನದ ಅಳವಡಿಕೆ ಮಾಡಿಕೊಂಡು ಅವರಿಗೆÉ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಇಂತಹ ಮಕ್ಕಳು ಎದುರಿಸುತ್ತಿರುವ ಸಾಮಜಿಕ ಕಳಂಕವನ್ನು ತೊಡಿದು ಹಾಕಿ, ಅವರೂ ಸಹ ಉತ್ತಮವಾಗಿ ಇತರರಂತೆ ಬದುಕಲು ನಾವು ಅವಕಾಶ ಕಲ್ಪಿಸಬೇಕು. ಇದನ್ನು ಕಾರ್ಯಗತ ಮಾಡಲು ಎಲ್ಲರೂ ಶ್ರಮಿಸಬೇಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರು ಹಾಗೂ ಬಾಲ ನ್ಯಾಯ ಮತ್ತು ಪೋಸ್ಕೋ ಸಮಿತಿ ಅಧ್ಯಕ್ಷರಾದ ಎಸ್. ಸುನೀಲ್ ದತ್ ಯಾದವ್ ಪ್ರಾಸ್ತಾವಿಕ ಭಾಷಣ ಮಾಡುತ್ತಾ, ವಿಕಲಚೇತನ ಮಕ್ಕಳ ಹಕ್ಕುಗಳ ರಕ್ಷಣೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಹಲವು ಸವಲುಗಳು, ತೊಡಕುಗಳು ಇದ್ದೇ ಇರುತ್ತದೆ. ಇವುಗಳನ್ನು ದಾಟಿ ಅವರಿಗೆ ಉತ್ತಮ ಭವಿಷ್ಯ ನೀಡುವಲ್ಲಿ ನಾವು ಸಹಕರಿಸಬೇಕು. ಸಂವಾದ ಪ್ರಕ್ರಿಯೆ ಹಾಗೂ ಅನುಷ್ಠಾನದ ಮೂಲಕ ಎಲ್ಲರ ಸಹಭಾಗಿತ್ವದಲ್ಲಿ ಅವರಿಗೆ ಉತ್ತಮ ಭವಿಷ್ಯ ಕಲ್ಪಿಸಲು ಸಾಧ್ಯ. ಇದರಿಂದ ಸಮಾಜಿಕ ಪರಿವರ್ತನೆ ಸಹ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ವಿ. ಕಾಮೇಶ್ವರರಾವ್, ಅನು ಶಿವರಾಮ್, ಕರ್ನಾಟಕ ರಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್, ಯುನೆಸೆಫ್‍ನ ಮಕ್ಕಳ ಹಕ್ಕುಗಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನಂತರ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ವಿಕಲಚೇತನ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯ, ಈ ಮಕ್ಕಳು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಭಾಷಣ ಮಾಡಿದರು.