ಬೆಂಗಳೂರು : ತಮೋಹಾ ಆರ್ಟ್ಸ್ ಫೌಂಡೇಶನ್ ತನ್ನ 8ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 'ಜಗತಿ' ಎಂಬ ವಿಶೇಷ ನೃತ್ಯರೂಪಕವನ್ನು ಆಯೋಜಿಸಿದೆ. ದೇವಿಯ ವಿಭಿನ್ನ ಕಥಾನಕಗಳನ್ನು ಮನಮೋಹಕವಾಗಿ ನೃತ್ಯದ ಮೂಲಕ ಸಂಸ್ಥೆಯ 60ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮವು ಆಗಸ್ಟ್ 10, ಶನಿವಾರ ಸಂಜೆ 5.30ಕ್ಕೆ ನಗರದ ಜೆ. ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಸಂಗೀತ, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಹಾಗೂ ಬಹುಮುಖ ಕಲಾವಿದರಾದ ವಿದುಷಿ ಶ್ರೀಮತಿ ರೋಹಿಣಿ ರಘುನಂದನ್ ಹಾಗೂ ಶ್ರೀ ಲಲಿತಾ ಕಲಾನಿಕೇತನದ ಕಲಾತ್ಮಕ ನಿರ್ದೇಶಕಿ, ಭರತನಾಟ್ಯ ಕಲಾವಿದೆ ಗುರು. ವಿದುಷಿ ರೇಖಾ ಜಗದೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಮೋಹಾ ಆರ್ಟ್ಸ್ ಫೌಂಡೇಶನ್ ನ ಕಲಾತ್ಮಕ ನಿರ್ದೇಶಕರಾದ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ಪವಿತ್ರ ಪ್ರಶಾಂತ್ ತಿಳಿಸಿದ್ದಾರೆ.