ಬೆಂಗಳೂರು: ರೈಲ್ವೇ ನೇಮಕಾತಿ ಮಂಡಳಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಕನ್ನಡದಲ್ಲಿ ಬರೆಯುವ ಅವಕಾಶ ನೀಡಿರುವುದಕ್ಕಾಗಿ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಭಿನಂದಿಸಿದ್ದಾರೆ. ಕನ್ನಡದ ಸಚಿವರಿದ್ದಲ್ಲಿ ಕನ್ನಡತನ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದ್ದು ಉಳಿದ ಸಚಿವರಿಗೂ ಈ ನಡೆ ಮಾರ್ಗದರ್ಶಕವಾಗಲಿ ಎಂದು ಅವರು ಆಶಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಹಿಂದೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯುವ ಅವಕಾಶವಿದ್ದಿದ್ದನ್ನು ಸ್ಮರಿಸಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಇದರಿಂದಾಗಿ ಅನೇಕ ಕನ್ನಡಿಗರು ಅವಕಾಶವಂಚಿತರಾಗುತ್ತಿದ್ದರು ಇನ್ನು ಮುಂದೆ ಈ ಸಮಸ್ಯೆ ಪರಿಹಾರವಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ಬ್ಯಾಂಕ್, ವಿಮೆ ಮೊದಲಾದ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಅನೇಕ ಇಲಾಖೆಗಳ ನೇಮಕಾತಿ ಮತ್ತು ಬಡ್ತಿಯ ಪರೀಕ್ಷೆಗಳು ಕನ್ನಡದಲ್ಲಿ ನಡೆದು ಸ್ಥಳೀಯರಿಗೆ ಉದ್ಯೋಗಗಳು ದೊರಕುವುದು ಅಗತ್ಯವಾಗಿದ್ದು ಅದಕ್ಕಾಗಿ ಸಂಘಟಿತ ಹೋರಾಟ ನಡೆಸ ಬೇಕಿದೆ ಎಂದು ಅಭಿಪ್ರಾಯ ಪಟ್ಟಿರುವ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು