ನವಕರ್ನಾಟಕ ಪ್ರಕಾಶನ ಸಂಸ್ಥೆಯ ಮೂಲಕ ಅಕ್ಷರ ಕ್ರಾಂತಿಯನ್ನು ಮಾಡಿದ ಆರ್.ಎಸ್. ರಾಜಾರಾಮ್ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಈವರೆಗೂ ಸುಮಾರು 6000 ಕನ್ನಡದ ವಿಶಿಷ್ಟ ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು ಆರ್. ಎಸ್. ರಾಜಾರಾಮ್. 'ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ನವಕರ್ನಾಟಕದ ಘೋಷವಾಕ್ಯದ ಮೂಲಕ ಕನ್ನಡಿಗರಿಗೆ ಉತ್ತಮ ಪುಸ್ತಕಗಳು ದೊರಕುವಂತೆ ಮಾಡಿದವರು ರಾಜಾರಾಮ್ , ಎಂದು ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ವಿಶ್ಲೇಷಿಸಿದ್ದಾರೆ.
ನವಕರ್ನಾಟಕ ಸಂಸ್ಥೆಯನ್ನು ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿ ಬೆಳೆಸಲೇಬೇಕೆಂಬ ಆಕಾಂಕ್ಷೆಯಿಂದ ರಾಜಾರಾಮ್ ರೂಪಿಸಿದ ‘ವಿಶ್ವ ಕಥಾಕೋಶ’ 87 ದೇಶಗಳ 317 ಕಥೆಗಳ ಸಂಗ್ರಹ. ಅವುಗಳನ್ನು ಅನುವಾದ ಮಾಡಲು ಲೇಖಕರ ಪಡೆಯೇ ಮೂಡಿತು. ಅನೇಕ ರಾಯಭಾರ ಕಛೇರಿಗಳಿಗೆ ಪತ್ರ ಬರೆದು ಒಪ್ಪಿಗೆ ಪಡೆದರು. ನಿರಂಜನ ಅವರನ್ನು ಸಂಪಾದಕರಾಗಲು ಒಪ್ಪಿಸಿದರು. ಇದು ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲಾಗಿದೆ ಎಂದಿರುವ ನಾಡೋಜ ಡಾ.ಮಹೇಶ ಜೋಶಿ 'ಕರ್ನಾಟಕದ ಏಕೀಕರಣ ಇತಿಹಾಸ’ (ಸಂ: ಡಾ. ಎಚ್.ಎಸ್. ಗೋಪಾಲರಾವ್); 'ಪ್ರಜಾವಾಣಿ’ಯ ಜನಪ್ರಿಯ ಅಂಕಣವಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’ದ ಗ್ರಂಥರೂಪ; ಪ್ರೊ. ಜಿ. ರಾಮಕೃಷ್ಣ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಸ್ವಾತಂತ್ರ್ಯೋತ್ತರ ಭಾರತ ಅವಲೋಕನ’; ಹಾ. ಮಾ. ನಾಯಕ್ ಮತ್ತು ಅನಂತರ ಪ್ರಧಾನ ಗುರುದತ್ ಅವರ ಸಂಪಾದಕತ್ವದಲ್ಲಿ ಹೊರಬಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರನ್ನು ಕುರಿತು ‘ನವಕರ್ನಾಟಕ ಸಾಹಿತ್ಯ ಸಂಪದ’; ಜಗತ್ತಿನ ಅನೇಕ ಮಹನೀಯರನ್ನು ಕುರಿತು ಅನೇಕ ಲೇಖಕರ ಬರಹ ಒಳಗೊಂಡ ಡಾ. ನಾ. ಸೋಮೇಶ್ವರ ಅವರ ಸಂಪಾದನಾ ನೇತೃತ್ವದ 'ವಿಶ್ವಮಾನ್ಯರು' ಮಾಲಿಕೆ; ವಿಜ್ಞಾನ ಪ್ರಸರಣ ಉದ್ಧೇಶದ ‘ಜ್ಞಾನ ವಿಜ್ಞಾನ ಕೋಶ’ ಇಂತಹ ಹತ್ತಾರು ಕೃತಿಗಳ ಮೂಲಕ ರಾಜಾರಾಮ್ ಕನ್ನಡ ಪುಸ್ತಕ ಲೋಕಕ್ಕೆ ಗೌರವ ಘನತೆ ತಂದರು. ‘ನೆಮ್ಮದಿಯ ನಾಳೆ ನಮ್ಮದು’ ಎಂದು ಅವರ ನೀಡಿದ ಘೋಷವಾಕ್ಯ, ಅಕ್ಷರ ಲೋಕದ ಬಗ್ಗೆ ಅವರಿಗೆ ಇದ್ದ ನಂಬಿಕೆಗೆ ನಿದರ್ಶನವಾಗಿತ್ತು. ಅವರು ರೂಪಿಸಿದ ‘ಹೊಸತು’ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತನ್ನೇ ನೀಡಿತು. ರಾಜಾರಾಮ್ ಅವರ ಕೊಡುಗೆಗಳು ನಮಗೆಲ್ಲರಿಗೂ ಮಾದರಿ, ಅವರ ಸ್ಮರಣೆ ಉಳಿಯುವಂತಹ ಕೆಲಸಗಳಾಗಲಿ ಎಂದು ನಾಡೋಜ ಡಾ.ಮಹೇಶ ಜೋಶಿ ಆಶಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು