ಬೆಂಗಳೂರು (ಕರ್ನಾಟಕ ವಾರ್ತೆ): 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಯಿಂದ ಸರ್ಕಾರಕ್ಕೆ ಯಾವತ್ತೂ ಹೊರೆಯಾಗುವುದಿಲ್ಲ. ನಾನು ಎರಡು ವೇತನ ಆಯೋಗಗಳ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದೇನೆ. 2018ರಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಮತ್ತು 2024ರಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲಾಗಿದೆ. ನನಗೆ ಈ ಅವಕಾಶ ಸಿಕ್ಕಿರುವುದು ಹೆಮ್ಮೆ ಅನಿಸುತ್ತದೆ. 4ನೇ ವೇತನ ಆಯೋಗದ ಜಾರಿ ಸಂದರ್ಭದಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದು, ಮಾನ್ಯ ದಿವಂಗತ ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದರು. ಒಟ್ಟಾರೆ ನನಗೆ 3 ವೇತನ ಆಯೋಗಗಳ ಜಾರಿ ಮಾಡುವ ಅವಕಾಶ ದೊರೆತಿದೆ. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದಾಗ ಸರ್ಕಾರಕ್ಕೆ ಸುಮಾರು 10,500 ಕೋಟಿ ರೂಪಾಯಿಗಳಿಗೂ ಹೆಚ್ಚು ಹಾಗೂ 7ನೇ ವೇತನ ಆಯೋಗದ ಶಿಫಾರಸ್ಸಿನಿಂದಾಗಿ ಸುಮಾರೂ 20,000 ಕೋಟಿ ರೂಪಾಯಿಗಳಿಗೂ ಹೆಚ್ಚು ಸರ್ಕಾರಕ್ಕೆ ಹೊರೆಯಾಗಿದ್ದು, ಇದನ್ನು ಸರ್ಕಾರವು ಯಾವತ್ತೂ ಹೊರೆ ಎಂದು ಭಾವಿಸುವುದಿಲ್ಲ. ನಮ್ಮ ಸರ್ಕಾರ ಯಾವಾಗಲೂ ಸರ್ಕಾರಿ ನೌಕರರ ಪರವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ನಮ್ಮ ಸರ್ಕಾರ ಯಾವಾಗಲೂ ಸರ್ಕಾರಿ ನೌಕರರ ಪರವಾಗಿರುತ್ತದೆ – ಮುಖ್ಯಮಂತ್ರಿ ಸಿದ್ದರಾಮಯ್ಯ
August 18, 2024
0
ಇಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳಿಂದ ಹಮ್ಮಿಕೊಳ್ಳಲಾದ “ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ನಮ್ಮಭಿಮಾನದ ಅಭಿನಂದನಾ ಸಮಾರಂಭ”ವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ನಾವು ನೀವೆಲ್ಲರೂ ರಾಜ್ಯದ ನಾಗರೀಕರ ಹಿತಕಾಪಾಡಲು ಇರುವಂತವರು. ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯಿಂದ ವಂಚಿತರಾದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಅದಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಶರಣರು, ಸ್ವಾತಂತ್ರ್ಯ ಹೋರಾಟಗಾರರು ಕಂಡಂತ ಕನಸನ್ನು ನನಸು ಮಾಡುವ ಕೆಲಸ ನಮ್ಮೆಲ್ಲರ ಮೇಲಿದೆ. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವುದರ ಮೂಲಕ ಶೋಷಿತರನ್ನು ಮೇಲೆತ್ತುವ ಕೆಲಸ ಮಾಡುವ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಸಮಾಜದಲ್ಲಿ ಅಸಮಾನತೆಯನ್ನು ತೊಡೆದುಹಾಕಿ ಸಮಾನತೆಯನ್ನು ತರಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಜಾರಿ ಮಾಡುವ ಮುನ್ನ 1949ರ ನವೆಂಬರ್ 25ರಂದು ಮಾಡಿದ ತಮ್ಮ ಪ್ರಥಮ ಭಾಷಣದಲ್ಲಿ, 1950 ಜನವರಿ 26ರಂದು ಸಂವಿಧಾನ ಜಾರಿಯಾಗುತ್ತಿದ್ದು, ವೈವಿದ್ಯತೆಯಿಂದ ಕೂಡಿದ ಸಮಾಜಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದೇವೆ. ಸಂವಿಧಾನ ಜಾರಿಯಾದ ನಂತರ ಶೋಷಿತ ಜನರನ್ನು ಮೇಲೆತ್ತುವ ಕೆಲಸವನ್ನು ಮಾಡಿದಾಗ ಹಾಗೂ ಸಮಾಜದಲ್ಲಿ ಬದಲಾವಣೆಯನ್ನು ತಂದಾಗ ಮಾತ್ರ ಸಂವಿಧಾನದ ಆಶಯ ಪೂರ್ಣವಾಗುತ್ತದೆ ಎಂದು ನುಡಿದಿದ್ದರು. ಅದರಂತೆ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡುವ ಕೆಲಸ ನಮ್ಮೆಲ್ಲರ ಜವಬ್ದಾರಿ. ಎಲ್ಲರಿಗೂ ಬೇಡಿಕೆಗಳಿವೆ. ಬೇಡಿಕೆಗಳನ್ನು ಪೂರೈಸಲು ಕೇಳುತ್ತಾ, ಬೇಡಿಕೆಗಳನ್ನು ಪೂರೈಸಿಕೊಳ್ಳುವುದರೊಂದಿಗೆ ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಅಮೂಲ್ಯ ಬೇಡಿಕೆಗಳಾದ ಆರೋಗ್ಯ ಸಂಜೀವಿ, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಹಾಗೂ ಎನ್.ಪಿ.ಎಸ್.ಅನ್ನು ರದ್ದುಗೊಳಿಸಿ ಓ.ಪಿ.ಎಸ್ ಜಾರಿ ಮಾಡುವಂತೆ ಕೋರಿ ರಾಜ್ಯಧ್ಯಕ್ಷರು ಸರ್ಕಾರಕ್ಕೆ ಇಂದು ಮನವಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್. ರದ್ದು ಮಾಡಿ ಓ.ಪಿ.ಎಸ್. ಜಾರಿ ಮಾಡುವ ಸಂಬಂಧ ಸಮಿತಿಯನ್ನು ಜಾರಿ ಮಾಡಲಾಗಿದೆ. ಸಮಿತಿಯು ವರದಿ ಸಲ್ಲಿಸಿದ ತಕ್ಷಣ ಪರಿಶೀಲಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಶೀಘ್ರದಲ್ಲಿಯೇ ಅದನ್ನು ಜಾರಿಮಾಡಲಾಗುವುದು. ಶಾಲಾ ಪದವಿಧರ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಸರ್ಕಾರ ಯಾವಾಗಲೂ ನೌಕರರ ಪರವಾಗಿದೆ. ಸರ್ಕಾರ ಎಂದರೆ ನೀವು ಮತ್ತು ನಾಗರೀಕರು. ನಾಗರೀಕರ ತೆರಿಗೆ ಹಣವನ್ನು ಸೂಕ್ತ ರೀತಿಯಲ್ಲಿ ಖರ್ಚು ಮಾಡುವ ಜವಬ್ದಾರಿ ನಮ್ಮ ನಿಮ್ಮೆಲರ ಮೇಲಿದೆ. “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಅಂದರೆ ನಾಗರೀಕರ ಹಣವನ್ನು ಪೊಲಾಗದಂತೆ ಖರ್ಚು ಮಾಡುವುದು ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು. ಜನರ ಹಣವನ್ನು ಜನರಿಗೆ ತಲುಪಿಸಬೇಕು. ಅವರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ 15,500ಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದು, ಅವುಗಳನ್ನು ಶೀಘ್ರವೇ ತುಂಬುವ ಕೆಲಸ ಸರ್ಕಾರ ಮಾಡುವುದು. ಸರ್ಕಾರ ನೌಕರರ ಜೊತೆ ಯಾವಾಗಲೂ ಇರುತ್ತದೆ. ನಾವು ನಿವೆಲ್ಲರೂ ಸಮಾಜದ ಜೊತೆ ಇರೋಣ. ಸಾಮಾಜದ ಅಸಮಾನತೆಯನ್ನು ತೊಡೆದುಹಾಕೋಣ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ಮಾತನಾಡಿ ಈಗಾಗಲೇ ಶಾಲಾ ಪದವೀಧರ ಶಿಕ್ಷಕರ ವೃಂದ ಮತ್ತು ನಿಯಮಗಳ ತಿದ್ದುಪಡಿ ಮಾಡುವ ಸಂಬಂಧ ಮನವಿಯನ್ನು ಪಡೆಯಲಾಗಿದೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮಂತ್ರಿಮಂಡಲದ ಜೊತೆ ಚರ್ಚಿಸಿ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಮಾತನಾಡುತ್ತಾ, ಸರ್ಕಾರ ಸವಲತ್ತುಗಳನ್ನು ಶೋಷಿತ ವರ್ಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕೆಲಸ ಮಾಡಬೇಕು. ಸರ್ಕಾರಿ ಸವಲತ್ತುಗಳಿಂದ ವಂಚಿತರಾದವರನ್ನು ಮೇಲೆತ್ತುವ ಕೆಲಸ ನಾವು ಮಾಡಬೇಕು. ಅಸಮಾನತೆಯನ್ನು ಹೋಗಲಾಡಿಸಬೇಕು. ರಾಜ್ಯದಲ್ಲಿ ಶೇಕಡ 5ರಷ್ಟು ಬಡತನವಿದೆ. ಅದನ್ನು ಹೊಗಲಾಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಆಶಯ ಈಡೇರುತ್ತದೆ. ಸರ್ಕಾರದಿಂದ ಜನಸ್ಪಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಜನಸ್ಪಂದನಾ ಕಾರ್ಯಕ್ರಮಕ್ಕೆ ಬಂದು ಅಹವಾಲುಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಆದರೆ ಅವರ ಸಮಸ್ಯೆಗಳನ್ನು ತಮ್ಮ ಹಂತದಲ್ಲಿಯೇ ಪರಿಹರಿಸಬೇಕು. ಸಮಸ್ಯೆಗಳನ್ನು ಹಿಡಿದುಕೊಂಡು ಜನಸ್ಪಂದನಾ ಕಾರ್ಯಕ್ರಮದ ವರೆಗೆ ಬಾರದಂತೆ ನೋಡಿಕೊಳ್ಳುವ ಜವಬ್ದಾರಿ ಸರ್ಕಾರಿ ನೌಕರರಾದ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಆಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಅಧ್ಯಕ್ಷತೆಯನ್ನು ವಹಿಸಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನೌಕರರಿಗೆ ಆರೋಗ್ಯ ಸಂಜೀವಿನಿ ಜಾರಿ, ಓ.ಪಿ.ಎಸ್. ಜಾರಿ ಮತ್ತು ಶಾಲಾ ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸಂಬಂಧ ಮನವಿಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಜೀರ್ ಅಹಮ್ಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ರಾಥೋಡ್, ಶಾಸಕರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆರ್ಥಿಕ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಖಜಾಂಚಿ, ಆರ್. ಶ್ರೀನಿವಾಸ್, ನಿವೃತ್ತ ರಾಜ್ಯಧ್ಯಕ್ಷರಾದ ಡಾ. ಎಲ್. ಭೈರಪ್ಪ, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ರಾಜ್ಯ ಖಜಾಂಚಿ ಡಾ. ಎಸ್. ಸಿದ್ದರಾಮಣ್ಣ, ನವದೆಹಲಿಯ ರಾಷ್ಟ್ರೀಯ ಹಳೆ ಪಿಂಚಣಿ ಮರುಸ್ಥಾಪನೆ ಸಂಯುಕ್ತ ಮೋರ್ಚ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಪಿ.ರಾವತ್, ಬೆಂಗಳುರು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿವೃತ್ತ ಉಪ ಕಾರ್ಯದರ್ಶಿಗಳಾದ ದೇವರಾಜು ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು