ಸ್ನಾತಕೋತ್ತರ/ಪದವಿ ಮುಗಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಆಗಸ್ಟ್‌ 09, (ಕರ್ನಾಟಕ ವಾರ್ತೆ):  ಕರ್ನಾಟಕ ಮಾಧ್ಯಮ ಆಕಾಡೆಮಿ, ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದು, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಕೌಶಲ್ಯಾಭಿವೃದ್ಧಿಗೆ ಶ್ರಮಿಸುತ್ತಿದೆ.



ಸರ್ಕಾರದಿಂದ ಪುನಾರಚಿತಗೊಂಡಿರುವ ಸಮಿತಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಅಕಾಡೆಮಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಆ ದಿಸೆಯಲ್ಲಿ ಮಾಧ್ಯಮ ಕಚೇರಿಗಳ ಸಹಕಾರವನ್ನು ಪಡೆದು ಪತ್ರಕರ್ತರ ಕೌಶಲ್ಯಾಭಿವೃದ್ಧಿಗೆ ತರಬೇತಿ ಹಮ್ಮಿಕೊಳ್ಳುವುದು ಅಕಾಡೆಮಿಯ ಹೊಸ ಯೋಜನೆಯಾಗಿದೆ. ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿ ಮುಗಿಸಿ ಹೊರ ಬರುವ ವಿದ್ಯಾರ್ಥಿಗಳಿಗೆ ಮಾಧ್ಯಮ ಕಚೇರಿಯ ಎಲ್ಲಾ ವಿಭಾಗಗಳಲ್ಲಿ ತರಬೇತಿಯನ್ನು ಕೊಡಿಸುವ ಮೂಲಕ, ತರಬೇತಿ ಹೊಂದಿದ ವಿದ್ಯಾರ್ಥಿಗಳು ಪತ್ರಕರ್ತರಾಗುವಂತೆ ಸಿದ್ಧಪಡಿಸುವುದು ಅಕಾಡೆಮಿಯ ಉದ್ದೇಶವಾಗಿದೆ.

ಪ್ರಸಕ್ತ ಸಾಲಿನಲ್ಲಿ 5 ಮಂದಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮುಖ ದಿನಪತ್ರಿಕೆಗಳಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯಲು ಮಾಸಿಕ ತಲಾ 20,000/- ರೂ ಗಳನ್ನು ಶಿಶ್ಯವೇತನ ನೀಡಲಾಗುವುದು. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಮಹಿಳಾ ವಿದ್ಯಾರ್ಥಿಗಳಿಗೆ ಆಗಸ್ಟ್ 26 ರೊಳಗೆ ತಮ್ಮ ಸ್ವವಿದರ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಆರ್ಥಿಕ ಸ್ಥಿತಿ, ಅಂಕಪಟ್ಟಿಗಳ ಫೋಟೋ ಪ್ರತಿಯನ್ನು ಸ್ಕ್ಯಾನ್ ಮಾಡಿ karnatakamediaacademy@gmail.com ಗೆ ಇಮೇಲ್ ಮೂಲಕ ಕಳುಹಿಸಲು ಕೋರಿದೆ.

28 ವರ್ಷದೊಳಗಿನ ಮಹಿಳಾ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಕಾಡೆಮಿಯು ಅರ್ಹತಾ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯ ದಿನಾಂಕ, ಸ್ಥಳ ಮತ್ತು ಸಮಯವನ್ನು ಸಂದರ್ಶನದ ವೇಳೆ ತಿಳಿಸಲಾಗುವುದು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Post a Comment

0Comments

Post a Comment (0)