ಪಡಿ ಬೇಡುವುದು ಅಥವಾ ಚತ್ರ ಬೇಡುವುದು ಎಂಬುದು ಒಂದು ವಿಶಿಷ್ಟವಾದ ಸಂಪ್ರದಾಯ.ಇದು ಸಾಮಾನ್ಯವಾಗಿ ಶ್ರೀ ವಿಷ್ಣು ವನ್ನು ಮನೆ ದೇವರಾಗಿ ಉಳ್ಳವರ ಅಥವಾ ವಿಷ್ಣು ಒಕ್ಕಲು ಗಳಿಗೆ ಇರುವ ಪದ್ಧತಿ.ಇದು ಎಲ್ಲಾ ಜಾತಿಗಳಲ್ಲೂ ಇರುವುದು.ಅವರವರ ಮನೆಯ ಸಂಪ್ರದಾಯದಂತೆ ಎಲ್ಲರೂ ಆಚರಿಸುತ್ತಾರೆ.ಆದರೆ ಶಿವನನ್ನು ಹಾಗು ಅವನ ಪರಿವಾರವನ್ನು ಮನೆ ದೇವರಾಗಿ ಉಳ್ಳವರು ಈ ಸಂಪ್ರದಾಯ ಪಾಲಿಸುವುದಿಲ್ಲ.
ಶ್ರಾವಣದ ಶನಿವಾರಗಳಂದು ಮನೆಯ ಗಂಡಸರು ಹಾಗು ಗಂಡು ಮಕ್ಕಳು ತಲೆಗೆ ಎಣ್ಣೆ ಸ್ನಾನ ಮಾಡಿ , ಮಡಿಯಲ್ಲಿ ಪಂಚೆ, ಶಲ್ಯ ಧರಿಸಿ ಹಣೆಗೆ ನಾಮವನ್ನು ಧರಿಸುತ್ತಾರೆ.ಕೆಂಪು ಅಥವಾ ಬಿಳಿ ನಾಮ ಅವರವರ ಮನೆಯ ಪೂರ್ವ ಸಂಪ್ರದಾಯದಂತೆ ಇರುತ್ತದೆ.ನಂತರ ಹೊಸ ಪಾತ್ರೆ ಒಂದನ್ನು ಹಿಡಿದು ಅದಕ್ಕೆ ಕೂಡಾ ನಾಮ ಬರೆದು ಅಕ್ಕ ಪಕ್ಕದ ಮನೆ ಬಾಗಿಲಲ್ಲಿ ನಿಂತು ಶ್ರೀ ವೆಂಕಟೇಶಾಯ ಮಂಗಳಂ ಎಂದು ಹೇಳುತ್ತಾರೆ.ಕೆಲವು ಕಡೆ ವೆಂಕಟರಮಣ ದೇವರ ಚತ್ರ ಎಂದು ಹೇಳುವ ಪದ್ಧತಿ ಇದೆ.ಆಗ ಮನೆಯ ಯಜಮಾನಿ 3 ಬೊಗಸೆಯಲ್ಲಿ ಅಕ್ಕಿಯನ್ನು ತುಂಬಿ ಪಾತ್ರೆಗೆ ಹಾಕುತ್ತಾರೆ.ಕೆಲವರು ಹಣ ಹಾಕುವುದು ಉಂಟು.
ಹೀಗೆ ಕೆಲವು ಮನೆಗಳಿಗೆ ಹೋಗಿ ನಂತರ ಪಾತ್ರೆಯನ್ನು ದೇವರ ಗೂಡಿನಲ್ಲಿ ಇಡುತ್ತಾರೆ.ಸಾಮಾನ್ಯವಾಗಿ ದಾಯಾದಿ ಅಂದರೆ ಅಣ್ಣ ತಮ್ಮಂದಿರ ಮನೆಗೆ ಹೋಗಿ ಪಡಿ ಬೇಡುವುದಿಲ್ಲ.ಶ್ರಾವಣ ಶನಿವಾರ ಪೂರ್ತಿ ಪಡಿ ಬೀಡುತ್ತಾರೆ.ಕಡೆ ಶನಿವಾರ ಪಡಿ ಬೇಡಿದ ನಂತರ ಮನೆಯ ಹೆಂಗಸರು ಎಲ್ಲ ಶ್ರಾವಣ ಶನಿವಾರ ಪಡಿ ಬೇಡಿ ಬಂದ ಅಕ್ಕಿಯನ್ನೆಲ್ಲಾ ಉಪಯೋಗಿಸಿ ಸಿಹಿ ಪೊಂಗಲ್ ತಯಾರಿಸಿ ಮನೆ ದೇವರಿಗೆ ನೈವೇದ್ಯ ಮಾಡಿ ಮನೆ ಮಂದಿಗೆಲ್ಲ ಹಂಚುವರು.ಹಣವನ್ನು ಮನೆ ದೇವರಿಗೆ ಕಳಿಸುವರು.ಕೆಲವರು ಧರ್ಮ ಕಾರ್ಯಗಳಿಗೆ ವಿನಿಯೋಗಿಸುವರು.
ವೈಚಾರಿಕವಾಗಿ ನೋಡಿದರೆ ಮನೆ ದೇವರ ನೆನಪು ಜೊತೆಗೆ ಪಡಿ ಬೇಡುವುದು ವಿನಯವನ್ನು ಕಲಿಸುತ್ತದೆ ತಾಳ್ಮೆಯನ್ನು ಕಲಿಸುತ್ತದೆ.ಹಂಚಿ ತಿನ್ನುವ ಬುದ್ಧಿ ಜೊತೆಗೆ ಸಮಯದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲಬೇಕು ಎಂಬುದನ್ನು ಕಲಿಸುತ್ತದೆ.ನಮ್ಮ ಹಿಂದೂ ಧರ್ಮದ ಸಾರ ಇದೆ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಜನರ ಆಚರಣೆ ಬಗ್ಗೆ ತಿಳಿಸುತ್ತದೆ.ಉಳಿದಂತೆ ಅವರವರ ಹಿರಿಯರ ಸಂಪ್ರದಾಯದಂತೆ ಆಚರಣೆ ಇರುತ್ತದೆ.
ರಾಧಿಕಾ ಜಿ.ಎನ್. ಟೀವೀ ಹೋಸ್ಟ್
7019990492