ಬೆಂಗಳೂರು (ಕರ್ನಾಟಕ ವಾರ್ತೆ): ನಮ್ಮ ದೇಶದದಲ್ಲಿ ಶೇಕಡ 3 ರಷ್ಟಿರುವ ಹೆಚ್.ಐ.ವಿ ಯನ್ನು 2030 ರೊಳಗೆ ಶೂನ್ಯ ಮಟ್ಟಕ್ಕೆ ತರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ವತಿಯಿಂದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ “ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್.ಐ.ವಿ ತಡೆಗಟ್ಟಲು ತೀವ್ರಗೊಳಿಸಿದ ಐ.ಇ.ಸಿ.ಪ್ರಚಾರಾಂದೋಲನ-2024” ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು, ಇಂದು ಯುವಕರಲ್ಲಿಯೆ ಹೆಚ್.ಐ.ವಿ. ಸೋಂಕು ಕಂಡು ಬರುತ್ತಿದ್ದು, ಯುವ ಜಾಗೃÀತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದೇಶದಾದ್ಯಂತ ಆಚರಿಸಲಾಗಿತ್ತಿದೆ ಎಂದರು.
ನಮ್ಮ ದೇಶದಲ್ಲಿ ಹೆಚ್.ಐ.ವಿ ಸೋಂಕಿತರ ಸಂಖ್ಯೆ 24.67 ಲಕ್ಷ ಇದ್ದು, ಕರ್ನಾಟಕ ರಾಜ್ಯದಲ್ಲಿ 2,80,497 ಸೋಂಕಿತರಿದ್ದು, ಹೆಚ್.ಐ.ವಿ ಸೋಂಕನ್ನು ತಡೆಯುವ ವಿಧಾನದ ಬಗೆ ಜನರಲ್ಲಿ ಜಾಗೃತಿÀ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಆರೋಗ್ಯ ಇಲಾಖೆಯು ಎರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ಎಲ್ಲಾ ಕಡೆಯು “ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿ ಯುವಜನತೆಯ ಮುಂದಾಳತ್ವ” ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸುತ್ತದೆ ಎಂದರು.
ಲೈಂಗಿಕ ಕಾರ್ಯಕರ್ತರಿಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ಮತ್ತು ಹೆಚ್.ಐ.ವಿ ಸಮುದಾಯ ಸಂಘಟನೆಗಳು ಸಕ್ರಿಯವಾಗಿದ್ದು, ಈ ಕಾರ್ಯಕ್ರಮಗಳ ಯಶಸ್ವಿಗಾಗಿ ಕಾರ್ಯ ನಿರ್ವಹಿಸುತ್ತಿವೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‍ಗಳನ್ನು ವಿದ್ಯಾರ್ಥಿಗಳ ನಾಯಕತ್ವದಲ್ಲೇ ನಡೆಸಲಾಗುತ್ತಿದೆ. ಅಲ್ಲದೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್.ಐ.ವಿ/ಎಡ್ಸ್ ಕುರಿತು ರಸಪ್ರಶ್ನೆ, ಮ್ಯಾರಥಾನ್, ಡ್ರಾಮಾ ಸ್ಪರ್ಧೆಗಳು, ಚಿತ್ರಕಲೆಯಂತ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಹೆಚ್.ಐ.ವಿ. ಸೋಂಕಿನ ತಡೆ, ಹೆಚ್.ಐ.ವಿ ಪರೀಕ್ಷೆ, ಹೆಚ್.ಐ.ವಿ ಸೋಂಕಿತರಿಗಾಗಿ ಇರುವಂತಹ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸಲಾಗುವುದು ಎಂದರು. ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳು ಸಂಪೂರ್ಣ ಉಚಿತವಾಗಿದ್ದು, ಅಪಾಯದ ಸೂಚನೆ ಇರುವವರು ತಪ್ಪದೇ ಐ.ಸಿ.ಟಿ.ಸಿ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದರು.
ಹೆಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ ಹರಡದಂತೆ ಕ್ರಮಕೈಗೊಳ್ಳುತ್ತಿದ್ದು, ಗರ್ಭಧರಿಸಿದ ಮೊದಲ ತ್ರೈಮಾಸಿಕದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಗರ್ಭಾವಸ್ಥೆಯಲ್ಲಿ ಚಿಕಿತ್ಸೆಗೆ ಅನುಸರಣೆ ಇರುವುದರಿಂದ ಹರಡದಂತೆ ತಡೆಯಬಹುದಾಗಿದೆ. ಸುರಕ್ಷಿತ ಲೈಂಗಿಕತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಯು ನಮ್ಮ ನ್ಯಾಕೋ, ಕೆಸಾಪ್ಸ್ ಹಾಗೂ ಆರೋಗ್ಯ ಇಲಾಖೆಯ ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸಿ, ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಹೆಚ್.ಐ.ವಿ ಸೋಂಕಿನ ತಡೆ ಪ್ರಯತ್ನದಲ್ಲಿ ಕೈ ಜೋಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು ಹಾಗೂ ಐ.ಇ.ಸಿ. ಪೋಸ್ಟರ್ ಬಿಡುಗಡೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ.ಶ್ರೀನಿವಾಸ ಜಿ.ಎಸ್. ಇವರು ಮಾತನಾಡಿ, ಆರೋಗ್ಯಯುತ ಬದುಕಿಗೆ ಎಲ್ಲಾ ಆರೋಗ್ಯದ ಬಗ್ಗೆ ಅರಿವಿರಬೇಕು. ಮಾರಕ ರೋಗ ಏಡ್ಸ್ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಕಾರ್ಯಕರ್ತರು ರಾಯಭಾರಿಗಳಾಬೇಕೆಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ ಸೊಸೈಟಿಯ ಯೋಜನಾ ನಿರ್ದೇಶಕರಾದ ನಾಗರಾಜ ಎನ್.ಎಂ., ಅಪರ ಯೋಜನಾ ನಿರ್ದೇಶಕರಾದ ಶ್ರೀಮತಿ ಡಾ.ಉಮಾ ಬುಗ್ಗಿ, ಆರೋಗ್ಯ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.