ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ಯಲ್ಲಿ 78 ನೇ ಸ್ವಾತಂತ್ರ್ಯ ದಿನೋತ್ಸವವನ್ನು ವಿಕಸಿತ ಭಾರತದ ಆಶಯದ ವಾಕ್ಯದೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದುದಕ್ಕೂ 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಪ್ರಜ್ವಲಿಸುತ್ತಿತ್ತು. ಜೈನ್ ವಿಶ್ವವಿದ್ಯಾನಿಲಯದ ಜಯನಗರದ 9 ನೇ ಬ್ಲಾಕ್ ನಲ್ಲಿ ಇರುವ ಜೆ ಜಿ ಐ ನಾಲೆಡ್ಜ್ ಕ್ಯಾಂಪ ಸ್‌ನಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗು ಗೋವಾ ರಾಜ್ಯದ ಎನ್‌ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕರಾದ ವಿಎಸ್‌ಎಂ,ಏರ್ ಕಮಾಂಡರ್ ಎಸ್ ಬಿ ಅರುಣ್‌ಕುಮಾರ್ ಮತ್ತು ಖ್ಯಾತ ಪರಿಸರವಾದಿ ಹೋರಾಟಗಾರು ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ ಎ ಚೌಡಪ್ಪ, ಜೈನ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ.ಚೆನ್ ರಾಜ್ ರಾಯಚೆಂದ್, ವಿಶ್ವವಿದ್ಯಾನಿಲಯದ ಪ್ರೊ ವೈಸ್ ಚಾನ್ಸಲರ್ ಡಾ.ದಿನೇಶ್ ನೀಲಕಂಠ ಮತ್ತು ರಿಜಿಸ್ಟ್ರಾರ್ ಡಾ.ಜಿತೇಂದ್ರ ಮಿಶ್ರಾ , ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಯು ಬಿ ಶಂಕರ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾದ ಏರ್ ಕಮಾಂಡರ್ ಅರುಣ್‌ಕುಮಾರ್ ಧ್ವಜಾರೋಹಣವನ್ನು ನೆರವೇರಿಸಿದರು. ಅತಿಥಿಗಳಾದ ಶ್ರೀ ಡಿ ಎ ಚೌಡಪ್ಪ ಮಾತನಾಡುತ್ತಾ“ರಾಷ್ಟ್ರೀಯ ಅಭಿವೃದ್ಧಿಗೆ ಈ ಸಂಸ್ಥೆಯ ನಾಯಕತ್ವದ ಬಲವಾದ ಬದ್ಧತೆಯೂ ಇಲ್ಲಿ ಪ್ರತಿಬಿಂಬಿಸುತ್ತದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಕ್ರೀಡಾ ಪಟುಗಳನ್ನು ಕೊಟ್ಟ ಜೈನ್ ಸಂಸ್ಥೆಯ ಕಾರ್ಯ ಅನನ್ಯ ಎನ್ನುತ್ತ, ರಾಜ್ಯದ ಮತ್ತು ನೆರೆ ರಾಜ್ಯದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ “ಹೆಲ್ಪಿಂಗ್ ಹ್ಯಾಂಡ್ಸ್" ಧೇಯ ವಾಕ್ಯದೊಂದಿಗೆ ಸಂಸ್ಥೆಯ ನೇತೃತ್ವದ ಅಡಿಯಲ್ಲಿ ಬಗೆ ಬಗೆಯ ದವಸ ಧಾನ್ಯಗಳನ್ನು ಕಾಳು ಬೇಳೆಯನ್ನು ಹಾಗು ವಿವಿಧ ಬಗೆಯ ಆಹಾರವನ್ನು ಸಂಗ್ರಹಿಸಿ ನಿರಂತರವಾಗಿ ಕೊಡಮಾಡುತ್ತಿರುವ ಕಾರ್ಯ ಅಂತಃಕರಣದಿಂದ ಕೂಡಿದ್ದು.ಇದು ಶ್ಲಾಘನೀಯ ಎನ್ನುತ್ತ ಪರಿಸರ ಸಂರಕ್ಷಣೆ ಕುರಿತು ನೀರು ಸಂರಕ್ಷಣೆ ಕುರಿತು ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ತಮ್ಮ ಚಿಂತನೆಯ ಒಳನೋಟಗಳನ್ನು ಹಂಚಿಕೊಂಡರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಏರ್ ಕಮಾಂಡರ್ ಎಸ್ ಬಿ
ಅರುಣಕುಮಾರ್ ಮಾತನಾಡುತ್ತಾ ದೇಶದ ರಕ್ಷಣಾ ವ್ಯವಸ್ಥೆಗೆ ಜೈನ್ ಸಂಸ್ಥೆಯ ಕೊಡುಗೆ ಅನನ್ಯವಾದದ್ದು.ಇಲ್ಲಿನ ಎನ್ ಎನ್ ಸಿ ವಿದ್ಯಾರ್ಥಿಗಳ ಕೊಡುಗೆ ನಿರಂತವಾಗಿ ಸಾಗುತ್ತಿರುವುದು ಹೆಮ್ಮೆಯೆನಿಸುತ್ತದೆ. ದೇಶದ ಹಲವಾರು ಕ್ಷೇತ್ರಗಳಲ್ಲಿ ಜೈನ್ ಸಂಸ್ಥೆಯ ಪ್ರತಿಭೆಗಳು ದೇಶದ ಒಟ್ಟು ಪ್ರಗತಿಗೆ ತೊಡಗಿಸಿಕೊಂಡದ್ದು ಮಹತ್ವದ ಸಂಗತಿ ಎಂದರು.
ವೈವಿಧ್ಯಮಯ ಭಾರತದ ಪರಂಪರೆ ಪ್ರದರ್ಶಿಸುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಮಹತ್ವದ ಕಾರ್ಯಕ್ರಮಗಳನ್ನು ಸ್ಕೂಲ್ ಆಫ್ ಅಲೈಡ್ ಹೆಲ್ತ್‌ಕೇರ್ ಮತ್ತು ಸೈನ್ಸಸ್, ಸ್ಕೂಲ್ ಆಫ್ ಕಾಮರ್ಸ್, ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಸ್ಕೂಲ್ ಆಫ್ ಸೈನ್ಸ್, ಇಂಟೀರಿಯರ್ ಡಿಸೈನ್ ವಿಭಾಗ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಹಮ್ಮಿಕೊಂಡ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.
ವಿಶ್ವವಿಧ್ಯಾಲಯದ ಆವರಣದಲ್ಲಿ ಎನ್ ಎಸ್ ಎಸ್ ಮತ್ತು ಅನಿಮೇಷನ್ ವಿಭಾಗದ ವಿದ್ಯಾರ್ಥಿಗಳಿಂದ ದೆಹಲಿ ಕೆಂಪು ಕೋಟೆಯ ಪ್ರತಿಕೃತಿ ನಿರ್ಮಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.ಎನ್‌ಸಿಸಿ ಕೆಡೆಟ್‌ಗಳ ಕ್ರಿಯಾತ್ಮಕ ನೃತ್ಯ ಹಾಗು ನಾಟಕ ಪ್ರದರ್ಶನದಿಂದ ದೇಶಭಕ್ತಿಯ ಉತ್ಸಾಹ ಇಮ್ಮಡಿಗೊಂಡಿತ್ತು.
ವಿಕಸಿತ ಭಾರತದ ಆಶಯಕ್ಕೆ ಹೊಂದಿಕೆಯಾಗುವ ಹಾಗು ಸ್ವಾತಂತ್ರ್ಯದ ನಂತರದ ಭಾರತದ ಪಯಣವನ್ನು ಪ್ರತಿಬಿಂಬಿಸುವ ಆಡಿಯೊವಿಶುವಲ್ ಪ್ರದರ್ಶನವು ಕಾರ್ಯಕ್ರಮದ ಕಳೆ ಹೆಚ್ಚಿಸಿತ್ತು.ಇದು ವಿವಿಧ ಕ್ಷೇತ್ರಗಳಲ್ಲಿ ಭಾರತದ ದಾಪುಗಾಲುಗಳನ್ನು ಮತ್ತು ಉಜ್ವಲ ಅಭಿವೃದ್ಧಿ ಹೊಂದಿದ ಭವಿಷ್ಯದ ದೃಷ್ಟಿಯನ್ನು ಎತ್ತಿ ತೋರಿಸುವಂತಿತ್ತು.