ವಾರ್ತಾಜಾಲ,ಶಿಡ್ಲಘಟ್ಟ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ನೀಡುವ ಶೈಕ್ಷಣಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಗುಣಾತ್ಮಕ ಶಿಕ್ಷಣವನ್ನು ಪಡೆದುಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್, ಇವೈಸಿಎಸ್ಆರ್ ಪ್ರಾಜೆಕ್ಟ್ ಹಾಗೂ ಚೈಲ್ಡ್ ರೈಟ್ಸ್ ಸಂಸ್ಥೆ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 105 ಸರ್ಕಾರಿ ಶಾಲೆಗಳಿಗೆ 194 ವಿಜ್ಞಾನ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಕಾಳಜಿ ವಹಿಸಿ ಕಲಿಕೆಗೆ ಪೂರಕವಾದ ಉಪಕರಣಗಳನ್ನು ನೀಡುವುದರ ಮೂಲಕ ತನ್ನ ಶೈಕ್ಷಣಿಕ ಬದ್ಧತೆ ಪ್ರದರ್ಶಿಸಿದೆ. ವಿಜ್ಞಾನ ವಿಷಯ ಸುಲಭವಾಗಿ ಅರಿಯಲು ಪ್ರಯೋಗಗಳು ಸಹಕಾರಿಯಾಗಲಿವೆ.
ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಪಕರಣಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ಸಂಸ್ಥೆಯ ಮಂಜುನಾಥ್ ಮಾತನಾಡಿ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಕೆಲಸ ಮಾಡಿದರೆ ಅವರಿಗೆ ಲ್ಯಾಪ್‌ಟಾಪ್, ಪ್ರೊಜೆಕಟ್ಟರ್ ಈ ಕ್ಷೇತ್ರಕ್ಕೆ ಕೊಡುಗೆ ಸಿಗಲಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಸ್ಮಾರ್ಟ್ ತರಗತಿಗಳು ನಡೆಸುವ ಶಾಲೆಗಳಿಗೆ ಲ್ಯಾಪ್‌ಟಾಪ್ ಪ್ರೊಜೆಕ್ಟರ್ ಅದಕ್ಕೆ ಬೇಕಾಗುವ ಪರಿಕರಗಳನ್ನು ಅವಶ್ಯಕತೆ ಇರುವ ಶಾಲೆಗಳಿಗೆ ವಿತರಿಸುತ್ತೇವೆ.
ವಿದ್ಯಾರ್ಥಿ ಜೀವನ ಮಾನವನ ಅತ್ಯಂತ ಮಹತ್ವದ ಘಟ್ಟ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿವಹಿಸಿ ಅಭ್ಯಾಸ ಮಾಡಬೇಕು ಹಾಗೂ ಈಗಿನ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಆವಿಷ್ಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ತ್ಯಾಗರಾಜ್,ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಸಂಸ್ಥೆಯ ದೀಕ್ಷಾ,ಮುಖ್ಯೋಪಾಧ್ಯಾಯಿನಿ ಕಮಲ, ಶಿಕ್ಷಕರಾದ ಚಂದ್ರಕಲಾ,ಮಂಜುನಾಥ್, ಶಿಕ್ಷಣ ಸಂಯೋಜಕಿ ಪರಿಮಳ, ಚೈಲ್ಡ್ ರೈಟ್ಸ್ ಸಂಸ್ಥೆಯ ಜಯರಾಮ್,ಸತೀಶ್ ಮತ್ತಿತರರು ಇದ್ದರು.