ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗೂ ತನ್ನ ಗುರಿಯೆಡೆಗೆ ಸ್ಪಷ್ಟತೆ ಇರಬೇಕು – ಡಾ. ಶಾಲಿನಿ ರಜನೀಶ್

varthajala
0

 ಬೆಂಗಳೂರು(ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗೂ ತನ್ನ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ಅಲ್ಲದೆ, ವ್ಯಕ್ತಿತ್ವ ವಿಕಸನ ವೃದ್ಧಿಸಲು ಸಾಮಾನ್ಯ ಜ್ಞಾನ ತುಂಬಾ ಇರಬೇಕು ಎಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್ ಅಭಿಪ್ರಾಯ ಪಟ್ಟರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆದ ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ “ಮುಕ್ತಭಂಡಾರ” ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ‘‘ಇಂದು ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಎಲ್ಲಾ ರಂಗಗಳಲ್ಲೂ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನಹರಿಸಬೇಕು. ನಿಮ್ಮ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ತರಬೇತಿಗಳು ವ್ಯಕ್ತಿತ್ವ ವಿಕಸನವನ್ನು ವೃದ್ಧಿಗೊಳಿಸುತ್ತವೆ. ಅವಕಾಶಗಳನ್ನು ಬೆನ್ನತ್ತಿ ಹೋಗಬೇಕು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಮನುಷ್ಯ ಮೌಲ್ಯಗಳನ್ನು ಮರೆಯಬಾರದು. ನಾನು ಐಎಎಸ್ ಪರೀಕ್ಷೆ ಬರೆಯುವ ಸಮಯಕ್ಕೂ ಇಂದಿಗೂ ಬಹಳಷ್ಟು ವ್ಯತ್ಯಾಸ ಇದೆ. ಇಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಅಧ್ಯಯನ ನಡೆಸಲು ಸಾಕಷ್ಟು ಪಠ್ಯಪುಸ್ತಕ ಹಾಗೂ ಮಾರ್ಗದರ್ಶನಗಳು ಸಿಗುತ್ತಿದೆ. ಆದರೆ, ಕಾಲೇಜು ಹಾಗೂ ವಿವಿಯಲ್ಲಿ ಕಲಿತದ್ದು ಐಎಎಸ್‍ನಲ್ಲಿ ಬಳಕೆ ಆಗುವುದಿಲ್ಲ ಎಂಬುದು ನೆನಪಿರಲಿ. ನಿಮ್ಮ ಜ್ಞಾನವನ್ನು ಒರೆ ಹಚ್ಚಬೇಕು ಎಂದು ಕಿವಿಮಾತು ಹೇಳಿದರು.

ಇಂದು ಕಲಿಕಾ ಬೋಧನಾದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕಗಳು ಸಿಗುತ್ತಿವೆ. ಅಲ್ಲಿ ಹೆಚ್ಚು ಸಮಯ ಕಳೆಯಿರಿ. ಯಾವುದನ್ನು ಎಷ್ಟು ಓದಬೇಕೆಂಬ ಯೋಜನಾ ಪಟ್ಟಿ ತಯಾರಿಸಿಕೊಳ್ಳಿರಿ. ಐಎಎಸ್ ಮತ್ತು ಕೆಎಎಸ್ ನಲ್ಲಿ ಕೆಲವರಿಗೆ ಯಶಸ್ಸು ಸಿಗುತ್ತದೆ ಮತ್ತೆ ಕೆಲವರಿಗೆ ಸಿಗುವುದಿಲ್ಲ. ಆಗ ಪ್ಲ್ಯಾನ್ ಬಿ ಕೂಡ ಇರಬೇಕು ಎಂದು ತಿಳಿಸಿದರು.

ಕರಾಮುವಿ ಕುಲಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೊಡ್ಡ ಗುರಿ ಹೊಂದಿರಬೇಕು. ತಾವು ಯಾವುದನ್ನು ಸಾಧಿಸಬೇಕು ಎಂಬುದನ್ನು ಮನನ ಮಾಡಿಕೊಂಡು ಅದರಂತೆ ತಯಾರಿ ನಡೆಸಬೇಕು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಐಎಫ್‍ಎಸ್ ಅಧಿಕಾರಿ ಮನೋಜ್ ರಾಜನ್, ಕುಲಸಚಿವ ಪೆÇ್ರ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪೆÇ್ರ.ಎನ್. ಲಕ್ಷ್ಮಿ, ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್, ಐಪಿಎಸ್ ಅಧಿಕಾರಿ ಗೀತಾ ಪ್ರಸನ್ನ, ಕಾರ್ಮಿಕ ಇಲಾಖೆ ಉಪ ಆಯುಕ್ತೆ ಎ.ಜೆ. ಶ್ರೀವಳ್ಳಿ, ಅಧ್ಯಯನ ಡೀನ್ ಡಾ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಕೆ.ಜಿ. ಕೊಪ್ಪಲ್ ಗಣೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)