ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ತ್ರೀಡಿ, ಆನಿಮೇಷನ್ ಹಾಗೂ ಗ್ರಾಫಿಕ್ಸ್ ಪರಿಣಿತರಿಗೆ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಖ್ಯಾತ ಸಿನೆಮಾಟೋಗ್ರಾಫರ್ ಮನೋಜ್ ಪರಮಹಂಸ ತಿಳಿಸಿದರು. ಇಂದು ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಬಿಎಸ್ಸಿ ಆನಿಮೇಷನ್ ವಿಭಾಗ ಹಾಗೂ ಕೋರ್ಸ್ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ಕ್ರಿಯಾತ್ಮಕ ಕಾರ್ಯಚಟುವಟಿಕೆಗಳ ಸಾಧ್ಯತೆಗಳನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕಳೆದೊಂದು ದಶಕದ ಡಿಜಿಟಲ್ ವಾತಾವರಣದಲ್ಲಿ ಅನಿಮೇಷನ್, ತ್ರೀಡಿ, ಗ್ರಾಫಿಕ್ಸ್ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ನಾವು ಕಾಣಬಹುದಾಗಿದೆ. ಮೊದಲು ಕೇವಲ ಸಣ್ಣ ಪ್ರಮಾಣದಲ್ಲಿ ನಮ್ಮ ಜೀವನದ ದಿನನಿತ್ಯದ ಚಟುವಟಿಕೆಗಳಲ್ಲಿ ಇವುಗಳನ್ನು ಕಾಣಬಹುದಾಗಿತ್ತು. ಆದರೆ, ಇಂದು ಬಹುತೇಕ ಕಡೆಗಳಲ್ಲಿ ಇದನ್ನ ವ್ಯಾಪಕವಾಗಿ ಬಳಸುವಂತಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ, ಗೇಮಿಂಗ್, ಸೋಷಿಯಲ್ ಮೀಡಿಯಾ ಸೇರಿದಂತೆ ಹಲವಾರು ಕಡೆಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ. ಇನ್ ಕ್ಯಾಮೆರಾ ವಿಷ್ಯೂಯಲ್ ಎಫೆಕ್ಟ್ ನಂತಹ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದ್ದು, ಎಐ ತಂತ್ರಜ್ಞಾನದ ಅಳವಡಿಕೆಯಿಂದ ಇನ್ನಷ್ಟು ಹೊಸ ಸಾಧ್ಯತೆಗಳು ಸೃಷ್ಟಿಯಾಗಲಿವೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಗೆ ಕ್ಷೇತ್ರದ ಸಾಮಾನ್ಯ ಜ್ಞಾನದ ಜೊತೆಗೆ ಹೆಚ್ಚಿನ ಕೌಶಲ್ಯದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಕರ್ನಾಟಕದ ಅಧ್ಯಕ್ಷರಾದ ಡಾ. ಹೆಚ್ ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಯಾದಲಂ ಜಿ ಮಧುಸೂಧನ್, ಕಾರ್ಯದರ್ಶಿಗಳಾದ ವಿ ವೆಂಕಟಶಿವಾರೆಡ್ಡಿ, ಬಿ.ಎಸ್ ಅರುಣ್ ಕುಮಾರ್, ಖಚಾಂಚಿಗಳಾದ ತಲ್ಲಂ ಆರ್ ದ್ವಾರಕಾನಾಥ್, ಜಂಟಿ ಕಾರ್ಯದರ್ಶಿಗಳಾದ ಸುಧಾಕರ್ ಎಸ್ತೂರಿ ಹಾಗೂ ಬಸವನಗುಡಿ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾದ ರಾಮ್ ಮೋಹನ್ ಕೆಎನ್, ಪ್ರಾಂಶುಪಾಲ ರಾದ ವೈ ಸಿ ಕಮಲ, ಪ್ರೋ. ಅಲಕಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.