ಬೆಂಗಳೂರು (ಕರ್ನಾಟಕ ವಾರ್ತೆ): ಭಾರತ ದೇಶದಲ್ಲಿಯೇ ಪ್ರಪ್ರಥಮವಾಗಿ ಮಳೆ ನೀರು ಸುಗ್ಗಿ ಕೇಂದ್ರವನ್ನು ನಿರ್ಮಿಸಿದ ಹೆಮ್ಮೆ ಬೆಂಗಳೂರು ಜಲಮಂಡಳಿಯದ್ದು ಎಂದು ಜಲಮಂಡಳಿಯ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಬಿ. ಎಂ. ಮಂಜುನಾಥ್ ರವರು ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕ್ಷೇಮಾಭಿವೃದ್ಧಿ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಆಚರಣೆ ಪ್ರಯುಕ್ತ ಬೆಂಗಳೂರು ಜಲ ಮಂಡಳಿಯ ನೌಕರರ ಮಕ್ಕಳಿಗೆ ಸರ್ ಎಂ ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಳೆ ನೀರು ಸುಗ್ಗಿ ಕೇಂದ್ರ ನಿರ್ಮಾಣದ ಅನುಭವ, ಮಹತ್ವದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ಮಳೆ ನೀರಿನ ಸಂರಕ್ಷಣೆಯ ಬಗ್ಗೆ ಮತ್ತು ಮಳೆ ನೀರು ಕೊಯ್ಲು ಮಹತ್ವದ ಕುರಿತ ಕಿರುಚಿತ್ರವನ್ನು, ಮಾದರಿಗಳನ್ನು ಪ್ರದರ್ಶಿಸಿ, ಮಾಹಿತಿ ನೀಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ನೌಕರರ ಸಂಘದ ಅಧ್ಯಕ್ಷರಾದ ಸದಾಶಿವ ಕಾಂಬಳೆ, ಕೆ.ಲಕ್ಷ್ಮಿಕಾಂತ್, ಅಪರ ಮುಖ್ಯ ಅಭಿಯಂತರರು ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಅಧಿಕಾರಿಗಳು, ನೌಕರರು ಮತ್ತು ಪಾಲಕರು, ಸುಮಾರು 40ಕ್ಕೂ ಹೆಚ್ಚು ನೌಕರರ ಮಕ್ಕಳು ಪಾಲ್ಗೊಂಡಿದ್ದರು.