ಇಂದಿನಿಂದ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮ : ಖಾಸಗಿ ಸಾರಿಗೆ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಮಣಿದ ಸರ್ಕಾರದಿಂದ ಆದೇಶ ಜಾರಿ

varthajala
0
ಬೆಂಗಳೂರು; ಬೈಕ್ ಟ್ಯಾಕ್ಸಿ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವಂತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ 32 ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಡೆಸಿದ ತೀವ್ರ ಪ್ರತಿಭಟನೆಗೆ ಮಣಿದಿರುವ ಸಾರಿಗೆ ಇಲಾಖೆ ಇಂದಿನಿಂದ [ಶುಕ್ರವಾರದಿಂದ] ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. 




ಈ ಕುರಿತು ಅಧಿಸೂಚನೆ ಜಾರಿಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯ 11 ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಆದೇಶ ಹೊರಡಿಸಿದೆ. 
ಶಾಂತಿನಗರದ ಸಾರಿಗೆ ಇಲಾಖೆ ಆಯುಕ್ತರ ಕಚೇರಿ ಆವರಣದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ 32 ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ತಕ್ಷಣವೇ ಸಭೆ ಕರೆದ ಸಾರಿಗೆ ಆಯುಕ್ತ ಯೋಗೇಶ್, ಪ್ರತಿಭಟನಾಕಾರರಿಗೆ ಮಣಿದು ಕ್ರಮ ಕೈಗೊಳ್ಳುವ ಕುರಿತಂತೆ ಆದೇಶ ಹೊರಡಿಸಿದರು.
                                       
 
ಕಳೆದ 2021 ರಲ್ಲಿಯೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಸರ್ಕಾರ ವಾಪಸ್ ಪಡೆದಿದೆ. ಆದರೆ ನಗರದಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿಗಳು ಸಂಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಕಾನೂನು ಬಾಹಿರ ಸಂಚಾರಿ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಮಾಡಿದ ಮನವಿಗೆ ಸ್ಪಂದಿಸಿ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ತಕ್ಷಣವೇ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಗೃಹ ರಕ್ಷಕ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. 
                                             

ಪ್ರತಿಭಟನೆಯಲ್ಲಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರುಗಳಾದ ಎಸ್. ನಟರಾಜ್ ಶರ್ಮಾ, ನಾರಾಯಣ ಸ್ವಾಮಿ, ಗಂಡಸಿ ಸದಾನಂದ ಸ್ವಾಮಿ, ರಘು ನಾರಾಯಣ ಗೌಡ, ಸ್ನೇಹಜೀವಿ ಸಂತೋಷ್, ಜಯಣ್ಣ, ರಾಜು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 

Post a Comment

0Comments

Post a Comment (0)