ಹೊರದೇಶಗಳಿಗೆ ತೆರಳುವಾಗ ಆರ್.ಎನ್.ಐ. ಗೆ ಮಾಹಿತಿ ನೀಡಿ : ಡಾ.ಆರತಿ ಕೃಷ್ಣ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದಿಂದ ಹೊರದೇಶಗಳಲ್ಲಿ ಕೆಲಸವನ್ನರಸಿ ಹೊರಡಲು ನಿರ್ಧರಿಸುವ  ಮುನ್ನ ಅನಿವಾಸಿ ಭಾರತೀಯ ಸಮಿತಿಗೆ ಮಾಹಿತಿ ನೀಡುವಂತೆ  ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ತಿಳಿಸಿದರು. ಇಂದು ಅನಿವಾಸಿ ಭಾರತೀಯ ಸಮಿತಿಯ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಅನಧಿಕೃತ ಏಜೆನ್ಸಿಗಳ ಮೂಲಕ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಸೇರಿ ವಂಚನೆಗೊಳಗಾದ ವ್ಯಕ್ತಿಯನ್ನು ರಕ್ಷಿಸಿರುವ ಬಗ್ಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಏಜೆಂಟ್‍ಗಳ ನೈಜತೆಯ ಬಗ್ಗೆ ಪರಿಶೀಲನೆ ಮಾಡದೆ ಅವರ ಮಾತಿಗೆ ಮರುಳಾಗಿ ಮೋಸ ಹೋಗದಿರಲು ಹಾಗೂ ಅಧಿಕೃತ ಎಜೆಂಟ್‍ಗಳ ಅಥವಾ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಸಹಾಯವನ್ನು ಪಡೆಯುವಂತೆ ಸಾರ್ವಜನಿಕರಿಗೆ   ತಿಳಿಸಿದ್ದಾರೆ.

ರಾಮನಗರದ ನಿವಾಸಿಯಾಗಿರುವ ಮೊಹಮ್ಮದ್ ಅಶ್ಪಾಕ್ ಎಂಬ ವ್ಯಕ್ತಿಯನ್ನು ಸುಮಾರು ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮಹಮ್ಮದ್ ಪೀರ್ ಎಂಬ ಏಜೆಂಟ್ ಸೌದಿ ಅರೇಬಿಯಾದಲ್ಲಿರುವ ಅಮೇಜಾನ್ ಕಂಪೆನಿಯಲ್ಲಿ ಸಹಾಯಕ ಹುದ್ದೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು ರೂ. 1 ಲಕ್ಷಗಳನ್ನು ಪಡೆದು ಕಳುಹಿಸಿರುತ್ತಾರೆ.

 
     ಮೊಹಮ್ಮದ್ ಅಶ್ಪಾಕ್ ಅವರು ಸೌದಿ ಅರೇಬಿಯಾಕ್ಕೆ ತೆರಳಿದ ನಂತರ ಪ್ರಾರಂಭದ 2 ತಿಂಗಳು ಕೆಲಸ ಮತ್ತು ಸಂಬಳವನ್ನು ನೀಡಿರುವುದಿಲ್ಲ. ನಂತರ ಸುಮಾರು 7 ತಿಂಗಳು ಬೇರೆ ಕಂಪನಿಯಲ್ಲಿ ಕೆಲಸವನ್ನು ನೀಡಿದ್ದಾರೆ.   ಸದರಿ ಅವಧಿಯಲ್ಲಿ ಗೃಹ ಬಂಧನದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ. ತದ ನಂತರ ಅಲ್ಲಿಂದ ಬಲವಂತವಾಗಿ ಹೊರಬಂದು ಸುಮಾರು 3 ತಿಂಗಳು ಕೆಲಸವಿಲ್ಲದೆ ಕಾಯ್ದಿರುತ್ತಾರೆ. ಈ ಬಹುತೇಕ ಸಂದರ್ಭಗಳಲ್ಲಿ ಒಪ್ಪಂದದಂತೆ ಸಂಬಳವನ್ನೂ ನೀಡದೆ ಹಾಗೂ ಆಹಾರವನ್ನು ನೀಡದೆ ಸತಾಯಿಸಿರುತ್ತಾರೆ.

     ಸಂಬಳವೂ ಇಲ್ಲದೆ, ಭಾರತಕ್ಕೆ ವಾಪಸ್ಸು ಬರಲು ಹಣವೂ ಇಲ್ಲದೆ ಹತ್ತಿರದ ಮಸೀದಿಯಲ್ಲಿ ಸುಮಾರು ಎರಡು ತಿಂಗಳು ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಕೆ.ಎನ್.ಆರ್.ಐ ಜೆದ್ದಾ ಕನ್ನಡ ಸಂಘದ ಸದಸ್ಯರು ಇವರನ್ನು ಕಂಡು ಸದರಿಯವರು ಮೋಸ ಹೋದ ವಿಷಯವನ್ನು  ತಿಳಿಸಿದ್ದಾರೆ.  ನಂತರ ಮೊಹಮ್ಮದ್ ಅಶ್ಪಾಕ್ ತಾಯಿ ಹಾಗೂ ಕುಟುಂಬದವರು ಅನಿವಾಸಿ ಭಾರತೀಯ ಸಮಿತಿ ಕಛೇರಿಗೆ ಭೇಟಿ ನೀಡಿ, ತಮ್ಮ ಮಗನನ್ನು ಭಾರತಕ್ಕೆ ಕರೆಸುವಂತೆ ಕೋರಿಕೊಂಡಿರುತ್ತಾರೆ.
 
     ಸದರಿಯವರ ಮನವಿ ಮೇರೆಗೆ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮುಖಾಂತರ ತಿಳಿಸಿದ ತಕ್ಷಣ ಸ್ಪಂದಿಸಿ, ಅನಿವಾಸಿ ಭಾರತೀಯ ಸಮಿತಿಯು ಜೆದ್ದಾ ಕೌನ್ಸಿಲಿಂಗ್ ಜನರಲ್‍ರನ್ನು ಸಂಪರ್ಕಿಸಿ ತ್ವರಿತವಾಗಿ ಎಕ್ಸಿಟ್ ಪಾಸ್ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.  ಕೆ.ಎನ್.ಆರ್.ಐ ಜೆದ್ದಾ ಕನ್ನಡ ಸಂಘವು ವಿಮಾನ ಟಿಕೆಟ್ ಮತ್ತು ಭಾರತಕ್ಕೆ ವಾಪಸ್ಸಾಗುವವರೆಗೂ ವೆಚ್ಚಗಳನ್ನು ಭರಿಸಿ ನೆರವಾಗಿರುತ್ತಾರೆ ಎಂದರು.

    ಪತ್ರಿಕಾ ಗೋಷ್ಠಿಯಲ್ಲಿ ವಂಚನೆಗೊಳಗಾದ   ಮೊಹಮ್ಮದ್ ಅಶ್ಪಾಕ್ ಮತ್ತು ಅವರ ತಾಯಿ ಶ್ರೀಮತಿ ನೂರ್‍ಬಾನ್ ಮಾತನಾಡಿ, ನಮ್ಮ ಸಮಸ್ಯೆಗೆ ಸ್ಪಂದಿಸಿ, ತ್ವರಿತ ಗತಿಯಲ್ಲಿ ಭಾರತಕ್ಕೆ ಬರಲು ಸಹಾಯ ಮಾಡಿದ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Post a Comment

0Comments

Post a Comment (0)