ಬೆಂಗಳೂರು (ಕರ್ನಾಟಕ ವಾರ್ತೆ): ಹಾಲು ಉತ್ಪಾದಕರ ಸಂಘಗಳ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸದರು. ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ನಿರಾಣಿ ಹಣಮಂತ್ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಉತ್ತರಿಸಿದ ಸಚಿವರು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿ ಮಾಹೆ 15 ರೂ ಗಳ ಪ್ರೋತ್ಸಾಹ ಧನ ಪಾವತಿಗೆ ಸಂಬಂಧಿಸಿದಂತೆ ಕ್ರೋಢೀಕೃತ ಮಾಹಿತಿಯನ್ನು ಪಡೆದು ಒಕ್ಕೂಟಗಳ ಇ ಸೈನ್ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಸರ್ಕಾರದ ವಿವಿಧ ಹಂತಗಳಲ್ಲಿ ಪರಿಶೀಲನೆ ಮಾಡಿ ಡಿ.ಬಿ.ಟಿ ಮುಖಾಂತರ ರೈತರಿಗೆ ಪ್ರೋತ್ಸಾಹ ಧನ ಪಾವತಿಸುವ ಪದ್ದತಿ ಇದ್ದು, ಅನುದಾನದ ಲಭ್ಯತೆಯನುಸಾರ ಮತ್ತು ಸರ್ಕಾರದ ಆರ್ಥಿಕ ಇಲಾಖೆಯ ನಿಯಮಾವಳಿಗಳಂತೆ ಅನುದಾನವನ್ನು ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಅದರಂತೆ ಸರ್ಕಾರದ ಪ್ರೋತ್ಸಾಹ ಧನ ಉತ್ಪಾದಕರಿಗೆ ಡಿ.ಬಿ.ಟಿ ಮುಖಾಂತರ ನೇರವಾಗಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ 3,06,826 ರೈತರಿಗೆ ಜೂನ್ 2024ರ ಅಂತ್ಯದ ವರೆಗೆ ಒಟ್ಟು ಪಾವತಿ ಮಾಡಲು ಬಾಕಿ ಇರುವ ಪ್ರೋತ್ಸಾಹ ಧನದ ಮೊತ್ತ ರೂ 31.93 ಕೋಟಿಗಳು ತಾಂತ್ರಿಕ ಅಡಚಣೆ ಹಾಗೂ ಅನುದಾನದ ಕೊರತೆಯಿಂದ ಬಾಕಿ ಉಳಿದಿದ್ದು, ಪ್ರೋತ್ಸಾಹ ಧನ ಪಾವತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.