ಬೆಂಗಳೂರು ; ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಕಲೆ, ಸಂಸ್ಕೃತಿ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ. ಗರುಡಾಚಾರ್ ಹೇಳಿದ್ದಾರೆ.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಪೂರಕ ವಾತಾವರಣವಿದೆ. ತಾವೂ ಸಹ ಇಲ್ಲಿಯೇ ಅಧ್ಯಯನ ಮಾಡಿದ್ದು, ಡಾ. ಎಚ್. ನರಸಿಂಹಯ್ಯ ಅವರ ವಿಚಾರಧಾರೆಗಳು ತಮ್ಮ ಮೇಲೆ ಅತ್ಯಂತ ಮಹತ್ವದ ಪ್ರಭಾವ ಬೀರಿವೆ. ಡಾ. ಎಚ್.ಎನ್. ಅವರು ವಿಜ್ಞಾನ ವೇದಿಕೆ, ನಾಟಕ ಸ್ಪರ್ಧೆ ಮತ್ತಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಇಲ್ಲಿನ ಅಧ್ಯಾಪಕರು ಅತ್ಯುತ್ತಮ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು. ಕಾಲೇಜಿಗೆ ಕೀರ್ತಿ ತರಬೇಕು ಎಂದು ಡಾ. ಉದಯ್ ಗರುಡಾಚಾರ್ ಕಿವಿ ಮಾತು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ, ಕಾರ್ಯದರ್ಶಿಗಳಾದ ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ, ಪ್ರಾಂಶುಪಾಲರಾದ ಡಾ.ವೈ.ಸಿ. ಕಮಲ, ಕಾಲೇಜು ಅಧ್ಯಾಪಕ ಮಂಡಳಿ ಕಾರ್ಯದರ್ಶಿ ಅಲಕಾನಂದ, ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.