ಕೋಲಾರದ ಗೊಲ್ಲಾಪಿನ್ನಿ ಮನೆತನ ಪ್ರಕಟಪಡಿಸಿರುವ ಪ್ರಾಧ್ಯಾಪಕ- ಲೇಖಕ ಕೆ. ಎಸ್.ರಾಮಮೂರ್ತಿ ರವರ ಮಹಾನ್ ಅವಧೂತ : ಶ್ರೀ ಸದಾಶಿವ ಬ್ರಹ್ಮೇಂದ್ರರು ಕೃತಿಯ ಲೋಕಾರ್ಪಣೆಯನ್ನು ಬೆಂಗಳೂರು ಗಿರಿನಗರದ ಶಾರದಾಂಬ ದೇಗುಲ ಆವರಣದ ಶ್ರೀ ಶಂಕರ ಕೃಪಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರು ದಕ್ಷಿಣ ವಲಯ ಆಕಾಶವಾಣಿ ಮತ್ತು ದೂರದರ್ಶನ ಸಹಾಯಕ ನಿರ್ದೇಶಕ( ಕಾರ್ಯಕ್ರಮ ) ಡಾ. ಎನ್. ರಘು ರವರು ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ ಶಾಂಕರ ಅದ್ವೈತ ಸಿದ್ದಾಂತದ ನಿಜ ತತ್ವವನ್ನು ಇಹ ಜೀವನದಲ್ಲಿ ಅನುಭವ ಪೂರ್ವಕವಾಗಿ ಅನುಸಂಧಾನಿಸಿ ಜಿಜ್ಞಾಸುಗಳಿಗೆ ಮಾದರಿಯಾಗಿ ಬಾಳಿ ಜೀವನವನ್ನು ಸಾರ್ಥಕ ಪಡಿಸಿಕೊಂಡ ಮರೆಯಲಾಗದ ಮಹಾನ್ ಅವಧೂತ ಶ್ರೀ
ಸದಾಶಿವ ಬ್ರಹ್ಮೇಂದ್ರರು, ಸಗುಣೋಪಾಸನೆಯೇ ನಿರ್ಗುಣೋಪಾಸನೆಗೆ ಸೋಪಾನ ಎನ್ನುವ ಕ್ರಮವನ್ನು ಅನುಸರಿಸಿ ಸರಳ ಸಂಸ್ಕೃತದಲ್ಲಿ ಮಾಡಲಾದ ಗೇಯಪೂರ್ಣ ರಚನೆಗಳಿಗೆ ರಾಗ ಸಂಯೋಜನೆ ಮಾಡುವುದು ಸವಾಲಿನ ಕೆಲಸ .
ಮಂತ್ರ ಜಪಕ್ಕೆ ಹತ್ತಿರವಾದ ಅವರ ರಚನೆಗಳನ್ನು ಮನನ ಮಾಡುತ್ತಾ ಆತ್ಮ ತೃಪ್ತಿಯ ಭಾವದ ಅನುಸಂಧಾನ ದೊಡನೆ ಪ್ರಸ್ತುತಪಡಿಸುವ ಪ್ರಯತ್ನವಾಗಬೇಕು, ಇವರ ಕೃತಿಗಳನ್ನು ಇನ್ನು ವೈವಿಧ್ಯಪೂರ್ಣವಾಗಿ ಸಂಯೋಜನೆಯ ಪ್ರಯೋಗಗಳಿಗೆ ಒಳಪಡಿಸಲು ಎಲ್ಲ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಗಣಿಯ ಎಸ್ -ವ್ಯಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಕೆ.ಶ್ರೀಧರ್ ಮಾತನಾಡುತ್ತಾ ಗುರುಪೂರ್ಣಮೆಯ ಸಂದರ್ಭದಲ್ಲಿ ಹಠಯೋಗಿ, ಸಿದ್ಧಿಪುರುಷ, ಅವಧೂತ ಶ್ರೀ ಸದಾಶಿವ ಬ್ರಹ್ಮೇಂದ್ರದ ಕುರಿತು ಕೆ.ಎಸ್ ರಾಮಮೂರ್ತಿ ರವರು ಸಮರ್ಪಣ ಭಾವದಿಂದ ಅರಳುಗನ್ನಡದಲ್ಲಿ ಭಾವಕ ಭಕ್ತ ಜನರಿಗೆ ನೀಡಿ ಗುರು ಕೈಂಕರ್ಯ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಗುರುಪೂರ್ಣಿಮೆಯ ಅಂಗವಾಗಿ ಕೆ.ಎಸ್ ರಾಮಮೂರ್ತಿ ರವರ ಶಿಷ್ಯರಾದ ಗಣಿತ ಪ್ರಾಧ್ಯಾಪಕಿ ಸೌಭಾಗ್ಯ ಕೃಷ್ಣಮೂರ್ತಿ ಮತ್ತು ವಿಜಯಪುರದ ಕೋದಂಡರಾಮ ರವರು ಗುರುವಂದನೆಯನ್ನು ಸಲ್ಲಿಸಿದರು. ಕೃತಿ ಪ್ರಕಟಣೆಗೆ ನೆರವಾದ ಸಾತವಲ್ಲಿ ಶೇಷಗಿರಿ ಬಾಬು, ಸುನಂದ ರಂಗನಾಥಸ್ವಾಮಿ ಮೊದಲಾದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸದಾಶಿವ ಬ್ರಹ್ಮೇಂದ್ರರ ರಚನೆಗಳನ್ನು ವಿದುಷಿ ಸುಮಲತಾ ಮಂಜುನಾಥ್ ,ಸುಜಯ ಭುಜಗಶಯನ ಮತ್ತು ಶಾರದಾ ವಿಶ್ವನಾಥ್ ಪ್ರಸ್ತುತಪಡಿಸಿದರು.
*ಕೃತಿ ಮತ್ತು ಕೃತಿಕಾರರ ಕುರಿತು*
ಶಾಂಕರೋತ್ತರ ದಾರ್ಶನಿಕರಲ್ಲಿ ವಿಶಿಷ್ಟ ರನಿಸಿರುವ ಸದಾಶಿವ ಬ್ರಹ್ಮೇಂದ್ರರ ಜೀವನ ಸಾಧನೆ ಮೋಕ್ಷಗಾಮಿಗಳಿಗೆ ಪ್ರೇರಣೆ ಎನಿಸಿದೆ. ಅದ್ವೈತದ ಸಾರಾಮೃತವಿರುವ ಇವರ ಗೇಯ ಗೀತೆಗಳು ಜನಪ್ರಿಯವಾಗಿದೆ.
ಅವಧೂತರಾದ ಸದಾಶಿವ ಬ್ರಹ್ಮೇಂದ್ರರು ಲೌಕಿಕ ವ್ಯವಹಾರಗಳನ್ನು ಉಪಸಂಹಾರ ಮಾಡಿಕೊಂಡು ಸಿದ್ದಿ ಸಾಧನೆಯ ಪಥದಲ್ಲಿ ಮೌನ ತಪಸ್ವಿಯಾಗಿ ಬಾಳ್ವೆ ನಡೆಸಿದ ಮಹಾನ್ ಚೇತನ.
ಪ್ರಸ್ತುತ ಕೃತಿಯಲ್ಲಿ ಸದಾಶಿವ ಬ್ರಹ್ಮೇಂದ್ರರ ಜೀವನ ಸಾಧಕರಿಗೆ ದಾರಿ ದೀಪಗಳಾದ ಅವರ ಕೃತಿಗಳ ಕಿರು ಪರಿಚಯ ಅವರ ರಚನೆಗಳ ಮೂಲ ಪಾಠ,ಕನ್ನಡ ಅನುವಾದ ಮಾಡಿಕೊಟ್ಟಿರುವ ಲೇಖಕ ಶ್ರೀರಾಮ ಮೂರ್ತಿರವರು ಮೂಲತಃ ಕೋಲಾರದವರು,ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಪದವೀಧರರಾಗಿ, ಕನ್ನಡ ಉಪನ್ಯಾಸಕರು, ಆಕಾಶವಾಣಿ ಕಲಾವಿದರು, ಅನುವಾದಕರು,ಸಂಶೋಧಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಹಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿದೆ. ಪಿಟೀಲು ಟಿ ಚೌಡಯ್ಯ ಪ್ರತಿಷ್ಠಾನದಿಂದ ಮೈಸೂರು ರಾಜವಂಶಸ್ತ ಯದುವೀರ ಕೃಷ್ಣರತ್ತ ಒಡೆಯರ್
ರವರಿಂದ ಸನ್ಮಾನಿತರಾಗಿರುವ ಶ್ರೀಯುತರು ಬರೆದಿರುವ ತಿರುಮಲೆಯ ಹಿನ್ನೆಲೆಯ ಶ್ರೀ ವೆಂಕಟೇಶ ಸುಪ್ರಭಾತ ಕೃತಿ ಜನಪ್ರಿಯವಾಗಿದೆ.
ವಿವರಗಳಿಗೆ 9449750618 ಸಂಪರ್ಕಿಸಬಹುದು