ಮೊಬೈಲ್ ಫೋನ್ ಒಂದು ಉಪಯುಕ್ತ ಸಾಧನ. ಆದರೆ ಒಳಿತು ಕೆಡುಕು ಆಯ್ಕೆ ಮಾಡಿಕೊಳ್ಳೋವುದು ನಮ್ಮ ಜವಾಬ್ದಾರಿ. ಆದ್ದರಿಂದ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮೊಬೈಲ್ ಫೋನ್ ಬಳಸುವದನ್ನು ತಿಳಿದಿರಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ಶುಕ್ರವಾರ ನಗರದ ಬಾಲ್ಡ್‌ವಿನ್ ಬಾಲಕಿಯರ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು. "ಶಾಲಾ ಶಿಕ್ಷಣವು ಹೈಟೆಕ್ ಆಗಿ ಮಾರ್ಪಟ್ಟಿದೆ, ಮತ್ತು ಅನೇಕರು ಮೊಬೈಲ್ ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆ. ನಾನು ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಎಂದು ಹೇಳುವುದಿಲ್ಲ. ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಮೊಬೈಲ್‌ನ ದುಷ್ಪರಿಣಾಮಗಳ ಬಗ್ಗೆ ನಾವು ಪ್ರತಿದಿನ ಓದುತ್ತೇವೆ. ಆದ್ದರಿಂದ ಮೊಬೈಲ್ ಅನ್ನು ಅಗತ್ಯ ಕೆಲಸಕ್ಕೆ ಮಾತ್ರ ಬಳಸಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಈಡೇರಿಸುವುದು ಕರ್ತವ್ಯವಾಗಿದೆ. ನೀವು ಯಾವ ವೃತ್ತಿಯನ್ನು ಆರಿಸಿಕೊಂಡರೂ, ಮೊದಲು ಉತ್ತಮ ಮನುಷ್ಯನಾಗಲು ಶ್ರಮಿಸಿ ಮತ್ತು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಿ ಎಂದರು.
ವೈಯಕ್ತಿಕ ವಿಚಾರವನ್ನು ಹಂಚಿಕೊಂಡ ಅವರು, ''ನನ್ನ ತಂದೆ ನಾನು ಐಟಿಐ ಮಾಡಬೇಕೆಂದು ಬಯಸಿದ್ರು, ಆದರೆ ನನಗೆ ಬರವಣಿಗೆಯ ಉತ್ಸಾಹವಿತ್ತು, ಆದ್ದರಿಂದ ನಾನು ಪತ್ರಿಕೋದ್ಯಮವನ್ನು ಆರಿಸಿದೆ. ಎಪಿಜೆ ಅಬ್ದುಲ್ ಕಲಾಂ ಅವರಂತೆ ನಾನು ಮನೆ ಮನೆಗಳಿಗೆ ಪತ್ರಿಕೆಗಳನ್ನು ಹಂಚಿದ್ದೇನೆ. ಮಾಧ್ಯಮ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಯಶಸ್ಸಿನ ಪಯಣವು ಹಂತಹಂತವಾಗಿ ಗುರಿ ಮುಟ್ಟಿರುವುದು. ಈ ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವುದು ನನ್ನ ಆಶಯ ಎಂದರು.
ಪ್ರಾಂಶುಪಾಲೆ ಆಶಾ ಮಾರ್ಗರೇಟ್ ಮಾತನಾಡಿ, "ಶತಮಾನಗಳಿಂದ ಬಾಲ್ಡ್ ವಿನ್ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಾಲ್ಡ್ ವಿನ್ ಸಂಸ್ಥೆಗಳ
ಅಧ್ಯಕ್ಷರಾದ ಬಿಷಪ್ ಎನ್. ಎಲ್. ಕರ್ಕರೆಯವರ ನೇತೃತ್ವದಲ್ಲಿ ಮಕ್ಮಳಿಗೆ ಸಮಗ್ರ ಜ್ಞಾನ ನೀಡುವುದನ್ನ ತನ್ನ ಧ್ಯೇಯವಾಗಿಸಿಕೊಂಡು ಆ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ", ಎಂದರು. ಮ್ಯಾನೇಜರ್ ಫೆಬೆ ಶೀಲಾ ರಾಣಿ ಮಾತನಾಡಿ, "ಬಾಲ್ಡ್ ವಿನ್ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ನೆರವಾಗುತ್ತಿದೆ. ಸಮಾಜಕ್ಕೆ ಜವಾಬ್ದಾರಿಯುತ ಮಕ್ಕಳನ್ನ ನೀಡುವುದು ನಮ್ಮ ಉದ್ದೇಶವಾಗಿದೆ", ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಕಮಲ್ ಕರ್ಕರೆ (ಅಧ್ಯಕ್ಷರು), ಡಾ ಜೋಶುವಾ ಸ್ಯಾಮ್ಯುಯೆಲ್ (ಕಾರ್ಯದರ್ಶಿ, ಬಾಲ್ಡ್ ವಿನ್ ಸಂಸ್ಥೆಗಳು), HR ಮುಖ್ಯಸ್ಥೆ (ಬಾಲ್ಡ್ ವಿನ್ ಸಂಸ್ಥೆಗಳು) ಶ್ರೀಮತಿ ಅನಿತಾ ಐಸಾಕ್, ಉಪ-ಪ್ರಾಂಶುಪಾಲೆ ಶ್ರೀಮತಿ ಸುಜಾತಾ ಕ್ಯಾಥರೀನ್, ವಿಶೇಷ ಅತಿಥಿಗಳಾಗಿ ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಮತ್ತು ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.
ಈ ವರದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651