ದ್ವೇಷ ಭಾವನೆಯಿಂದ ಮತ್ತೆ ತಪ್ಪನ್ನು ಮಾಡಬಾರದು ಎಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾದ ಬಂದಿಗಳಿಗೆ ಕಿವಿಮಾತು

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಸಮಾಜದಲ್ಲಿ ಎಲ್ಲರ ಜೀವನವು ವೇಗವಾಗಿ ನಡೆಯುತ್ತಿದೆ. ತಪ್ಪಿನ ಅರಿವು ನಿಮಗೆ ಈಗಾಗಲೆ ಇದೆ. ದ್ವೇಷ ಭಾವನೆಯಿಂದ ಮತ್ತೆ ತಪ್ಪನ್ನು ಮಾಡಬೇಡಿ. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳುವಂತೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾದ ಬಂದಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.



ಇಂದು ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ 2022ನೇ ಸಾಲಿನ ಸ್ವಾತಂತ್ರ್ಯ  ಪ್ರಯುಕ್ತ ಅಧಿಕಾರಿ, ಸಿಬ್ಬಂದಿಗಳಿಗೆ ಘನತೆವೆತ್ತ ರಾಷ್ಟ್ರಪತಿಗಳ ಪದಕ ಹಾಗೂ 2023ನೇ ಸಾಲಿನ ಮುಖ್ಯ ಮಂತ್ರಿಗಳ ಪದಕ ಪ್ರದಾನ ಮತ್ತು ಸನ್ನಡತೆಯ ಶಿಕ್ಷಾ ಬಂದಿಗಳ ಅವಧಿ ಪೂರ್ವ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, 2015 ರಿಂದ ಇಲ್ಲಿಯವರೆಗೆ 2144 ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಇಂದು ರಾಜ್ಯದ ವಿವಿಧ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ 77 ಸಜಾ ಬಂದಿಗಳನ್ನು  ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆಯಾಗುತ್ತಿರುವ ಎಲ್ಲಾ ಬಂದಿಗಳಿಗೂ ಒಳಿತುಂಟಾಗಲಿ ಎಂದು ಹಾರೈಸಿದರು.

ಪ್ರಕೃತಿ, ವಿಧಿ ನಿಯಮದಂತೆ ನಮ್ಮೆಲ್ಲರ ಜೀವನ ಸಾಗುತ್ತಿರುತ್ತದೆ. ನಾವು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕನ್ನು ಸಾಗಿಸಿತ್ತಿರುತ್ತೇವೆ. ಕೆಲವೊಮ್ಮೆ ತಿಳಿದು, ತಿಳಿಯದೆ ತಪ್ಪನ್ನು ಮಾಡುತ್ತೇವೆ. ಕೆಲವು ಸಂದರ್ಭಗಳು ತಪ್ಪುನ್ನು ಮಾಡಿಸುತ್ತದೆ. ಇದರಿಂದ ಜೀವನದ ಹಾದಿ ತಪ್ಪಿ ಕಾರಾಗೃಹದಲ್ಲಿ ಜೀವನ ಕಳೆಯಬೇಕಾಗುತ್ತದೆ. ಅಪರಾಧವೆಸೆದ ವ್ಯಕ್ತಿ ಪಶ್ಚಾತಾಪ ಅನುಭವಿಸಿ ಒಳ್ಳೆಯ ರೀತಿಯಲ್ಲಿ ಪರಿವರ್ತನೆ ಆಗಬೇಕು. ಕಾನೂನಿನಲ್ಲಿ ತಪ್ಪು ಮಾಡುವ ವ್ಯಕ್ತಿಗೆ ಶಿಕ್ಷೆಯಾಗುತ್ತದೆ. ಪ್ರತಿಭಾವಂತ, ಸಿರಿವಂತ, ಬಡವಬಲ್ಲಿದನೆಂಬ ಭೇದವಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದರು.

ಸರ್ವೋಚ್ಚ ನ್ಯಾಯಾಲಯವು ವರ್ಷ 3 ಬಾರಿ  ಶಿಕ್ಷಾ ಬಂದಿಗಳ ಅವಧಿ ಪೂರ್ವ ಬಿಡುಗಡೆ ಮಾಡಲು  ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅದರಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಿಂದ ಕ್ರಮವಹಿಸಲಾಗುತ್ತಿದೆ ಎಂದರು.

ಪರಪ್ಪನ ಅಗ್ರಹಾರವು ಸ್ವಚ್ಚವಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು  ಬಂಧಿಗಳ ಆರೋಗ್ಯ, ಸುರಕ್ಷತೆ, ಸನ್ನಡತೆಯವರನ್ನಾಗಿ ಪರಿವರ್ತನೆ ಮಾಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬಂದಿಗಳಿಗೆ ವೃತ್ತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.

ಕಾರಾಗೃಹ ಅಧಿಕಾರಿ, ಸಿಬ್ಬಂದಿಗಳ ಉತ್ತಮ ಸೇವೆಯನ್ನು ಗುರುತಿಸಿ 2022ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 4 ಅಧಿಕಾರಿ, ಸಿಬ್ಬಂದಿಗಳಿಗೆ ಘನತೆವೆತ್ತ ರಾಷ್ಟ್ರಪತಿಗಳ ಪದಕ ಹಾಗೂ 2023ನೇ ಸಾಲಿನಲ್ಲಿ 14ಜನ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳವರ ಪದಕಗಳನ್ನು  ಸಚಿವರು ವಿತರಿಸಿದರು.

ಬಂದಿಗಳ ಮನಸ್ಸಿನ ಪರಿವರ್ತನೆ ಗಾಗಿ ಯೋಗ, ಧ್ಯಾನ, ವಿದ್ಯಾಭ್ಯಾಸ, ವಾಚನಾಲಯ ವಿವಿಧ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಕಾರಾಗೃಹದಿಂದ ಬಿಡುಗಡೆಯಾಗುತ್ತಿರವ ಸತೀμï ಗುಪ್ತಾ ಅವರು ಜೈಲಿನಲ್ಲಿ ವಿವಿಧ  ಪದವಿ ಕೋರ್ಸ್‍ಗಳನ್ನು ಮಾಡಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾನಿರ್ದೇಶಕರಾದ ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಆಯುಕ್ತರಾದ ದಯಾನಂದ ಸೇರಿದಂತೆ ಹಿರಿಯ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 
 ಗೃಹ ಸಚಿವ ಡಾ.ಜಿ.ಪರಮೇಶ್ವರ

Post a Comment

0Comments

Post a Comment (0)