ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಯು-ಟರ್ನ್‌ ನಡೆ ಸರಿಯಲ್ಲ:ರಾಘವೇಂದ್ರ ಶೆಟ್ಟಿ

varthajala
0

ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಸೂದೆಗೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಡೆ ಸ್ವಾಗತಾರ್ಹವಾಗಿತ್ತು. ಸರೋಜಿನಿ ಮಹಿಷಿ ವರದಿಯ ಜಾರಿಗೆ ಒತ್ತಾಯಿಸಿದ ಬಹು ದಿನಗಳ ಬೇಡಿಕೆಯಾಗಿತ್ತು. ಆದರೆ ಈ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಯಮಿಗಳ ಒತ್ತಡಕ್ಕೆ ಮಣಿದು ಧೀಡಿರ್ ಯು-ಟರ್ನ್ ಹೊಡೆದಿರುವುದು ಆಕ್ಷೇಪಾರ್ಹ ನಡೆಯಾಗಿದೆ. ಕನ್ನಡಿಗರಿಗೆ ಎಸಗಿದ ದ್ರೋಹವಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್ ಎಸ್ ರಾಘವೇಂದ್ರ ಶೆಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಖಾಸಗಿ ಕ್ಷೇತ್ರಗಳ ಉದ್ಯೋಗಗಳಲ್ಲಿನ ಮೀಸಲಾತಿ ನೀಡುವ ಬಗೆಗಿನ ವಿಚಾರದಲ್ಲಿ ಆರಂಭದಲ್ಲಿ ರಾಜ್ಯದ ಖಾಸಗಿ ಉದ್ದಿಮೆಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ನೀಡಿರುವ ಕುರಿತು ಸಿದ್ದರಾಮಯ್ಯನವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಗಳಲ್ಲೂ ಘೋಷಣೆ ಮಾಡಿದ್ದರು. ಆದರೆ ಕೆಲವೇ ಸಮಯದಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಪುನಃ 50% ನಿಂದ 75% ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಒಪ್ಪಿಗೆ ನೀಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೆ ಅದನ್ನೂ ಡಿಲೀಟ್ ಮಾಡಿ ಮಸೂದೆ ಇನ್ನೂ ಸಿದ್ಧತೆಯ ಹಂತದಲ್ಲಿರುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಸಿದ್ಧತೆಯಲ್ಲಿರುವ ಮಸೂದೆಯ ಬಗ್ಗೆ ಈಗಲೇ ತರಾತುರಿಯಿಂದ ಘೋಷಿಸುವ ಇರಾದೆ ಏನಿತ್ತು? ಕನ್ನಡಿಗರ ಪರ ಎಂದು ಸದಾ ಎದೆಯುಬ್ಬಿಸಿಕೊಂಡು ಹೇಳುವ ಸಿದ್ದರಾಮಯ್ಯನವರು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಲು ಏಕೆ ಇಚ್ಛಾಶಕ್ತಿಯನ್ನು ತೋರದೆ ದಿಟ್ಟ ಹೆಜ್ಜೆಯನ್ನು ಇಡದೆ ಹಿಂಜರಿಯುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು 
ಕನ್ನಡಿಗರು ಎಲ್ಲಾ ರೀತಿಯಲ್ಲೂ ಕೌಶಲ್ಯವಂತರಾಗಿದ್ದಾರೆ. ಬುದ್ಧಿವಂತರಾಗಿದ್ದಾರೆ. ಅವರಿಗೆ ಕೇವಲ ಸಿ ಮತ್ತು ಡಿ ದರ್ಜೆಯಲ್ಲಿ ಉದ್ಯೋಗ ಮೀಸಲಿಡುವ ಚರ್ಚೆಯೇ ಅನಗತ್ಯ. ಎಲ್ಲ ಹಂತದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳನ್ನು ಮೀಸಲಿಡಬೇಕು. ಕನ್ನಡಿಗರ ಭೂಮಿಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಕನ್ನಡಿಗರನ್ನೇ ಉದ್ಯೋಗಗಳಿಂದ ಹೊರಗಿಟ್ಟರೆ ಹೇಗೆ? ಕನ್ನಡಿಗರಿಗೆ ಸ್ಕಿಲ್ ಇಲ್ಲ ಎಂಬ ಕಾರಣಗಳು ಕನ್ನಡಿಗರಿಗೆ ಎಸಗುತ್ತಿರುವ ಅವಮಾನವಾಗಿದೆ. ಕನ್ನಡಿಗರು ಹೆಚ್ಚು ಪ್ರತಿಭಾವಂತರಾಗಿರುವುದರಿಂದ ವಿದೇಶಗಳಲ್ಲಿ ಕನ್ನಡಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಇದು ಕೇವಲ ಬಹು ರಾಷ್ಟ್ರೀಯ ಉದ್ಯಮಿಗಳ ಲಾಬಿಗೆ ರಾಜ್ಯ ಸರ್ಕಾರ ಬಲಿಯಾಗಿರುವುದರ ಉದಾಹರಣೆಯಷ್ಟೇ. ಉತ್ತರ ಭಾರತದ ಉದ್ಯಮಿಗಳು ಅಲ್ಲಿನ ನೌಕರರನ್ನೇ ಹೆಚ್ಚಾಗಿ ಸೇರಿಸಿಕೊಳ್ಳುವ ಮೂಲಕ ಕರ್ನಾಟಕವನ್ನು ಹಿಂದಿಮಯವಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಎಲ್ಲಾ ಸ್ಥರಗಳಲ್ಲಿಯೂ ಕನ್ನಡಿಗರನ್ನು ಶೋಷಿಸುತ್ತಿದೆ. ಕೂಡಲೇ ಸರಕಾರ ಈ ಅಧಿವೇಶನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡು ಕನ್ನಡ ಕನ್ನಡಿಗರ ಹಿತ ಕಾಯಲು ಮುಂದಾಗಬೇಕು ಎಂದು ಎಚ್ ಎಸ್ ರಾಘವೇಂದ್ರ ಶೆಟ್ಟಿ ಸರ್ಕಾರವನ್ನು ಆಗ್ರಹಸಿದರು.

Post a Comment

0Comments

Post a Comment (0)