ಆರ್ಯ ವೈಶ್ಯ ನಿಗಮದ 2024-25ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ: ಸಣ್ಣಉದ್ಯಮಿಗಳು ಸದುಪಯೋಗಪಡೆದುಕೊಳ್ಳಿ

varthajala
0

  ಬೆಂಗಳೂರು (ಕರ್ನಾಟಕ ವಾರ್ತೆ):  ಆರ್ಯ ವೈಶ್ಯ ನಿಗಮದ ಮೂಲಕ ಕಳೆದ ವರ್ಷ 2023-24ರಲ್ಲಿ 800 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸಾಲ-ಸಹಾಯಧನ ನೀಡಲಾಗಿತ್ತು. ಈ ವರ್ಷವೂ ಸಹ ಈ ಎಲ್ಲಾ ಯೋಜನೆಗಳೂ ಮುಂದುವರೆಯಲಿದ್ದು, ಇಂದು ನಡೆದ ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಲಾಗಿದ್ದು, ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ನಿಗಮದ ಸಹಾಯದ ಅಗತ್ಯವಿರುವ ಅರ್ಹ ಸಣ್ಣ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

 ಆರ್ಯ ವೈಶ್ಯ ನಿಗಮದ ವಿವಿಧ ಯೋಜನೆಗಳು:
ಆರ್ಯ ವೈಶ್ಯ ನಿಗಮದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 03 ಯೋಜನೆಗಳಾದ ಸ್ವಯಂ-ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ / ವಾಹಿನಿ ಯೋಜನೆ ಮತ್ತು ವಾಸವಿ ಜಲಶಕ್ತಿ ಯೋಜನೆಗಳಿಗೆ ಅರ್ಜಿಗಳನ್ನು ಜುಲೈ 12 ರಿಂದ ಆನ್‍ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು  ಆಗಸ್ಟ್ 31 ಕೊನೆಯ ದಿನವಾಗಿದೆ. ಎಲ್ಲಾ ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ: 94484 51111 ಅನ್ನು ಸಂಪರ್ಕಿಸಬಹುದು.
                       

 ಸ್ವಯಂ-ಉದ್ಯೋಗ ನೇರಸಾಲ ಯೋಜನೆ:
ಈ ವರ್ಷ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ ರೂ. 1.00 ಲಕ್ಷಗಳ ಸಾಲ-ಸಹಾಯಧನ ನೀಡಲಾಗುತ್ತಿದ್ದು, ಇದರಲ್ಲಿ ರೂ.20,000/-ಗಳ ಸಹಾಯಧನವಿರುತ್ತದೆ. ಹಾಗೂ ಬಾಕಿ ಮೊತ್ತವನ್ನು ಶೇ.4%ರ ಬಡ್ಡಿದರದಲ್ಲಿ ನೀಡಲಾಗುವುದು.

ಹಲವಾರು ವರ್ಷಗಳ ಬೇಡಿಕೆಯಂತೆ ಈ ಯೋಜನೆಯಲ್ಲಿ ವಯೋಮಿತಿಯನ್ನು 45 ವರ್ಷಗಳಿಂದ 55 ವರ್ಷಗಳಿಗೆ ಹೆಚ್ಚಿಸಲಾಗಿದೆ. ಈ ಬಾರಿ 2019-20 ಮತ್ತು 2020-21 ಸಾಲಿನ ಫಲಾನುಭವಿಗಳು ಪಡೆದ ಸಾಲವನ್ನು ನಿಗದಿತ ಕಾಲಮಿತಿಯೊಳಗೆ ಮರುಪಾವತಿಸಿದಲ್ಲಿ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
                     

ಬ್ಯಾಂಕ್‍ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ವಾಹಿನಿ/ ವಾಹಿನಿ ಯೋಜನೆ:
ಈ ಬಾರಿ ಆರ್ಯ ವೈಶ್ಯ ವಾಹಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಅಭ್ಯರ್ಥಿಯು ಹಳದಿ ಬಣ್ಣದ ಬೋರ್ಡ್ ಉಳ್ಳ ಆಟೋ, ಟ್ರಕ್, ಕಾರ್ ಇತ್ಯಾದಿಯನ್ನು ಖರೀದಿಸಬಹುದು. ಅರ್ಜಿದಾರರು ಯಾವುದಾದರೂ ಬ್ಯಾಂಕ್‍ನಲ್ಲಿ  ಸಾಲ ಪಡೆಯಬಹುದು ಹಾಗೂ ನಿಗಮದಿಂದ ರೂ.1.00 ಲಕ್ಷಗಳವರೆಗೆ ಸಹಾಯಧನ ನೀಡಲಾಗುವುದು. ಅರ್ಜಿದಾರರು ವಾಹನವನ್ನು ಪ್ಯಾಬ್ರಿಕೇಶನ್ ಮಾಡಿಸಿ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಲ್ಲಿ ಹೆಚ್ಚುವರಿಯಾಗಿ ರೂ.1.00ಲಕ್ಷಗಳ ಸಹಾಯಧನವನ್ನು ನೀಡಲಾಗುವುದು.

ವಾಸವಿ ಜಲಶಕ್ತಿ ಯೋಜನೆ:
ನಿಗಮದ ವತಿಯಿಂದ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ವಾಸವಿ ಜಲಶಕ್ತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ರೈತರು ಕನಿಷ್ಠ 2 ರಿಂದ ಗರಿಷ್ಠ 15 ಎಕರೆ ಜಮೀನು ಹೊಂದಿರಬೇಕು ಹಾಗೂ ಈ ಬಾರಿ ವಯೋಮಿಯನ್ನು 50 ರಿಂದ 55 ರವರೆಗೆ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ ಶೇ.4ರಷ್ಟು ಬಡ್ಡಿದರದಲ್ಲಿ ರೂ.2.00ಲಕ್ಷಗಳ ಸಾಲ ಹಾಗೂ ವಿದ್ಯುದ್ಧೀಕರಣಕ್ಕಾಗಿ ರೂ.50,000/-ಗಳ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದರು.
                    

ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ಶ್ರೀಮತಿ ದೀಪಶ್ರೀ.ಕೆ ಅವರು, ಮರುಪಾವತಿಯನ್ನು ಆನ್-ಲೈನ್ ಮುಖಾಂತರ ಪಡೆಯುತ್ತಿದ್ದು, ಮರುಪಾವತಿಗಾಗಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಆರ್ಥಿಕ ಇಲಾಖೆಯ  ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಹೆಚ್.ಎ.ಶೋಭ, ಹಾಗೂ ಕಂದಾಯ ಇಲಾಖೆಯ ಉಪಕಾರ್ಯದರ್ಶಿಗಳಾದ ಶ್ರೀಮತಿ ಎಸ್.ಎನ್.ಕಲಾವತಿ ಅವರು ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಿದರು.

Post a Comment

0Comments

Post a Comment (0)