ಬೆಂಗಳೂರು (ಕರ್ನಾಟಕ ವಾರ್ತೆ): ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಹಾಗೂ ಮೆಟ್ರೋ ಮಹಿಳಾ ಸಿಬ್ಬಂದಿಗಳ ಸಮಸ್ಯೆಗಳನ್ನು ತಿಳಿಯಲು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ವಿಜಯನಗರ ಮೆಟ್ರೋ ನಿಲ್ದಾಣದಿಂದ ವೈಟ್‍ಫೀಲ್ಡ್ ಮೆಟ್ರೋ ನಿಲ್ದಾಣದವೆರೆಗೆ ಪ್ರಯಾಣಿಸಿ ನಂತರ ಅಲ್ಲಿಂದ ವಿಶ್ವೇಶ್ವರಯ್ಯ ನಿಲ್ದಾಣಕ್ಕೆ (ಸೆಂಟ್ರಲ್ ಕಾಲೇಜು) ಪ್ರಯಾಣಿಸಿದರು.
ಈ ಸಮಯದಲ್ಲಿ ಮೆಟ್ರೋದ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ ಮಹಿಳೆಯರ ಸಮಸ್ಯೆಗಳು, ಸುರಕ್ಷತೆ ಮುಂತಾದ ವಿಷಯಗಳ ಕುರಿತಂತೆ ಚರ್ಚಿಸಿದರು. ಪೀಕ್ ಅವರ್‍ನಲ್ಲಿ ಮಹಿಳಾ ಪ್ರಯಾಣಿಕರಿಗೆ ನಮ್ಮ ಮೆಟ್ರೋದಲ್ಲಿ ದಟ್ಟಣೆಯಿದ್ದು, ಆ ಸಮಯದಲ್ಲಿ ಮಹಿಳೆಯರಿಗಾಗಿ ಇನ್ನೊಂದು ಬೋಗಿಯನ್ನು ಮೀಸಲಿಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ವಿಷಯಕ್ಕೆ ಮೆಟ್ರೋ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮವಹಿಸುವುದಾಗಿ ತಿಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.