ನ್ಯಾಯಾಧೀಶ ವಲ್ಲೂರಿ ಕಾಮೇಶ್ವರ್ ರಾವ್ ಅವರಿಗೆ ಆತ್ಮೀಯ ಸ್ವಾಗತ

varthajala
0

ಬೆಂಗಳೂರು, ಜೂನ್ 03 (ಕರ್ನಾಟಕ ವಾರ್ತೆ): ದೆಹಲಿ ಉಚ್ಛ ನ್ಯಾಯಾಲಯದಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ನ್ಯಾಯಮೂರ್ತಿ ವಲ್ಲೂರಿ ಕಾಮೇಶ್ವರ್ ರಾವ್ ಅವರಿಗೆ ಇಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸ್ವಾಗತ ಕೋರಲಾಯಿತು.

ಈ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ವಿಶಾಲ್ ರಘು, ನ್ಯಾಯಮೂರ್ತಿ ವಲ್ಲೂರಿ ಕಾಮೇಶ್ವರ ರಾವ್ ಅವರು 1965 ರಲ್ಲಿ ಜನಿಸಿ, ದೆಹಲಿ ವಿಶ್ವವಿದ್ಯಾಲಯದಲ್ಲಿ 1990 ರಲ್ಲಿ ಕಾನೂನು ಪದವಿ ಪಡೆದರು. 1991 ರಲ್ಲಿ ದೆಹಲಿ ಬಾರ್ ಕೌನ್ಸಿಲ್‍ನಲ್ಲಿ ವಕೀಲರಾಗಿ ನೋಂದಾಯಿಸಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅವರು ದೆಹಲಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ, ಕೇಂದ್ರೀಯ ಆಡಳಿತ, ನ್ಯಾಯಮಂಡಳಿಯಲ್ಲಿ ಸಹ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಅವರು ಸೇವಾ, ಕಾರ್ಮಿಕ, ಆಡಳಿತ, ಸಂವಿಧಾನ, ಮಧ್ಯಸ್ಥಿಕೆ ಕಾನೂನು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಬ್ಯಾಂಕಿಂಗ್, ಸಾರ್ವಜನಿಕ ಉದ್ದಿಮೆ ಕ್ಷೇತ್ರಗಳಲ್ಲಿಯೂ ಕಾನೂನು ಸಲಹೆ ನೀಡಿದ್ದಾರೆ. ಕೇಂದ್ರೀಯ ನ್ಯಾಯಮಂಡಳಿಯ ವಕೀಲ ಸಂಘದ ಕಾರ್ಯನಿರ್ವಾಹಕ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

ದೆಹಲಿ ಉಚ್ಚ ನ್ಯಾಯಾಲಯದಲ್ಲಿ 2010ರಲ್ಲಿ ಅವರು ಹಿರಿಯ ವಕೀಲರಾಗಿ ಸೇರ್ಪಡೆಗೊಂಡರು. ಅನಂತರ 2013 ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ 2015 ರಿಂದ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಉತ್ತಮ ತೀರ್ಪು ನೀಡುವುದರ ಮೂಲಕ ಉತ್ತಮ ಹೆಸರು ಗಳಿಸಿದರು.

ಇದೀಗ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವ ವಲ್ಲೂರಿ ಕಾಮೇಶ್ವರ್ ರಾವ್ ಅವರಿಗೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿ. ಇಲ್ಲಿನ ಜನರು ಅವರಿಗೆ ಪ್ರೀತಿ, ಗೌರವ, ಸಹಕಾರ ನೀಡಲಿದ್ದಾರೆ. ಎಲ್ಲಾ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು, ವಕೀಲರಿಂದ ಉತ್ತಮ ಸ್ಪಂದನೆ ಅವರಿಗೆ ಸಿಗಲಿದೆ. ಅವರು ಒಳ್ಳೆಯ ತೀರ್ಪುಗಳನ್ನು ನೀಡುವ ಮೂಲಕ ಜನರ, ನ್ಯಾಯಾಲಯದ ವಿಶ್ವಾಸವನ್ನು ಎತ್ತಿ ಹಿಡಿಯಲಿ ಎಂದು ಶುಭ ಹಾರೈಸಿದರು.

ನಂತರ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಲ್ಲೂರಿ ಕಾಮೇಶ್ವರ್ ರಾವ್, ತಮ್ಮ ಪ್ರೀತಿ ವಿಶ್ವಾಸಿಗಳಿಗೆ ನಾನು ಆಭಾರಿಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಧಕ್ಕೆ ಬಾರದ ರೀತಿ ಕೆಲಸ ನಿರ್ವಹಿಸೋಣ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಸೇರಿದಂತೆ ಇತರ ಹಿರಿಯ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.

Post a Comment

0Comments

Post a Comment (0)