ಡಾ ಮಾನಸ ಕೀಳಂಬಿ ಪುಸ್ತಕ ಲೋಕಾರ್ಪಣೆ

varthajala
0

ಗದ್ಯ - ಪದ್ಯ ಎರಡನ್ನೂ ಹೃದ್ಯವಾಗಿಸಬಲ್ಲ ಅಭಿವ್ಯಕ್ತಿ ಕಲೆ ಡಾ. ಮಾನಸಾ  ಕೀಳಂಬಿ ಅವರಿಗೆ ಸಿದ್ಧಿಸಿದೆ. ಇಂದು ಬಿಡುಗಡೆಯಾದ ಅವರ ಮೂರೂ ಪ್ರಕಟಣೆಗಳು  ಭಾವಕ್ಕೆ, ಬುದ್ಧಿಗೆ ಮತ್ತು ಜೀವಕ್ಕೆ ಸಾಂತ್ವನ ನೀಡಬಲ್ಲವು. ಹೆಣ್ಣಿನ ತಲ್ಲಣ, ಆತಂಕ, ಅಭದ್ರತೆಯ ಭಾವ, ಜೀವಪರತೆ  ಹಾಗೂ ಸಾಧ್ಯತೆಗಳ ಕುರಿತು ಕಣ್ತೆರೆಸುವ ಬರಹಗಳು ಇಲ್ಲಿವೆ. ಕವನಗಳು ತಮ್ಮ ಗೇಯತೆಯ ಗುಣದಿಂದಾಗಿ ಸಹೃದಯರನ್ನು ಹಿಡಿದಿಟ್ಟು ಕೊಳ್ಳುತ್ತವೆ ಎಂದು ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷರಾದ ಡಾ. ಹೆಚ್. ಎಸ್ ಸುರೇಶ್ ಅವರು ಅಭಿಪ್ರಾಯ ಪಟ್ಟರು.

ಬೆಂಗಳೂರಿನ ಎನ್. ಆರ್. ಕಾಲೋನಿಯ ಡಾ.ಸಿ.ಅಶ್ವತ್ಥ್ ಕಲಾಭವನದಲ್ಲಿ ನಡೆದ  ಡಾ. ಮಾನಸಾ ಕೀಳಂಬಿ ಅವರ  ' ಮರೆತುಹೋಗುವ ಮುನ್ನ'  ಕವನ ಸಂಕಲನ 'ಶಿಶಿರ ಕಳೆದ ಮೇಲೆ' ಸಾಮಾಜಿಕ ಕಾಳಜಿಯ ಬರಹಗಳು ಮತ್ತು  'ಆಯುರ್ವೇದ' ಆರೋಗ್ಯ ಸೂತ್ರಗಳ ಪರಿಚಯ ಬರಹಗಳ ಮೂರೂ ಪುಸ್ತಕಗಳನ್ನು ಅವರು ಲೋಕಾರ್ಪಣೆಗೊಳಿಸಿದರು.  ಈ ಕಾರ್ಯಕ್ರಮದ ಅಧ್ಯಕ್ಷರಾದ ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ,  ಮಾನಸಾ ಅವರ ಬರವಣಿಗೆಯ ಶೈಲಿ ಎಲ್ಲರನ್ನೂ ಆಕರ್ಷಿಸುವಂತೆ ಸರಳ ಸುಂದರವಾಗಿದ್ದು, ಲಯಗತಿಯಿಂದ ಕೂಡಿ, ಹಾಡುವಂತಿದೆ. ನಾನು ಮರೆತ ರೇಖಾಚಿತ್ರಗಳು ಇಲ್ಲಿ ಮುದ್ರಿತವಾಗಿ ನನ್ನ ಹವ್ಯಾಸವನ್ನು ನೆನಪಿಸಿವೆ ಎಂದರು.
     ಆಯುರ್ವೇದ - ಅರಿವು - ಅಭ್ಯಾಸ - ಆರೋಗ್ಯ ಕೃತಿಯ ಮಾರ್ಗದರ್ಶಕರಾದ ಡಾ. ಎಸ್ .ಆರ್. ಆಚಾರ್ಯರು ಕೊರೋನಾ ನಂತರದ ಈ ದಿನಗಳಲ್ಲಿ ಆರೋಗ್ಯಭಾಗ್ಯಕ್ಕಾಗಿ ಪಾಲಿಸಬೇಕಾದ ಆಯುರ್ವೇದದ ದಿನಚರ್ಯೆ, ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಗದ್ಯ, ಪದ್ಯ ಸಂಕಲನಗಳ ಅನಾವರಣದೊಂದಿಗೆ "ಸಮದರ್ಶಿ ಪ್ರಕಾಶನ" ವನ್ನು ಲೋಕಾರ್ಪಣೆಗೊಳಿಸಿದ್ದಕ್ಕೆ ಮಾನಸಾ ಅವರ ಗುರುಗಳೂ, ಕಮಲಾನೆಹರೂ ಕಾಲೇಜಿನ ನಿವೃತ್ತ ಪ್ರಾಚಾರ್ಯರೂ ಆದ ಶ್ರೀಮತಿ ಕಿರಣ್ ದೇಸಾಯಿ ಅವರು ಇನ್ನಷ್ಟು ಸಮಾಜಮುಖೀ ಚಿಂತನೆಗಳು ಈ ಪ್ರಕಾಶನದಿಂದ ಪ್ರಕಾಶಿತವಾಗಲೆಂದು ಮನದುಂಬಿ ಹಾರೈಸಿದರು.
     ಕೃತಿಗಳನ್ನು ಪರಿಚಯಿಸಿದ ಉಪನ್ಯಾಸಕಿ ಶ್ರೀಮತಿ ವಸುಧಾ ಚೈತನ್ಯ ರವರು,  ಶಿಶಿರ ಕಳೆದ ಮೇಲೆ - ಗದ್ಯ ಲೇಖನಗಳ ಸಂಗ್ರಹದ ಪ್ರತೀ ಲೇಖನವೂ  ಸಮಾಜಕ್ಕೊಂದು ಸಂದೇಶ ನೀಡಿ, ಚಿಂತನೆಗಳನ್ನು ಪಕ್ವಗೊಳಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಆಪ್ತಸಂವಾದದ ನೆಲೆಯಲ್ಲಿ ಅಭಿವ್ಯಕ್ತವಾಗಿದೆ. ಮರೆತುಹೋಗುವ ಮುನ್ನ - ಕವನಸಂಕಲನವು ಸ್ತ್ರೀ ಸಂವೇದನೆ, ದಾಂಪತ್ಯದ ಚೆಲುವು - ಒಲವು, ಪರಿಸರ, ದೇಶಭಕ್ತಿಯಂತಹ ವಸ್ತುವನ್ನೊಳಗೊಂಡಿದ್ದು ಛಂದೋಲಯಗತಿಯನ್ನು ಹೊಂದಿವೆ. ಕವಿತೆಯ ಭಾವಗಳು ಓದುಗನ ಭಾವದ ಓಘಕ್ಕೆ ಸ್ಪಂದಿಸುತ್ತವೆ ಎಂದು ಅಭಿಪ್ರಾಯಪಟ್ಟರು.  ಕೊನೆಯಲ್ಲಿ ಡಾ. ಮಾನಸಾ ಕೀಳಂಬಿ ಮಾತನಾಡಿ, ಪುಸ್ತಕಗಳ ಮುದ್ರಣ, ಬಿಡುಗಡೆ, ಮಾರಾಟದ ಬಗ್ಗೆ ತಮ್ಮ ಆತಂಕವನ್ನು ಹಂಚಿಕೊಂಡರು.  ಶ್ರೀಮತಿ ರೇಖಾ ಸ್ವಾಗತಿಸಿ, ನಿರೂಪಿಸಿದರು. ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧ ಗಾಯಕರಾದ ನಗರ ಶ್ರೀನಿವಾಸ ಉಡುಪರು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಾರುತಿ ಎಂ. ಪಿ. ಭದ್ರಾವತಿ ಎಸ್‌ ಎ ವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಎಸ್.‌ ಯಡೂರು ಭಾಸ್ಕರ ಜೋಯ್ಸರು, ಪದ್ಮಪಾಣಿ ಜೋಡೀದಾರ್‌, ಡಾ. ಕೆ. ರಾಜಕುಮಾರರು, ಪ್ರಕಾಶ್ ಶೇಟ್ ಮೊದಲಾದ ಆಸಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದರು.   ಕುಮಾರಿ ಸುರಭಿಯವರು ಮಾನಸಾರ ಭಾವಗೀತೆಗಳನ್ನು ಹಾಡಿದರು. ಆ ಹಾಡಿಗೆ  ಡಾ. ಸುಮಾ ರಮೇಶ್  ಭಾವಾಭಿನಯ ಮಾಡಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದು ವಿಭಿನ್ನ ಪರಂಪರಗೆ ನಾಂದಿ ಹಾಡಿತು.  ಒಟ್ಟಾರೆ, ಒಂದು ವಿಭಿನ್ನ ಕಾರ್ಯಕ್ರಮಕ್ಕೆ ಸಹೃದಯರು ಸಾಕ್ಷಿಯಾದರು.

Post a Comment

0Comments

Post a Comment (0)