ವಿಶ್ವಶ್ರೇಷ್ಠ ಸರೋದ್ ವಾದಕ ರಾಜೀವ್ ತಾರಾನಾಥರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸಂತಾಪ

varthajala
0

ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲೊಬ್ಬರಾದ, ಅತ್ಯಂತ ಸರಳತೆಗೆ, ಮಾನವೀಯ ಮೌಲ್ಯಗಳಿಗೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದ ನಮ್ಮ ಕನ್ನಡಿಗ ಪಂಡಿತ್ ರಾಜೀವ್ ತಾರಾನಾಥರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತೀವ್ರ ಸಂತಾಪವನ್ನು ಸೂಚಿಸಿದ್ದು ಕನ್ನಡದ ಹೆಗ್ಗಳಿಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದ್ದ ಅವರ ನಿರ್ಗಮನ ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ನಿರ್ವಾತವನ್ನು ಮೂಡಿಸಿದೆ ಎಂದು ಹೇಳಿದ್ದಾರೆ. 

ರಾಜೀವ್ ತಾರಾನಾಥರು 1932ರ ಅಕ್ಟೋಬರ್ 17ರಂದು ಜನಿಸಿದರು. ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತೆಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರ ಶಿಷ್ಯರಾದರು. 

2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ಅ ವರಲ್ಲದೆ ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹ ರಾಜೀವ್ ತಾರಾನಾಥರು ಗಳಿಸಿಕೊಂಡವರು ಎಂದು ಅವರ ಬದುಕಿನ ಪುಟಗಳನ್ನು ಡಾ. ಮಹೇಶ ಜೋಶಿಯವರು ನೆನಪು ಮಾಡಿಕೊಂಡು ತಮ್ಮೊಂದಿಗೆ ಸದಾ ಆತ್ಮೀಯವಾಗಿರುತ್ತಿದ್ದ ಅವರ ವ್ಯಕ್ತಿತ್ವದ ಹಿರಿಮೆಯನ್ನು ಸ್ಮರಿಸಿ ಕೊಂಡಿದ್ದಾರೆ.

ರಾಜೀವ್ ತಾರಾನಾಥರು ತಾವು ಹೊರಹೊಮ್ಮಿಸುತ್ತಿದ್ದ ರಾಗಗಳ ಕುರಿತಾಗಿ ಹೊಂದಿದ್ದ ಆಳವಾದ ಜ್ಞಾನ, ಸ್ವರ ಮಾಧುರ್ಯ ಮತ್ತು ಸಂಗೀತ ಸಾಮರ್ಥ್ಯಕ್ಕೆ ಎಲ್ಲೆಡೆ ಗೌರವಿಸಲ್ಪಡುತ್ತಿದ್ದರು. ತಾಂತ್ರಿಕ ಕೌಶಲ್ಯ, ಕಲ್ಪನಾ ಸಾಮರ್ಥ್ಯ, ಅನುಭೂತಿಯ ಸೌಂದರ್ಯ ಇವೆಲ್ಲಾ ಅವರ ಸೃಜನೆಗಳಲ್ಲಿ ಮೇಳೈಸಿದ್ದವು. ಭಾರತ ಮತ್ತು ವಿದೇಶಗಳಲ್ಲೆಡೆಗಳಲ್ಲಿ ರಾಜೀವ್ ತಾರಾನಾಥರ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿದ್ದವು. ಆಸ್ಟ್ರೇಲಿಯಾ,

ಯೂರೋಪ್, ಯೆಮೆನ್, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಅಪಾರ ಅಭಿಮಾನಿ ಬಳಗ ಅವರನ್ನು ಹಿಂಬಾಲಿಸಿತ್ತು. ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿದ್ದ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಡಾವು ಮುಂತಾದವು ಎಂದು ನೆನಪು ಮಾಡಿಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಪಂಡಿತ್ ರಾಜೀವ್ ತಾರಾನಾಥರ ನೆನಪುಗಳನ್ನು ಉಳಿಸುವ ಕೆಲಸವಾಗಬೇಕು ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ  ಸಂಚಾಲಕರು, ಪ್ರಕಟಣಾ ವಿಭಾಗ

Post a Comment

0Comments

Post a Comment (0)