ಬೆಂಗಳೂರು, ಜೂನ್ 11 (ಕರ್ನಾಟಕ ವಾರ್ತೆ): ನಾವೆಲ್ಲರೂ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಸದೃಢರಾಗಬೇಕು. ಜೊತೆಗೆ ಬೇರೆಯವರಿಗೆ ಸಂತೋಷ ನೀಡಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ತಿಳಿಸಿದರು. ಅವರು ಇಂದು ವಿಕಾಸಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಅಧಿಕಾರಿಗಳಿಗೆ ‘ಒತ್ತಡ ನಿರ್ವಹಣೆ’ ಮತ್ತು ಸ್ಥಿತಿಸ್ಥಾಪಕತ್ವ ಅಭಿವೃದ್ಧಿ ಹಾಗೂ ಪರಿಣಾಮಕಾರಿ ಸಂವಹನ ಮತ್ತು ನಾಯಕತ್ವ ಅಭಿವೃದ್ಧಿ’ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಗುರಿ ಬರಿ ಅಂಕಗಳಿಕೆಗೆ ಅಷ್ಟೇ ಅಲ್ಲ. ವಿದ್ಯಾರ್ಥಿಗಳು ಸುಶಿಕ್ಷಿತವಾಗುವುದಲ್ಲದೇ, ಸತ್ಪ್ರಜೆಗಳಾಗಬೇಕು. ಸಮಸ್ಯೆಯಿಲ್ಲದ ಸಂಸಾರ, ಊರು, ವ್ಯಕ್ತಿಗಳಿಲ್ಲ. ಎಲ್ಲರಿಗೂ ಒತ್ತಡ, ಯೋಚನೆಗಳು ಇರುತ್ತವೆ. ಅದನ್ನು ಮೆಟ್ಟಿ ನಾವು ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮಲ್ಲಿರುವ ಒತ್ತಡ ನಿರ್ವಹಣೆ ನಮ್ಮ ಕೈಯಲ್ಲಿದೆ. ಇತರರು ಹೊಗಳಿದಾಗ ನಾವು ಹೇಗೆ ಇಷ್ಟಪಡುತ್ತೇವೆ ಹಾಗೆಯೇ ನಿಂದಿಸಿದವರನ್ನು ದ್ವೇಷಿಸುತ್ತೇವೆ. ಕೆಲವೊಮ್ಮೆ ನಮ್ಮ ಮನಸ್ಸನ್ನು ಇತರರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ ಎಂದರು.ಎಲ್ಲರಿಗೂ ಕೆಲಸದಲ್ಲಿ ಒತ್ತಡ ಇರುವುದು ಸಹಜ ಸರ್ಕಾರಿ ಕಚೇರಿಗಳಲ್ಲಿ ನೂರು ಜನ ಕೆಲಸವನ್ನು 70 ಜನ ನಿರ್ವಹಿಸುವ ಪರಿಸ್ಥಿತಿಯಲ್ಲಿದೆ. ಆದರೂ ನಾವು ಸ್ವಪ್ರೇರಣೆಯಿಂದ ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ಈ ತರಬೇತಿಯಿಂದ ಎಲ್ಲರೂ ಅತ್ಯುತ್ತಮ ಅಧಿಕಾರಿಗಳಾಗಿ ಹೊರಹೊಮ್ಮಬೇಕು. ಜೊತೆಗೆ ನಿಮ್ಮ ಸಿಬ್ಬಂದಿಗೂ ಈ ಕುರಿತು ತರಬೇತಿ ನೀಡಬೇಕು ಎಂದರು.
ಅಲಯನ್ಸ್ ವಿಶ್ವವಿದ್ಯಾಲಯದ ಡಾ.ತೋಸೇಂದ್ರ ದ್ವಿವೇದಿ ಮಾತನಾಡಿ ನಾವು ಜೀವನದಲ್ಲಿ ಬೇಕಿಲ್ಲದ ಪ್ರಮುಖವಲ್ಲದ ವಿಷಯಗಳ ಕುರಿತು ಚಿಂತಿಸುತ್ತೇವೆ. ಕೆಲವರಿಗೆ ಕೆಲಸ ಸ್ಥಳಗಳು, ಕುಟುಂಬ ನಿರ್ವಹಣೆಯಲ್ಲಿ ಒತ್ತಡ ಇರುತ್ತದ್ದಲ್ಲದೇ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಒತ್ತಡವೆನಿಸುತ್ತದೆ. ಒತ್ತಡ ನಿರ್ವಹಣೆಗೆ ವ್ಯಾಯಾಮ ಬಹಳ ಸಹಕಾರಿ. ಎಲ್ಲರನ್ನೂ ಒಗ್ಗೂಡಿಸಿ ಸಮರಸದಿಂದ ಕೆಲಸ ನಿರ್ವಹಹಿಸಿದರೆ ಒತ್ತಡ ಇರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಎಂ.ಕೆ, ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ಪ್ರಾಧ್ಯಾಪಕರಾದ ಉಮಾ ಶ್ರೀಧರ್ ಉಪಸ್ಥಿತರಿದ್ದರು.