ಎಲೆಯ ಮರೆಯ ಕಾಯಿಯಂತೆ ಸದ್ದಿಲ್ಲದೆ ಸಾಧನೆಗೈಯುತ್ತಿರುವ ರಚನಾ ಅಕಾಡೆಮಿ ನೃತ್ಯಕ್ಷೇತ್ರದಲ್ಲಿ ತನ್ನದೇ ಆದ ಹಲವು ಸೃಜನಾತ್ಮಕ ಪ್ರಯೋಗಗಳಿಂದ ಗಮನ ಸೆಳೆಯುತ್ತಿರುವ ನಾಟ್ಯಶಾಲೆ. ‘ರಚನಾ ಅಕಾಡೆಮಿ’ ಪ್ರತಿವರ್ಷ ಒಂದಲ್ಲ ಒಂದು ಹೊಸ ಚಟುವಟಿಕೆಗಳಿಂದ ಸಕ್ರಿಯವಾಗಿದೆ.
‘ನಾಟ್ಯ ಮಯೂರಿ’ ಬಿರುದಾಂಕಿತೆ ಖ್ಯಾತ ನೃತ್ಯಗುರು ವಿದುಷಿ ಕಾವ್ಯ ದಿಲೀಪ್ ಈ ಸಂಸ್ಥೆಯನ್ನು ಬಹು ಆಸಕ್ತಿಯಿಂದ ಮುನ್ನಡೆಸುತ್ತ ನೂರಾರು ನೃತ್ಯಾಕಾಂಕ್ಷಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಕಾವ್ಯ, ತಮ್ಮ ಮನೋಜ್ಞ ಅಭಿನಯದಿಂದ ಕಲಾರಸಿಕರನ್ನು ಮಂತ್ರ ಮುಗ್ಧಗೊಳಿಸುವ ಭರತನಾಟ್ಯ ಹಾಗೂ ಕೂಚಿಪುಡಿ ಉಭಯಶೈಲಿಗಳ ಉತ್ತಮ ನೃತ್ಯಕಲಾವಿದೆ. ಇದುವರೆಗೂ ಇವರು ಅನೇಕ ಪ್ರತಿಷ್ಟಿತ ವಿವಿಧ ವೇದಿಕೆಗಳಲ್ಲಿ ತಮ್ಮ ನೃತ್ಯಪ್ರತಿಭೆಯನ್ನು ಅನಾವರಣಗೊಳಿಸಿರುವ ಬಹುಮುಖ ಪ್ರತಿಭೆ. ಕಳೆದ ಏಳು ವರ್ಷಗಳಿಂದ ರಾಜಾಜಿನಗರ, ಶೆಟ್ಟಿಹಳ್ಳಿ ಮತ್ತು ಪ್ರಶಾಂತನಗರದಲ್ಲಿರುವ ತಮ್ಮ ‘ರಚನಾ ನೃತ್ಯ ಅಕಾಡೆಮಿ’ ಮೂಲಕ ಕಲಾಸೇವೆ ಮಾಡುತ್ತಿದ್ದಾರೆ.
ರಚನಾ ನೃತ್ಯ ಸಂಸ್ಥೆಯಲ್ಲಿ ಹಿರಿ-ಕಿರಿಯ ಎಲ್ಲ ನೃತ್ಯಾಕಾಂಕ್ಷಿಗಳಿಗೂ ಸಮಾನ ಆದ್ಯತೆ-ಪ್ರೋತ್ಸಾಹ. ಇವರಲ್ಲಿ ಅನೇಕರು ಕರ್ನಾಟಕ ಸರ್ಕಾರ ನಡೆಸುವ ಭರತನಾಟ್ಯದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ಜಯಶೀಲರಾಗಿ, ಗಂಧರ್ವ ಮಹಾವಿದ್ಯಾಲಯದ ಪರೀಕ್ಷೆಗಳಲ್ಲೂ ಡಿಸ್ಟಿಂಕ್ಷನ್ ಪಡೆದಿರುವುದು ವಿಶೇಷ. ನಾಡಿನ ಅನೇಕ ನೃತ್ಯೋತ್ಸವದ ವೇದಿಕೆಗಳಲ್ಲಿ, ಪ್ರಮುಖ ದೇವಾಲಯಗಳಲ್ಲಿ ಇವರ ಶಿಷ್ಯರ ವೈವಿಧ್ಯಪೂರ್ಣ ನೃತ್ಯಪ್ರದರ್ಶನಗಳು ನಡೆದಿದ್ದು, ಮೆಚ್ಚುಗೆ ಪಡೆದಿವೆ ಹಾಗೂ ಅನೇಕ ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿರುವುದು ಗಮನಾರ್ಹ ಸಂಗತಿ. ಜಾನಪದ ನೃತ್ಯಗಳಲ್ಲೂ ‘ಸೈ’ ಎನಿಸಿಕೊಂಡ ಇವರ ತಂಡದ ವೈವಿಧ್ಯಪೂರ್ಣ ಆಕರ್ಷಕ ನೃತ್ಯವನ್ನು ನೋಡಿಯೇ ಆಸ್ವಾದಿಸಬೇಕು. ವಿ. ಕಾವ್ಯ ದಿಲೀಪ್ ಈಗಾಗಲೇ ತಮ್ಮ ಕೆಲವು ಶಿಷ್ಯೆಯರ ರಂಗಪ್ರವೇಶಗಳನ್ನೂ ನೆರವೇರಿಸಿದ್ದಾರೆ.
ಪ್ರತಿವರ್ಷ ವಿಜ್ರುಂಭಣೆಯಿಂದ ‘ನೂಪುರ ನಿರಂತರ’ ವಾರ್ಷಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವುದು ರಚನಾ ನೃತ್ಯ ಆಕಾಡೆಮಿಯ ವಾಡಿಕೆ. ಅದರಂತೆ ಇದೇ ತಿಂಗಳ 23 ಭಾನುವಾರ ಸಂಜೆ 4.30 ಗಂಟೆಗೆ ಮಲ್ಲೇಶ್ವರದ ‘ಸೇವಾಸದನ’ದ ಆಡಿಟೋರಿಯಂ ನಲ್ಲಿ ‘ನೂಪುರ ನಿರಂತರ-5 ’ ಶೀರ್ಷಿಕೆಯ ವಾರ್ಷಿಕೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಶೈಲಿಗಳ ಸುಮನೋಹರ ನೃತ್ಯಾರ್ಪಣೆ ನಡೆಯಲಿದೆ. ವರ್ಣರಂಜಿತ ಈ ಸುಮನೋಹರ ನೃತ್ಯಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಕಾರ್ಯಕ್ರಮದಲ್ಲಿ- ಲೇಖಕಿ, ರಂಗಕರ್ಮಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ ಲಿಪಿಪ್ರಾಜ್ಞೆ ವೈ.ಕೆ.ಸಂಧ್ಯಾ ಶರ್ಮ,ಮತ್ತು ಕಲಾ ಸಂಕುಲದ ನಿರ್ದೇಶಕಿ ಡಾ. ಪೂರ್ಣಾ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.