ಬೆಂಗಳೂರು ; ಇಂಡಿಯನ್ ಸೋಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ನಿಂದ ಸೆಲ್ಯೂಲ ಸಹಯೋಗದಲ್ಲಿ “ರನ್4ರೀಸರ್ಚ್” ಓಟ ಆಯೋಜಿಸಲಾಗಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಎಚ್.ಎಸ್.ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ 5 ಮತ್ತು 10 ಕಿಲೋಮೀಟರ್ ಓಟದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಿದ್ದರು.
ಆರೋಗ್ಯಕ್ಕಾಗಿ ಸಂಶೋಧನೆ, ಹೊಸ ಅನ್ವೇಷಣೆ ಕುರಿತು ಜನ ಜಾಗೃತಿ ಮೂಡಿಸುವ ಸಂದೇಶಗಳನ್ನು ಹೊತ್ತು ಓಟದಲ್ಲಿ ಭಾಗವಹಿಸಿದ್ದರು. ಇಂಡಿಯನ್ ಕ್ಲಿನಿಕಲ್ ರೀಸರ್ಚ್ ನೈತಿಕ ಮತ್ತು ಉನ್ನತ ಮಟ್ಟದ, ವೈಜ್ಞಾನಿಕ ಕ್ಲಿನಿಕಲ್ ಸಂಶೋಧನೆಗೆ ಒತ್ತು ನೀಡುವ ಮಹತ್ವದ ಸಂಸ್ಥೆಯಾಗಿದೆ.
ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಸಂಸ್ಥೆಯ ಅಧ್ಯಕ್ಷ ಡಾ. ಸನೀಶ್ ಡೇವಿಸ್ ಮಾತನಾಡಿ, ಕ್ಲಿನಿಕಲ್ ಸಂಶೋಧನೆಯಿಂದ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಸಂಶೋಧನೆಯನ್ನು ಉತ್ತೇಜಿಸಲು, ಹೊಸ ಔಷಧ, ಲಸಿಕೆಗಳ ಪರಿಶೋಧನೆ, ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಜೀವನ ರಕ್ಷಣೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.