ಕೃಷಿ ವಿಶ್ವವಿದ್ಯಾನಿಲಯ-ಬೆಂಗಳೂರಿನಲ್ಲಿ ವಿದೇಶಿ ಶಿಕ್ಷಣ

varthajala
0

 ಬೆಂಗಳೂರುಮೇ 25 (ಕರ್ನಾಟಕ ವಾರ್ತೆ) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಹಯೋಗವನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ವು ನಿಯಮಾವಳಿ 2023  ಪ್ರಕಾರ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಶೈಕ್ಷಣಿಕ ಸಹಯೋಗವು ಅವಳಿ, ಜಂಟಿ ಪದವಿ ಮತ್ತು ಉಭಯ ಪದವಿ ಕಾರ್ಯಕ್ರಮಗಳನ್ನು (Twinning, Joint Degree and Dual Degree Programmes) ನೀಡುವ ಉದ್ದೇಶವನ್ನು ಹೊಂದಿದೆ.  ನಿಟ್ಟಿನಲ್ಲಿ ಭಾರತದಲ್ಲಿ ಗುರುತರವಾದಂತಹ ಶೈಕ್ಷಣಿಕ ಹಾಗೂ ಸಂಶೋಧನೆಯನ್ನು ಹೊಂದಿರುವ ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿ, ಅಂತಹ ವಿಶ್ವವಿದ್ಯಾನಿಲಯಗಳು ಹೊರ ದೇಶದ ಇತರೆ ವಿಶ್ವವಿದ್ಯಾನಿಲಯಗಳೊಂದಿಗೆ ಜಂಟಿಯಾಗಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳವ ಉದ್ದೇಶದಿಂದ ಭಾರತ ದೇಶದಾದ್ಯಂತ 234 ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿದೆ.

 ಅವುಗಳಲ್ಲಿ ಕರ್ನಾಟಕದಿಂದ 12 ಖಾಸಗಿ ವಿಶ್ವವಿದ್ಯಾನಿಲಯಗಳು ಹಾಗೂ 9 ಸರ್ಕಾರಿ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿದೆ. 9 ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವೂ ಸಹ ಸ್ಥಾನವನ್ನು ಪಡೆದಿದ್ದು ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣಕ್ಕೆ ನೀಡಿರುವ ಉತ್ಕೃಷ್ಠವಾದ ಕೊಡುಗೆಯಾಗಿದೆ. ಮತ್ತೊಂದು ವಿಶಿಷ್ಠತೆಯೆಂದರೆ ಇಡೀ ದೇಶದಲ್ಲಿ 4 ಕೃಷಿ ವಿಶ್ವವಿದ್ಯಾನಿಲಯಗಳು ಮಾತ್ರ  ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಅದರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವೂ ಒಂದಾಗಿದೆ ಹಾಗೂ ಕರ್ನಾಟಕದಲ್ಲಿ ಸ್ಥಾನ ಪಡೆದಿರುವ ಏಕೈಕ ಕೃಷಿ ವಿಶ್ವವಿದ್ಯಾನಿಲಯವೆಂಬ ಹೆಗ್ಗಳಿಕೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪಾತ್ರವಾಗಿದೆ.

 ಭಾರತದ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ವಿನಿಮಯ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕಲಿಕೆಯ ಅರ್ಧಭಾಗವನ್ನು ಭಾರತದಲ್ಲಿ ಕೈಗೊಂಡು ಇನ್ನುಳಿದ ಅರ್ಧಭಾಗವನ್ನು ವಿದೇಶದಲ್ಲಿ ಪೂರ್ಣಗೊಳಿಸಬಹುದು. ಒಂದೇ ವಿಷಯದಲ್ಲಿ ವಿದೇಶಿ ಹಾಗೂ ಭಾರತದ ವಿವಿಗಳು ಜಂಟಿ ಪದವಿ ನೀಡಬಹುದು ಅಥವಾ ಪ್ರತ್ಯೇಕವಾಗಿ ಪದವಿ ಪ್ರಮಾಣ ಪತ್ರವನ್ನು ನೀಡಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ವ್ಯಾಸಂಗ ಮಾಡುವುದು ತಪ್ಪುತ್ತದೆ ಅಥವಾ ಭಾರತದಲ್ಲೇ ಪ್ರವೇಶ ಪಡೆದು ವಿದೇಶದಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0Comments

Post a Comment (0)