ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ

varthajala
0

 ಬೊಜ್ಜಿನ ಸಮಸ್ಯೆ… ಆಧುನಿಕ ಯುಗದಲ್ಲಿ ಎಲ್ಲರನ್ನು ಬೆಂಬಿಡದೆ ಕಾಡುತ್ತಿರುವ ಅತಿದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಬೊಜ್ಜು ದೇಹದ ಆಕಾರದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಸಂಪೂರ್ಣ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾದಾಗ ಬೊಜ್ಜು ಬರುತ್ತದೆ. ಇದನ್ನು BMI ಯಿಂದ ಅಳೆಯಲಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಜೀರ್ಣಕ್ರಿಯೆಗೆ ಕರುಳಿನ ಆರೋಗ್ಯವೇ ಪ್ರಧಾನ. ಇದು ಜಠರದಲ್ಲಿ ಬ್ಯಾಕ್ಟೀರಿಯಾ, ಕಿಣ್ವಗಳು, ಸೂಕ್ಷ್ಮಜೀವಿಗಳ ಸಮತೋಲಿತ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕರುಳು ಆರೋಗ್ಯವಾಗಿದ್ದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ನ್ಯೂಟ್ರೀಷನಿಸ್ಟ್ ಕನ್ಸಲ್ಟೆಂಟ್ ಡಾ. ಸಂಜನಾ ಪ್ರೇಮ್‌ಲಾಲ್ ತಿಳಿಸಿದರು.

ಮಾನವನ ದೇಹವು ಸಂಪೂರ್ಣವಾಗಿ ಆರೋಗ್ಯವಾಗಿರಬೇಕು ಎಂದರೆ ಜೀರ್ಣಕ್ರಿಯೆ ಹಾಗೂ ತೂಕದ ನಡುವಿನ ಸಂಬಂಧ ಮುಖ್ಯವಾಗಿದೆ. ಕರುಳಿನ ಮೈಕ್ರೋಬಯೋಟಾದಲ್ಲಿನ ಅಸಮತೋಲನವೇ ತೂಕ ಹೆಚ್ಚಾಗಲು ಮತ್ತು ಜೀರ್ಣಕ್ರಿಯೆ ಅಸ್ವಸ್ಥತೆಗೆ ಕಾರಣವಾಗಿರುತ್ತದೆ. ಅಷ್ಟೇ ಅಲ್ಲದೆ ತೂಕ ನಿರ್ವಹಣೆಗೆ ಅಡೆತಡೆ ಉಂಟುಮಾಡುತ್ತದೆ. ಹೆಚ್ಚಿನ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವುದಾದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ಹಸಿವು ನಿಯಂತ್ರಿಸುವುದು, ಉರಿಯೂತ, ಚಯಾಪಚಯ ಹಾಗೂ ಹಾರ್ಮೋನ್‌ಗಳ ಅಸಮತೋಲನ ವಿಷಯಗಳಲ್ಲಿ ಕರುಳಿನ ಆರೋಗ್ಯ ಹೇಗಿದೆ ಎಂಬುದನ್ನು ಗುರುತಿಸಬೇಕು. ಇವುಗಳು ಪರಿಣಾಮಕಾರಿ ತೂಕ ನಿರ್ವಹಣೆಗೆ ಸಹಕಾರಿಯಾಗುತ್ತದೆ.

 
ಅಶಿಸ್ತಿನ ಆಹಾರ ಕ್ರಮ, ಔಷಧಿಗಳ ಅತಿಯಾದ ಬಳಕೆ ಮತ್ತು ಒತ್ತಡದಿಂದ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದು ತೂಕ ಹೆಚ್ಚಳಕ್ಕೆ ಹಾಗೂ ಬೊಜ್ಜಿನ ಸಮಸ್ಯೆಗೆ ಕಾರಣವಾಗಬಹುದು. ಈ ಲೇಖನದಲ್ಲಿ ತಿಳಿಸಿರುವ ಸೂತ್ರಗಳನ್ನು ಅನುಸರಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ಆರೋಗ್ಯಕರವಾದ ತೂಕವನ್ನು ಹೊಂದಲು ಅನುಕೂಲವಾಗಲಿದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದ್ದಾರೆ.

ಆರೋಗ್ಯಕರ ಜೀರ್ಣಕ್ರಿಯೆಗೆ ಏನು ಮಾಡಬೇಕು ?

ಹೆಚ್ಚು ಸಸ್ಯಹಾರ ಸೇವನೆ:  ಹಣ್ಣು, ತರಕಾರಿ, ದವಸ ಹಾಗೂ ಧಾನ್ಯಗಳನ್ನು ಸೇವಿಸಿದರೆ, ಅವುಗಳಲ್ಲಿ ರೋಗನಿರೋಧಕ ಶಕ್ತಿ ಹಾಗೂ ಫೈಬರ್ ಸಮೃದ್ಧವಾಗಿರುತ್ತದೆ, ಇದರಿಂದ ಜೀರ್ಣಕ್ರಿಯೆ ಸುಲಭವಾಗಿರುತ್ತದೆ.
ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್ ಆಹಾರ ಸೇವನೆ : ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗಾಗಿ ಜೆರುಸಲೇಮ್ ಆರ್ಟಿಚೋಕ್ಸ್, ಶತಾವರಿ, ಹಾಗೂ ಕಿಮ್ಚಿ & ಸೌರ್ಕ್ರಾಟ್‌ನಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಹೈಡ್ರೇಟೆಡ್ ಆಗಿರುವುದು : ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ತಡೆಯುವುದರ ಜೊತೆಗೆ ಕರುಳಿನ ಒಳಪದರದ ಆರೋಗ್ಯವನ್ನು ಕಾಪಾಡುತ್ತದೆ.
ಆಹಾರವನ್ನು ಜಗಿದು ತಿನ್ನುವುದು : ಉತ್ತಮ ಜೀರ್ಣಕ್ರಿಯೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹಾಗೂ ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಬೇಕು.
ಉತ್ತಮ ನಿದ್ರೆ : ಹಾರ್ಮೋನ್ ಸಮತೋಲನ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಹೀಗಾಗಿ ಪ್ರತಿದಿನ ರಾತ್ರಿ ಗುಣಮಟ್ಟದ ನಿದ್ರೆಯನ್ನು ಮಾಡಬೇಕು.
ವ್ಯಾಯಾಮ : ದೈಹಿಕ ಚಟುವಟಿಕೆಯು ಜೀರ್ಣಕ್ರಿಯೆಯನ್ನು  ಉತ್ತಮಗೊಳಿಸುತ್ತದೆ. ಹೀಗಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು.  
ಉತ್ತಮ ಅಡುಗೆ ಎಣ್ಣೆ ಬಳಸಿ: ಉತ್ತಮ ಆರೋಗ್ಯಕ್ಕಾಗಿ ವರ್ಜಿನ್ ಆಲಿವ್ ಎಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಉರಿಯೂತ ಕಡಿಮೆಯಾಗುತ್ತದೆ.
ಸರಿಯಾದ ಸಮಯಕ್ಕೆ ತಿನ್ನಿ: ಜೀರ್ಣಕ್ರಿಯೆ ಉತ್ತಮವಾಗಿರಲು ಪ್ರತಿ ಊಟದ ನಡುವೆ 3 ರಿಂದ 4 ಗಂಟೆಗಳ ಅಂತರವಿರಲಿ. ಇದರಿಂದ ಹೊಟ್ಟೆ ಉಬ್ಬರಿಕೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬರುವುದಿಲ್ಲ.
ಒತ್ತಡ ನಿರ್ವಹಣೆ : ಒತ್ತಡವನ್ನು ನಿರ್ವಹಿಸಲು ಧ್ಯಾನ, ಯೋಗ ಮಾಡುವುದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ಕರುಳು ಆರೋಗ್ಯವಾಗಿರಲು ಈ ಕೆಲಸಗಳನ್ನು ಮಾಡದಿರಿ:

ಒಂದೇ ತರಹದ ಆಹಾರ ಸೇವನೆ: ಪ್ರತಿನಿತ್ಯ ಒಂದೇ ತರಹದ ಆಹಾರ ಸೇವನೆಯನ್ನು ಮಾಡದಿರುವುದು ಒಳಿತು. ಈ ರೀತಿ ಮಾಡುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಹೀಗಾಗಿ ಹಣ್ಣು, ತರಕಾರಿ, ದವಸ ಹಾಗೂ ಸಿರಿಧಾನ್ಯಗಳ ಸೇವನೆಯಿಂದ ಕರುಳಿನ ಆರೋಗ್ಯಕ್ಕೆ ಅನುಕೂಲವಾಗಲಿದೆ.
ಸಂಸ್ಕರಿಸಿದ ಆಹಾರ ಸೇವನೆ: ಸಂಸ್ಕರಿಸಿದ ಆಹಾರ ಸೇವನೆ‌ ಒಳ್ಳೆಯದಲ್ಲ. ಇದರಿಂದ ಪೋಷಕಾಂಶಗಳ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಬೇಳೆ ಕಾಳುಗಳು, ದವಸಧಾನ್ಯಗಳು, ಹೆಚ್ಚು ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಕು.
ಹೆಚ್ಚು ಆಹಾರ ಸೇವನೆ : ಹೆಚ್ಚು ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಅಗತ್ಯ ಹಾಗೂ ಉತ್ತಮ ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು. ಜೊತೆಗೆ ಹಸಿವಾದಾಗ ಮಾತ್ರ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಕೃತಕ ಸಿಹಿ ಪದಾರ್ಥಗಳ ಸೇವನೆ : ಕೃತಕ ಸಿಹಿ ಪದಾರ್ಥಗಳ ಸೇವನೆಯಿಂದ ಕರುಳಿನ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಜ್ಯೂಸ್ ಹಾಗೂ ತಾಜಾ ಹಣ್ಣುಗಳನ್ನು ಸೇವಿಸುವುದು ಒಳಿತು.
ಉರಿಯೂತವನ್ನುಂಟು ಮಾಡುವ ಅಡುಗೆ ಎಣ್ಣೆ ಬಳಕೆ ನಿಷೇಧ : ಕ್ಯಾನೋಲ, ಕಡಲೆಕಾಯಿ ಮತ್ತು ಸೂರ್ಯಕಾಂತಿಯಂತಹ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ. ಇವುಗಳಿಂದ ಉರಿಯೂತ ಉಂಟಾಗುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ. ಉತ್ತಮ ಕರುಳಿನ ಆರೋಗ್ಯಕ್ಕಾಗಿ ಸಂಪೂರ್ಣವಾಗಿ ಸಂಸ್ಕರಿಸದ ಸಸ್ಯ ಆಧಾರಿತ ಆಹಾರಗಳನ್ನು ಹೆಚ್ಚು ಬಳಸಿ.
ದೈಹಿಕ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ   ಆರೋಗ್ಯಕ್ಕಾಗಿ ವ್ಯಾಯಾಮ, ಒತ್ತಡ ನಿರ್ವಹಣೆ ಹಾಗೂ ಸ್ವಯಂ ಆರೈಕೆಗೆ ಸಮಯ ಮೀಸಲಿಡಬೇಕು.

ಬೊಜ್ಜು ನಿವಾರಿಸಲು ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ವ್ಯಾಯಾಮ ಮಾಡುವುದು ಪ್ರಮುಖ ಸೂತ್ರ. ಉತ್ತಮ ಆಹಾರ ಪದ್ದತಿ, ಸ್ಥಿರವಾದ ದೈಹಿಕ ಚಟುವಟಿಕೆ, ಸರಿಯಾದ ನಿದ್ರೆ, ಒತ್ತಡ ನಿರ್ವಹಣೆ, ತೂಕ ನಿಯಂತ್ರಣ ಕೂಡ ಅತ್ಯಗತ್ಯವಾಗಿರುತ್ತದೆ. ಸಣ್ಣ ಬದಲಾವಣೆಗಳು ಸಹ ಕರುಳಿನ ಆರೋಗ್ಯ ಹಾಗೂ ತೂಕ ನಿರ್ವಹಣೆಯಲ್ಲಿ ದೀರ್ಘಕಾಲದ ಯಶಸ್ಸನ್ನು ನೀಡುತ್ತದೆ ಎಂದು ತಜ್ಞೆ ಸಂಜನಾ ಪ್ರೇಮ್‌ಲಾಲ್‌ ಸಲಹೆಗಳನ್ನು ನೀಡಿದ್ದಾರೆ.

Post a Comment

0Comments

Post a Comment (0)