ಬೆಂಗಳೂರು: ಇತ್ತೀಚೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಲ್ಲಿನ ಕನ್ನಡಿಗರು ಮತ್ತು ಕನ್ನಡ ಸಂಸ್ಥೆಗಳನ್ನು ಭೇಟಿ ಮಾಡಿ ಅವರೆಲ್ಲರನ್ನೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ, ಇದರ ಜೊತೆಗೆ ಕೆಲವು ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗ ಬಲ್ಲ ಸಂಪರ್ಕಗಳನ್ನೂ ಸಾಧಿಸಿದ್ದಾರೆ.
ಇವುಗಳ ಪೈಕಿ ಬಹಳ ಮುಖ್ಯವಾದದ್ದು ಚಿಕಾಗೋ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಚಿಕಾಗೋ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಚಟುವಟಿಕೆಗಳನ್ನು ನಡೆಸುವ ಕುರಿತು ಅಲ್ಲಿನ ಜವಾಬ್ದಾರಿ ಹುದ್ದೆಯಲ್ಲಿರುವ ಪ್ರಾಧ್ಯಾಪಕರುಗಳಾದ ಪ್ರೊ. ಜೇಮ್ಸ್ ನೇ, ಪ್ರೊ. ಸಾರಾ ಟೇಲರ್, ಪ್ರೊ. ಕೇಟ್ ಮೂರೆ, ಪ್ರೊ. ಆಂಡ್ರಿ ಓಲೆಟ್ ಅವರ ಜೊತೆಗೆ ವಿಶೇಷ ಚರ್ಚೆ ಮಾಡಿದ್ದು, ಇದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗಬಲ್ಲದಾಗಿದೆ. 1890ರಲ್ಲಿ ಸ್ಥಾಪಿತವಾದ ಚಿಕಾಗೋ ವಿಶ್ವವಿದ್ಯಾಲಯ ವಿಶ್ವದ ಹತ್ತು ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಈ ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಾದ ಡಾ. ಎ.ಕೆ.ರಾಮಾನುಜನ್ ಮೂವತ್ತಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದನ್ನು, ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠದ ನಿರ್ದೇಶಕರಾಗಿ ಮಹತ್ವದ ಕೊಡುಗೆಗಳನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಚಿಕಾಗೋ ವಿಶ್ವವಿದ್ಯಾಲಯವು ಕರ್ನಾಟಕದ ವಿದ್ಯಾರ್ಥಿಗಳು ಪಿಎಚ್.ಡಿ ಪದವಿಗೆ ವಿಶೇಷ ಅಧ್ಯಯನ ಮಾಡಲು ಅವಕಾಶ ನೀಡುವುದು ಮತ್ತು ಇದರ ನಿರ್ವಹಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬಹುದು ಎನ್ನುವ ಕುರಿತು ಚರ್ಚೆಗಳಾಗಿವೆ. ಈಗಾಗಲೇ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ಪ ರಮೇಶ್ವರ ಹೆಗಡೆಯವರ ಮಗಳು ವಾಸ್ತು ತಂತ್ರಜ್ಞಾನವನ್ನು ಅಧ್ಯಯನ ಮಾಡಿರುವ ವಾಣಿ ವಿಘ್ನೇಶ್ ‘ಪುರಂದರ ದಾಸರ ಕೀರ್ತನೆಗಳಲ್ಲಿ ಶಿಲ್ಪಶಾಸ್ತ್ರ’ ಎನ್ನುವ ವಿಷಯದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ನಡೆಸುತ್ತಿದ್ದು ಇಂತಹ ಇನ್ನಷ್ಟು ಪ್ರಯತ್ನಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಸೆಯಾಗಿ ನಿಲ್ಲಲಿದೆ. ಆಸಕ್ತ ಕನ್ನಡ ಸಂಶೋಧಕರ ಇಂತಹ ಪ್ರಯತ್ನಗಳು ಕನ್ನಡದ ಹೆಗ್ಗಳಿಕೆಯನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲಿವೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ವಿವಿಧೆಡೆ ಸಹಯೋಗದಲ್ಲಿ ವಿಚಾರಗೋಷ್ಟಿ, ಕಮ್ಮಟಗಳನ್ನು ಚಿಕಾಗೋ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಲು ಸಾಧ್ಯವಾಗುವ ಕುರಿತು ಚರ್ಚೆಗಳು ಈ ಸಂದರ್ಭದಲ್ಲಿ ನಡೆದಿವೆ. ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳ ಕುರಿತು ವಿಶೇಷ ಚಿಂತನ-ಮಂಥನ ನಡೆಸಲು ಅದನ್ನು ಬೇರೆ ಭಾಷೆಗಳಿಗೆ ಅನುವಾದಿಸಲು ಚಿಕಾಗೋ ವಿಶ್ವವಿದ್ಯಾಲಯ ನೆರವಾಗಬಹುದಾದ ಸಾಧ್ಯತೆಯನ್ನೂ ಚರ್ಚಿಸಲಾಗಿದ್ದು ಇದು ಸಾಧ್ಯವಾದರೆ ಈ ಮೂಲಕ ಕನ್ನಡ ಜಾಗತಿಕ ಮನ್ನಣೆಯನ್ನು ಪಡೆಯುವುದು ಸಾಧ್ಯವಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳು ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ವಿಶೇಷವಾಗಿ ಪ್ರದರ್ಶಿತವಾಗುವ ಮತ್ತು ಅಧ್ಯಯನಕ್ಕೆ ಲಭ್ಯವಾಗುವ ಕುರಿತೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚಿಕಾಗೋ ವಿಶ್ವವಿದ್ಯಾಲಯದ ಭೇಟಿಯ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಿಕಾಗೋ ಘಟಕದ ಸಮನ್ವಯಾಧಿಕಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾದ ಎಚ್.ವಿ. ನಂಜುಂಡಯ್ಯನವರ ವಂಶಸ್ಥರಾದ ಡಾ. ರವಿ ಆರೋಡಿಯವರು ಸಹಯೋಗ ನೀಡಿದ್ದರು. ಎನ್.ಎಸ್. ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು