ಬೆಂಗಳೂರು: 2023ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಚಾವುಂಡ ರಾಯ ದತ್ತಿ` ಪ್ರಶಸ್ತಿಗೆ ಹಿರಿಯ ಲೇಖಕಿ ಡಾ.ಪ್ರೀತಿ ಶುಭಚಂದ್ರ ಆಯ್ಕೆಯಾಗಿದ್ದಾರೆ. ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿದ ಪ್ರಬಂಧ, ಸಂಶೋಧನೆ, ವಿಮರ್ಶೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಪ್ರಕಾರಗಳ ಲೇಖಕರಿಗೆ ಅಥವಾ ಗ್ರಂಥ ಸಂಪಾದಕರಿಗೆ ಈ ಪ್ರಶಸ್ತಿಯನ್ನು ನೀಡ ಬೇಕು ಎನ್ನುವುದು ದತ್ತಿಯ ಆಶಯವಾಗಿದೆ.
ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾ ವಾದಿಯಾಗಿ ಹೆಸರನ್ನು ಮಾಡಿರುವ ಡಾ. ಪ್ರೀತಿ ಶುಭಚಂದ್ರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾದ ಹೆಗ್ಗಳಿಕೆ ಅವರದು. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಪ್ರಧಾನ ಆಸಕ್ತಿಯ ವಿಷಯಗಳು. ‘ಇಪ್ಪತ್ತನೆಯ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ’ ಅವರ ಪಿಎಚ್.ಡಿ ಮಹಾ ಪ್ರಬಂಧ. ಸ್ತ್ರೀವಾದದ ಕುರಿತೂ ಅವರು ಸಾಕಷ್ಟು ಅಧ್ಯಯನವನ್ನು ನಡೆಸಿದ್ದಾರೆ.
ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ದತ್ತಿದಾನಿಗಳ ಪರವಾಗಿ ಡಾ. ಪದ್ಮರಾಜ ದಂಡಾವತಿಯವರು ಭಾಗವಹಿಸಿದ್ದರು. ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರೀತಿ ಶುಭಚಂದ್ರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ ಮತ್ತು ಅವರ ಸಾಧನೆಯ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ