ಡಾ.ಹಿ.ಶಿ.ರಾಮಚಂದ್ರೇಗೌಡ ಮತ್ತು ಡಾ.ಬಿ.ಎನ್.ಸುಮಿತ್ರಾ ಬಾಯಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ ಗೌರವ ಪ್ರಶಸ್ತಿ’

varthajala
0

 ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಗೆ ಮೈಸೂರಿನ ಹಿರಿಯ ಜನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಮತ್ತು ಬೆಂಗಳೂರಿನ ಚಿಂತಕಿ ಮತ್ತು ವಿಮರ್ಶಕಿ ಡಾ.ಬಿ.ಎನ್.ಸುಮಿತ್ರಾ ಬಾಯಿಯವರನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ.ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧ್ಯಕ್ಷರಿಗೆ ನೀಡುವ ಗೌರವ ಧನವನ್ನು ಸ್ವೀಕರಿಸದೆ ಆ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ಇರಿಸಿ, ಕನ್ನಡ ನಾಡು-ನುಡಿಗೆ ಮಹತ್ವದ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಯನ್ನು ನೀಡಲೆಂದು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. 

ಹಾಸನ ಜಿಲ್ಲೆಯ ರಂಗನಾಥ ಪುರದಲ್ಲಿ ಜನಿಸಿದ ಡಾ.ಹಿ.ಶಿ.ರಾಮಚಂದ್ರೇಗೌಡರು, ಕೇರಳದಲ್ಲಿ ಜನಪದ ಅಧ್ಯಯನವನ್ನು ಮಾಡಿ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ‘ಕನ್ನಡ ಜನಪದ ಕಥಾವರ್ಗಗಳು’ ಎನ್ನುವ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿರುವ ಇವರು ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷರಾಗಿ (2001-03) ಕರ್ನಾಟಕ ಜನಪದ ಸಮಗ್ರ ಸಾಹಿತ್ಯ ಸಂಪುಟ’ದ ಪ್ರಕಟಣಾ ಸಮಿತಿ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಜನಪದ ಸಾಹಿತ್ಯಕ್ಕೆ ಇವರು ನೀಡಿರುವ ಮೌಲಿಕ ಕೊಡುಗೆಗಳನ್ನು ಗಮನಿಸಿ ಈ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮೈಸೂರಿನಲ್ಲಿ ಜನಿಸಿದ ಡಾ.ಬಿ.ಎನ್.ಸುಮಿತ್ರಾ ಬಾಯಿಯವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು. ಹಾಸನದ ಎ.ವಿ.ಕಾಂತಮ್ಮ ಮತ್ತು ಬೆಂಗಳೂರಿನ ಎ.ಪಿ.ಎಸ್.ವಾಣಿಜ್ಯ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾ ಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯನ್ನು ಪಡೆದರು. ಸಮತಾ ವೇದಿಕೆ, ಜಾಗೃತಿ ಮಹಿಳಾ ಅಧ್ಯ ಯನ ಕೇಂದ್ರ, ಅಚಲ ಬಳಗದ ಮೂಲಕ ಮಹಿಳಾ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿ ಕೊಂಡ ಸುಮಿತ್ರಾ ಬಾಯಿಯವರು ಸ್ತ್ರೀವಾದಿ ಚಿಂತನೆಗೆ ಹೊಸ ನೆಲೆಗಳನ್ನು ಕಲ್ಪಿಸಿದರು, ಭರತನ ನಾಟ್ಯ ಶಾಸ್ತ್ರವನ್ನು ಮಹಿಳಾ ನೆಲೆಯಿಂದ ನೋಡಿದ ವಿಶಿಷ್ಟ ಅಧ್ಯಯನವನ್ನು ಅವರು ನಡೆಸಿದ್ದಾರೆ ಮಹಿಳಾ ಸಾಹಿತ್ಯದ ಅಧ್ಯಯನಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ದತ್ತಿ ದಾನಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ್ ಮತ್ತು ವಿಷಯ ತಜ್ಞರಾಗಿ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಅವರು ಭಾಗವಹಿಸಿದ್ದರು.  ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಹಿ.ಶಿ.ರಾಮಚಂದ್ರೇಗೌಡ ಮತ್ತು ಡಾ.ಬಿ.ಎನ್.ಸುಮಿತ್ರಾ ಬಾಯಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ ಮತ್ತು ಅವರ ಸಾಧನೆಯ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಎನ್.ಎಸ್.ಶ್ರೀಧರ ಮೂರ್ತಿ, ಸಂಚಾಲಕರು, ಪ್ರಕಟಣಾ ವಿಭಾಗ.

Post a Comment

0Comments

Post a Comment (0)