ಮೇ 12 ವಿಶ್ವ ತಾಯಂದಿರ ದಿನಾಚರಣೆ.. ಅಮ್ಮ, ಅವ್ವ, ಅಬ್ಬೆ, ನಾನಾ ಹೆಸರುಗಳಿಂದ ಕರೆಯಲ್ಪಟ್ಟರು ಕೂಡ ತಾಯಿ ಪ್ರೀತಿ ಮಾತ್ರ ಒಂದೇ.. ಮಕ್ಕಳಿಗಾಗಿ, ಅವರ ಆರೋಗ್ಯಕ್ಕಾಗಿ, ಅವರ ಜೀವನಕ್ಕಾಗಿ ಸದಾ ಹೋರಾಡೋ ಜೀವ ಅಮ್ಮ. ವಿಶ್ವ ತಾಯಂದಿರ ದಿನಾಚರಣೆಗೆ ವಿಶೇಷ ಪ್ರಾಮುಖ್ಯತೆಯಿದೆ. ತಮ್ಮ ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಇಂದು ಕುಟುಂಬದ ಯೋಗಕ್ಷೇಮಕ್ಕಾಗಿ ತಾಯಂದಿರು ಮಾಡುವ ತ್ಯಾಗ ಹಾಗೂ ಪ್ರಯತ್ನಗಳನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುತ್ತೇವೆ. ತಾಯಂದಿರ ನಿಸ್ವಾರ್ಥ ಪ್ರೀತಿ ಹಾಗೂ ಸಮರ್ಪಣೆಯನ್ನು ಪ್ರಶಂಸಿಸಲು ಇದೊಂದು ಸುಸಂದರ್ಭವಾಗಿದೆ.
ತಾಯಂದಿರ ದಿನದ ವಿಶೇಷ ಹಿನ್ನೆಲೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಡಾ. ಶ್ರೀಜಾ ರಾಣಿ ವಿ.ಆರ್ ಅವರು ಮಾತಾನಾಡಿ, ತಮ್ಮ ಶಿಶುಗಳ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ತಾಯಂದಿರ ಪಾತ್ರ ನಿರ್ಣಾಯಕ. ಹೀಗಾಗಿ ತಾಯಿಯ ಆರೋಗ್ಯ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ತಾಯಂದಿರು ಮಾಡುವ ಸಾಮಾನ್ಯ ತಪ್ಪುಗಳು ಹಾಗೂ ಅಜಾಗರೂಕತೆ ಶಿಶುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.ತಾಯಿಯ ಪಾತ್ರವು ತನ್ನ ಮಗುವಿನ ಪೋಷಣೆ ಹಾಗೂ ಆರೈಕೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ, ಭಾವನಾತ್ಮಕ, ದೈಹಿಕ, ಸ್ವಾತಂತ್ರ್ಯ ಬೆಳವಣಿಗೆ ಸೇರಿದಂತೆ ಮಗುವಿನ ಬೆಳವಣಿಗೆಯ ವಿವಿಧ ಆಯಾಮಗಳಲ್ಲಿ ತಾಯಿಯೇ ಮೊದಲ ಶಿಕ್ಷಕಿಯಾಗಿರುತ್ತಾಳೆ. ಶಿಶುಗಳು ತಾಯಿಯ ಜೊತೆಗೆ ಆಳವಾದ ಬಾಂಧವ್ಯವನ್ನು ಹೊಂದಿರುತ್ತವೆ. ಶಿಶುಗಳ ಆರಂಭಿಕ ಹಂತದಲ್ಲಿ ತಾಯಂದಿರು ಒದಗಿಸುವ ನಿರಂತರ ಆರೈಕೆ, ಆಹಾರ, ಆಶ್ರಯ, ಶುಚಿಗೊಳಿಸುವಿಕೆ, ಬಟ್ಟೆ ತೊಡಿಸುವುದು ಹಾಗೂ ಸಾಂತ್ವನವು ಬೆಳವಣಿಗೆಯ ಪ್ರಮುಖ ಅಂಶಗಳಾಗಿವೆ. ಇವೆಲ್ಲವೂ ಹೊರ ಜಗತ್ತಿನ ಜೊತೆಗೆ ಸಂವಹನ ಸಾಮರ್ಥ್ಯವನ್ನು ರೂಪಿಸುತ್ತವೆ. ಹೀಗಾಗಿ ಶಿಶುಗಳ ಆರೋಗ್ಯ ಉತ್ತಮವಾಗಿರಬೇಕು ಎಂದರೆ ತಾಯಿಯ ಆರೋಗ್ಯ ಉತ್ತಮವಾಗಿರುವುದು ನಿರ್ಣಾಯಕವಾಗಿರುತ್ತದೆ ಎಂದು ಹೇಳಿದರು.
ಆರೋಗ್ಯಕರ ಗರ್ಭಧಾರಣೆಯೂ ಭ್ರೂಣದ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದು ಶಿಶು ಮರಣ ಹಾಗೂ ಅನಾರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯ ಯೋಗಕ್ಷೇಮ, ಆಹಾರ ಪದ್ದತಿ, ಒತ್ತಡಗಳು ಹುಟ್ಟಲಿರುವ ಮಗುವಿನ ಮೇಲೆ ಗಾಢವಾಗಿ ಪ್ರಭಾವ ಬೀರುಬಹುದು. ತಾಯಿಯ ಆರೋಗ್ಯ ಭ್ರೂಣದ ಜೊತೆಗೆ ಸಂಬಂಧ ಇರುವುದಾಗಿ ಸಂಶೋಧನೆ ಸೂಚಿಸುತ್ತದೆ ಎಂದು ಡಾ. ಶ್ರೀಜಾ ರಾಣಿ ವಿ.ಆರ್ ತಿಳಿಸಿದರು.
ಇನ್ನು ಗರ್ಭಧಾರಣೆಯ ಸಂದರ್ಭದಲ್ಲಿ ಸರಿಯಾದ ಪೋಷಣೆ ಅತ್ಯಗತ್ಯ. ಕಬ್ಬಿಣ ಹಾಗೂ ಪೋಲಿಕ್ ಆಮ್ಲದಂತಹ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು, ಆದರೆ ಅತಿಯಾಗಿ ಸೇವಿಸಬಾರದು. ಪೋಷಕಾಂಶಗಳನ್ನು ತೆಗೆದುಕೊಳ್ಳುವುದರಿಂದ ತಾಯಿ ಹಾಗೂ ಶಿಶುಗಳ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತಹೀನತೆ, ಪೆರಿನಾಟಲ್ ಮರಣ, ಅಕಾಲಿಕ ಜನನ, ಕಡಿಮೆ ತೂಕದಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ.
ಸ್ತನ್ಯಪಾನವು ತಾಯಿ ಮತ್ತು ಶಿಶುವಿನ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಅಂಶವಾಗಿದೆ. ವೈದ್ಯಕೀಯವಾಗಿ ಅಗತ್ಯವಿಲ್ಲದ ಹೊರತು ಶಿಶುಗಳಿಗೆ ಯಾವುದೇ ದ್ರವ ಆಹಾರವನ್ನು ಒದಗಿಸುವುದು ಅಗತ್ಯವಿರುವುದಿಲ್ಲ. ಅದರ ಬದಲು ತಾಯಿಯ ಎದೆಹಾಲು ಉಣಿಸುವುದು ಶಿಶುಗಳ ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ ಎಂದು ಡಾ. ಶ್ರೀಜಾ ರಾಣಿ ವಿ.ಆರ್ ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೀಡಿಯಾ ಕನೆಕ್ಟ್, 7975253201