ಸ್ವಾಭಿಮಾನಿ ಕರ್ನಾಟಕ ವೇದಿಕೆಯಿಂದ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರದಾನ-2023’ ಕಾರ್ಯಕ್ರಮವು ನಗರದ ಶೇಷಾದ್ರಿಪುರಂ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.ತೀರ್ಪುಗಾರರಾಗಿ ಉಪಸ್ಥಿತರಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೆಚ್.ಎಲ್. ಪುಷ್ಪ ಮಾತನಾಡಿ, "ಕಥಾಸಂಕಲನಗಳು, ಕವಿತೆಗಳು, ಸ್ಮೃತಿಚಿತ್ರಣ, ಜೀವನಚಿತ್ರಗಳು ಸೇರಿದಂತೆ ಬಹಳ ಉತ್ತಮವಾದ ಕೃತಿಗಳು ಸ್ಪರ್ಧೆಗೆ ಬಂದಿದ್ದವು. ನಾವು ನಮ್ಮೊಳಗಿನ ಮಿತಿಯಲ್ಲಿ ನಮಗೆ ಉತ್ತಮ ಅನ್ನಿಸಿದ್ದನ್ನು ಪಾತಣ್ಣ ಅವರ ಮಾರ್ಗದರ್ಶನದೊಂದಿಗೆ ಆಯ್ಕೆ ಮಾಡಿದ್ದೇವೆ. ಈ ಸ್ಪರ್ಧೆಯಿಂದಾಗಿ ಬಹಳಷ್ಟು ಓದದೇ ಇರುವಂತಹ ಕೃತಿಗಳನ್ನು ಓದುವ ಹಾಗೆ ಅನುಕೂಲವಾಯಿತು. ಇನ್ನು ಪತ್ರಿಕೆ ಇದ್ದರೆ ಮಾತ್ರ ಸಾಹಿತ್ಯ ಇರುವಂತಹದ್ದು. ಏಕೆಂದರೆ ಮೊದಲಿನಿಂದಲೂ ಸಾಹಿತ್ಯಿಕ ವಿಚಾರಗಳನ್ನು ಪೋಷಿಸಿಕೊಂಡು ಬರುತ್ತಿರುವುದು ಪತ್ರಿಕೆ. ಇವತ್ತು ಸಾಹಿತ್ಯ ಪತ್ರಿಕೆಗಳ ಹಾಗೂ ಸಾಮಾಜಿಕ ಜಾಲತಾಣಗಳ ಸಹಾಯದೊಂದಿಗೆ ಇನ್ನೊಂದು ದಿಕ್ಕಿಗೆ ಬೆಳೆಯುವುದನ್ನು ಕೂಡ ಗಮನಿಸಬಹುದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಡಾ.ಹೆಚ್.ಎಸ್.ಎಂ. ಪ್ರಕಾಶ್ ಅವರ ಅನುವಾದಿತ ‘ನಮ್ಮಂಥ ಬಲ್ಲಿದವರು’, ಪ್ರೊ.ಎಚ್.ಟಿ. ಪೋತೆ ಅವರ ಪ್ರವಾಸ ಕಥನ ‘ಬಾಬಾ ಸಾಹೇಬರ ಲಂಡನ್’, ಪಾತಿಮಾ ರಲಿಯಾ ಅವರ ಕಥಾ ಸಂಕಲನ ‘ಒಡೆಯಲಾರದ ಒಡಪು’, ಸಂತೋಷ ನಾಯಕ ಅವರ ಕವನ ಸಂಕಲನ ‘ಹೊಸ ವಿಳಾಸದ ಹೆಜ್ಜೆಗಳು’ ಕೃತಿಗಳಿಗೆ ಪ್ರದಾನಿಸಿದರು.ಡಾ.ಸಿ. ಸೋಮಶೇಖರ್/ಶ್ರೀಮತಿ ಸರ್ವಮಂಗಳ ದತ್ತಿ ಪ್ರಶಸ್ತಿಯು ಇಂದಿರಾ ಕೃಷ್ಣಪ್ಪ ಅವರ ವ್ಯಕ್ತಿ ಚಿತ್ರಣ ‘ಸಾವಿತ್ರಿ ಬಾ ಪುಲೆ’, ಡಾ.ಎಂ.ಎಸ್. ಮಣಿ ಅವರ ಲೇಖನ ಸಂಕಲನ ‘ಗವಿಮಾರ್ಗ’ ಕೃತಿಗೆ ಲಭಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಮಾತನಾಡಿ, "ಸ್ವಾಭಿಮಾನಿ ವೇದಿಕೆ ಹಲವಾರು ವರ್ಷಗಳಿಂದ ಬಹಳಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಕನ್ನಡ ನಾಡು-ನುಡಿ, ಚಳುವಳಿಯನ್ನು ಒಳಗೊಂಡ ಹಾಗೆಯೇ, ಕೃತಿಗಳಿಗೆ ಕೂಡ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಇವರ ಕೆಲಸ ನಿಜಕ್ಕೂ ಶ್ಲಾಘನೀಯ" ಎಂದು ತಿಳಿಸಿದರು.ಇನ್ನೋರ್ವ ತೀರ್ಪುಗಾರರಾಗಿ ಕವಿ ಡಾ. ಸತ್ಯಮಂಗಲ ಮಹಾದೇವ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಹೆಚ್ ಜಯದೇವ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.