ಮಹಿಳೆಯರಿಗೆ ತಂತ್ರಜ್ಞಾನದ ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ಅವರೂ ಕೂಡಾ ತಾಂತ್ರಿಕವಾಗಿ ಸಾಕಷ್ಟು ತಿಳುವಳಿಕೆ ಹೊಂದಬೇಕು. ಇಲ್ಲವಾದಲ್ಲಿ ಅನಗತ್ಯ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಎದುರಾಗಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮೀ ಚೌಧರಿ ಹೇಳಿದರು. ಎಎಂಸಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪ್ರತಿಷ್ಠಿತ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಜೆಸ್ಕೇಲರ್ ಪ್ರಾಯೋಜಕತ್ವದೊಂದಿಗೆ ಸೈಬರ್ ದಾಳಿಗಳಿಂದ ಪಾರಾಗಲು ವಿಶಿಷ್ಟ ತಂತ್ರಜ್ಞಾನದೊಂದಿಗೆ ರೂಪಿಸಿರುವ ದೇಶದಲ್ಲೇ ಮೊಟ್ಟಮೊದಲ ವ್ಯವಸ್ಥೆಯಾದ ಕಾಪ್‌ಕನೆಕ್ಟ್ (ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ) ಎಂಬ ಸೈಬರ್ ಸೆಕ್ಯುರಿಟಿ ಕೆಫೆಯನ್ನು ಡಾ ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ವೈಯಕ್ತಿಕ ವಿವರ, ಪೋಟೋಗಳನ್ನ ಹಂಚಿಕೊಳ್ಳುವ ಮೊದಲು ಗಂಭೀರವಾಗಿ ಯೋಚಿಸಬೇಕು. ಇಂದು ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಂಡು ಅನೇಕ ಮಹಿಳೆಯರು ಹಾಗೂ ಮಕ್ಕಳನ್ನು ಗುರಿ ಮಾಡಿಕೊಳ್ಳುವ ಜಾಲವೇ ಬೆಳೆದುಬಿಟ್ಟಿದೆ. ಈ ಕಾರಣದಿಂದ ಸೈಬರ್ ಕ್ರೈಂಗೆ ಗುರಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಮಹಿಳೆಯರು ಇದನ್ನೆಲ್ಲಾ ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಿಲ್ಲ. ಮಹಿಳಾ ಆಯೋಗ ನಿಮ್ಮ ನೆರವಿಗಿದೆ. ಪೊಲೀಸ್ ಕೂಡಾ ನೆರವು ನೀಡ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಾಪ್ ಕನೆಕ್ಟ್ ನಂತಹ ಈ ಉಪಕ್ರಮ ಕೂಡಾ ನಿಮ್ಮನ್ನು ಎಚ್ಚರಿಸುವಲ್ಲಿ ಸಹಾಯ ಮಾಡಲಿದೆ. ಇಂಥಹ ಪ್ರಯತ್ನಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದು ತಿಳಿಸಿದರು.
ಎಎಂಸಿ ಸಂಸ್ಥೆಯ ನಿರ್ದೇಶಕರಾದ ಡಾ ಜಿ ಎನ್ ಮೋಹನ್ ಬಾಬು ಮಾತನಾಡಿ, ದಿನದಿಂದ ದಿನಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಜಾಗತಿಕವಾಗಿ ನೋಡಿದಾಗ ಕಳೆದ ಐದಾರು ವರ್ಷಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯೇ ಅತಿ ಹೆಚ್ಚಿರುವುದು. ಮುಂದಿನ ಇನ್ನೂ ಎರಡು ದಶಕಗಳ ಕಾಳ ಸೈಬರ್ ಕ್ರೈಂಗಳೇ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ. ಪ್ರಸ್ತುತ ಸರಿ ಸುಮಾರು 40 ಬಿಲಿಯನ್ ಉಪಕರಣಗಳು ಇಂಟರ್‌ನೆಟ್‌ಗೆ ಕನೆಕ್ಟ್ ಆಗಿವೆ. ಖಂಡ, ಖಂಡಗಳ ನಡುವೆಯೇ ಸೂಪರ್ ಇಂಟರ್ ನೆಟ್ ರಹದಾರಿ ನಿರ್ಮಿಸಿದೆ. ಇಂಥಹ ಸನ್ನಿವೇಶದಲ್ಲಿ ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳಲು ಎಐ ಅಪ್ಲಿಕೇಶನ್‌ಗಳ ಮೊರೆ ಹೋಗುವ ತುರ್ತು ಅಗತ್ಯವಿದೆ ಎಂದರು.
ಕಾಪ್ ಕನೆಕ್ಟ್ ಉಪಕ್ರಮದ ಕುರಿತಂತೆ ಮಾಹಿತಿ ಹಂಚಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ಡಾ ಕೆ. ಕುಮಾರ್ ಅವರು, ಇದೊಂದು ಸೈಬರ್ ಕುರಿತಾದ ಉಚಿತ ಕಾರ್ಯಕ್ರಮವಾಗಿದ್ದು, ಸೈಬರ್ ದಾಳಿಗಳ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿದೆ. ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಆಪ್ ವೊಂದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ಇನ್‌ಸ್ಟಾಲ್ ಮಾಡಿಕೊಂಡಲ್ಲಿ ನಿಮ್ಮ ಮೊಬೈಲ್‌ಗೆ ಯಾವುದಾದರು ಸೈಬರ್ ದಾಳಿಗಳಾದರೆ, ಅಪಾಯಕಾರಿ ಆಪ್‌ಗಳನ್ನ ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿದರೆ ಅದರಿಂದ ಇದು ರಕ್ಷಣೆ ನೀಡುತ್ತದೆ. ಈ ಆಪ್ ನೇರವಾಗಿ ಹಾಂಕ್ ಮಷೀನ್‌ಗೆ ಕನೆಕ್ಟ್ ಆಗಿದ್ದು, ಅದೇ ರೀತಿಯಲ್ಲಿ ಈ ತಂತ್ರಜ್ಞಾನವು ಕೂಡಾ ಅನಿರೀಕ್ಷಿತ ಸೈಬರ್ ದಾಳಿಗಳಿಂದ ಜನರನ್ನ ರಕ್ಷಿಸುತ್ತದೆ. ಹಣ ಪಾವತಿಸುವುದು, ಗೊತ್ತಿರದ ಆಪ್‌ಗಳ ಬಳಕೆಗೆ ಅನುಮತಿ ನೀಡುವುದು ಸೇರಿದಂತೆ ಅನೇಕ ವಿಷಯಗಳನ್ನ ಎಚ್ಚರಿಸುವ ಕೆಲಸವನ್ನ ಮಾಡುತ್ತದೆ. ಮುಖ್ಯವಾಗಿ ಜನ ಐಟಿ ಕಾಯ್ದೆಗಳ ಮೊರೆ ಹೋಗಬೇಕಾದದ್ದು ಅಗತ್ಯ. ಐಟಿ ಕಾಯ್ದೆ 2000ರ 66ಎ ಅನಿರೀಕ್ಷಿತ ಸೈಬರ್ ದಾಳಿಗಳಿಗೆ ನೆರವಾಗುವುದಲ್ಲದೆ, ಸೈಬರ್ ಅಪರಾಧಿಗಳನ್ನ ಶಿಕ್ಷಿಸುವಲ್ಲಿಯೂ ಸಹಾಯಕ್ಕೆ ಬರಲಿದೆ. ಒಟ್ಟಾರೆಯಾಗಿ ಎಎಂಸಿ ಸಂಸ್ಥೆಯು ಇಂಥದ್ದೊಂದು ವಿಶೇಷ ಉಪಕ್ರಮ ಆರಂಭಿಸಿದ್ದು, ಇದರ ಕಾರಣೀಕರ್ತರಾದ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ.ಆರ್. ಪರಮಹಂಸ ಮತ್ತು ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ರಾಹುಲ್ ಕಲ್ಲೂರಿ ಅವರ ಪ್ರಯತ್ನ ನೆನೆಯಲೇಬೇಕು ಎಂದು ತಿಳಿಸಿದರು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಸಿಇಒ ಸಂಜೀವ್ ಗುಪ್ತಾ, ಕಾಪ್‌ಕನೆಕ್ಟ್‌ನ ಸಂಸ್ಥಾಪಕ ನಿರ್ದೇಶಕರಾದ ಪಿ ಆನಂದ ನಾಯ್ಡು, ಜ಼ಿ ಸ್ಕೇಲರ್‌ನ ಮಾರ್ಕೆಟಿಂಗ್ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಕಾರ್ತಿಕ್ ಕಿಶೋರ್ ಉಪಸ್ಥಿತರಿದ್ದರು.