ಬೆಂಗಳೂರು: ನಗರದ ಲಿಸಾ ಸ್ಕೂಲ್ ಆಫ್ ಡಿಸೈನ್ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸಿದ ಫ್ರಾನ್ಸ್ ನ ಡಿಸೈನ್ ಸ್ಕೂಲ್ ನ ವಿದ್ಯಾರ್ಥಿಗಳು ದೇಶದ ಸಂಸ್ಕೃತಿ, ಪರಂಪರೆ ಮತ್ತು ಕಲೆಯನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾರತೀಯ ನಾರಿಯರಂತೆ ವಿದೇಶಿ ವಿದ್ಯಾರ್ಥಿಗಳು ಕೂಡ ಸೀರೆ, ಜುಬ್ಬಾ ಪೈಜಾಮಾ ಧರಿಸಿ ಮಿಂಚಿದರು.
ನಗರದ ಲಿಸಾ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಎಫ್‌ಬಿ ಡೈರೆಕ್ಟರ್ ಕ್ರಿಶ್ಚಿಯನ್, ಎರಡೂ ದೇಶಗಳ ಕಲೆಯನ್ನು ಪ್ರಸ್ತುಪಡಿಸುವ ಈ ವೇದಿಕೆಯನ್ನು ಅಭಿನಂದಿಸಿದರು. ಭಾರತದ ಸಂಸ್ಕೃತಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್ ನಲ್ಲಿರುವ ಲಿಸಾ ಸ್ಕೂಲ್ ಆಫ್ ಡಿಸೈನ್ ನಿರ್ದೇಶಕರಾದ ಬೆಂಜಮಿನ್, ಕರ್ನಾಟಕ ನಿಜಕ್ಕೂ ಸಂಸ್ಕೃತಿಯ ಆಗರ. ಇಲ್ಲಿ ಕೈಗೊಂಡ ಒಂದು ದಿನದ ಕಾರ್ಯಾಗಾರ, ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ ಹಾಗೂ ಮೈಸೂರು ಅರಮನೆ ಭೇಟಿ ನೀಡಿದ್ದು ನಿಜಕ್ಕೂ ಸಂತಸ ತಂದಿತು. ಇಂದಿನ ಸಾಂಸ್ಕೃತಿಕ ವೇದಿಕೆ ನಿಜಕ್ಕೂ ಮನಸ್ಸನ್ನು ಸೆಳೆಯಿತು ಎಂದು ಹೇಳಿದರು.
ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್ ನಿರ್ದೇಶಕ ಹಾಗೂ ಸಂಸ್ಥಾಪಕರಾದ ಅವಿ ಕೆಸ್ವಾನಿ ಮಾತನಾಡಿ, ಕಾಲೇಜು ಕಲಿಕೆಯ ವೇದಿಕೆ, ಇಲ್ಲಿ ಸಂಸ್ಕೃತಿಗಳ ಪರಿಚಯವಾಗಬೇಕು. ಆ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಹೀಗಾಗಿ ಈ ಮೂರು ದಿನಗಳಲ್ಲಿ ಭಾರತದ ಸಂಸ್ಕೃತಿಯನ್ನು ಫ್ರಾನ್ಸ್ ವಿದ್ಯಾರ್ಥಿಗಳಿಗೂ ತಲುಪಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಲಿಸಾ ಸ್ಕೂಲ್ ಆಫ್ ಡಿಸೈನ್ ನ ಇನ್ನೋರ್ವ ನಿರ್ದೇಶಕ ಹಾಗೂ ಸಂಸ್ಥಾಪಕರಾದ ಗಿರೀಶ್ ಕೆಸ್ವಾನಿ ಮಾತನಾಡಿ, ಲಿಸಾ ಸ್ಕೂಲ್ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ಸದಾ ಮುಂದು. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡಿದ್ದೇವೆ. ಅದಕ್ಕೆ ಪೂರಕವಾಗಿರುವ ವಾತಾವರಣವನ್ನು ನಾವು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್ ಲಿಸಾ ಸ್ಕೂಲ್ ಆಫ್ ಡಿಸೈನ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಲಿಸಾ ಸ್ಕೂಲ್ ಆಫ್ ಡಿಸೈನ್ ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.